ಪ್ರಧಾನ ಮಂತ್ರಿ ಬೆಳೆ ವಿಮೆ ಗಡುವು ಮುಗಿದರೂ ರೈತರಿಗೆ 3,000 ಕೋಟಿ ರೂ. ಪಾವತಿ ಬಾಕಿ!

Update: 2020-03-14 14:39 GMT

ಹೊಸದಿಲ್ಲಿ, ಮಾ.14: ಪ್ರಧಾನಮಂತ್ರಿ ಬೆಳೆವಿಮೆ ಯೋಜನೆಯಡಿ ರೈತರಿಗೆ 2018-19ರ ಸಾಲಿನಲ್ಲಿ ಇನ್ನೂ 3,001 ಕೋಟಿ ರೂ. ಪಾವತಿಸಲು ಸರಕಾರ ಬಾಕಿ ಇರಿಸಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಉತ್ತರದಲ್ಲಿ ತಿಳಿದುಬಂದಿದೆ ಎಂದು ವರದಿ ತಿಳಿಸಿದೆ.

 2018-19ರ ಮುಂಗಾರು ಅವಧಿಯ ಸುಗ್ಗಿಯ ಕಾಲ 2019ರ ಮೇ ತಿಂಗಳಿಗೆ ಅಂತ್ಯವಾಗಿದೆ. ಪ್ರಧಾನಮಂತ್ರಿ ಬೆಳೆವಿಮಾ ಯೋಜನೆಯ ಪ್ರಕಾರ ಸುಗ್ಗಿ ಮುಗಿದ 2 ತಿಂಗಳೊಳಗೆ ರೈತರ ವಿಮೆ ಹಣವನ್ನು ಪಾವತಿಸಬೇಕು. ಅಂದರೆ 2019ರ ಜುಲೈ ಒಳಗೆ ವಿಮೆ ಹಣ ಪಾವತಿಸಬೇಕಾಗಿತ್ತು. ಆದರೆ ಕೃಷಿ ಮತ್ತು ರೈತರ ಅಭಿವೃದ್ಧಿ ಇಲಾಖೆ ನೀಡಿದ ಮಾಹಿತಿಯಂತೆ, 2018-19ರ ಸಾಲಿನಲ್ಲಿ 21,250 ಕೋಟಿ ರೂ. ವಿಮೆ ಹಣ ಪಾವತಿಸಬೇಕಿದ್ದು 2020ರ ಫೆಬ್ರವರಿ 27ರವರೆಗೆ 18,249 ಕೋಟಿ ರೂ. ಮಾತ್ರ ಪಾವತಿಸಲಾಗಿದೆ. ಅಂದರೆ 14%ದಷ್ಟು ಅಥವಾ 3,001 ಕೋಟಿ ರೂ. ಮೊತ್ತ ಇನ್ನೂ ಪಾವತಿಗೆ ಬಾಕಿಯಿದೆ.

 2018-19ರ ಸಾಲಿನಲ್ಲಿ ಬೆಳೆ ವಿಮೆ ಯೋಜನೆಯಡಿ ವಿಮಾ ಸಂಸ್ಥೆಗಳು ಒಟ್ಟು 25,822 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಿದ್ದು ಇದರಲ್ಲಿ 16% (4,299 ಕೋಟಿ ರೂ) ಮೊತ್ತವನ್ನು ರೈತರು ಪಾವತಿಸಿದ್ದಾರೆ. ಉಳಿದ 21,523 ಕೋಟಿ ಮೊತ್ತವನ್ನು ಕೇಂದ್ರ ಸರಕಾರ ಹಾಗೂ ಸಂಬಂಧಿತ ರಾಜ್ಯ ಸರಕಾರ ಪಾವತಿಸುತ್ತದೆ. ಮಹಾರಾಷ್ಟ್ರದಲ್ಲಿ 4,407 ಕೋಟಿ ವಿಮೆ ಹಣ ಪಾವತಿಸಬೇಕಿದ್ದು ಇದರಲ್ಲಿ 4,398 ಕೋಟಿ ರೂ. ಪಾವತಿಸಲಾಗಿದೆ. ಗುಜರಾತ್ 100% ಪಾವತಿ ಮಾಡಿದೆ. ಆಂಧ್ರಪ್ರದೇಶದಲ್ಲಿ 1,112 ಕೋಟಿ ರೂ. ಪಾವತಿಸಬೇಕಿದ್ದು 875 ಕೋಟಿ ರೂ. ಬಾಕಿಯಿದೆ. ಮಧ್ಯಪ್ರದೇಶದಲ್ಲಿ 658 ಕೋಟಿ ರೂ.ಯಲ್ಲಿ ಒಂದು ಪೈಸೆ ಕೂಡಾ ಪಾವತಿಯಾಗಿಲ್ಲ. ರಾಜಸ್ತಾನ ಮತ್ತು ಜಾರ್ಖಂಡ್‌ನಲ್ಲಿ ಕ್ರಮವಾಗಿ 400 ಕೋಟಿ ರೂ. ಮತ್ತು 300 ಕೋಟಿ ರೂ. ಬಾಕಿಯಿದೆ. ಕೇಂದ್ರ ಅಥವಾ ರಾಜ್ಯ ಸರಕಾರಗಳು ತಮ್ಮ ಪಾಲಿನ ಪ್ರೀಮಿಯಂ ಪಾವತಿಸಲು ವಿಳಂಬ ಮಾಡಿದ ಕಾರಣ ವಿಮೆ ಹಣ ಪಾವತಿಸಲು ವಿಳಂಬವಾಗಿದೆ ಎಂಬುದು ವಿಮಾ ಸಂಸ್ಥೆಗಳ ಹೇಳಿಕೆ.

 ವಿಮಾ ಹಣ ಪಾವತಿಸಲು ನಾವು ಬದ್ಧರಾಗಿದ್ದೇವೆ. ಆದರೆ ಸರಕಾರದ ಕಂತು ಬಾರದಿದ್ದರೆ ಹೇಗೆ ಪಾವತಿಸುವುದು ಎಂದು ಖಾಸಗಿ ವಿಮಾ ಸಂಸ್ಥೆಗಳ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಆದರೆ ಕೇಂದ್ರ ಸರಕಾರ ರಾಜ್ಯ ಸರಕಾರಗಳನ್ನು ದೂರುತ್ತಿದೆ. ರಾಜ್ಯಗಳು ಸಕಾಲದಲ್ಲಿ ಪ್ರೀಮಿಯಂ ಪಾವತಿಸುತ್ತಿಲ್ಲ. ಉದಾಹರಣೆಗೆ ಮಧ್ಯಪ್ರದೇಶ 2018-19ರ ಸಾಲಿನ ಪ್ರೀಮಿಯಂ ಪಾವತಿಸಿಲ್ಲ ಎಂದು ಕೃಷಿ ಮತ್ತು ರೈತರ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ರಾಜ್ಯ ಸರಕಾರ ಕೇಂದ್ರದತ್ತ ಬೆಟ್ಟು ಮಾಡುತ್ತಿದೆ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ಅನುದಾನ ಸಕಾಲದಲ್ಲಿ ದೊರಕುತ್ತಿಲ್ಲ. ಫಿಸ್ಕಲ್ ರೆಸ್ಪಾನ್ಸಿಬಿಲಿಟಿ(ಹಣಕಾಸಿನ ಜವಾಬ್ದಾರಿ) ಕಾಯ್ದೆಯ ಕಾರಣದಿಂದ ಎಲ್ಲಾ ಯೋಜನೆಗಳನ್ನೂ ನಿರ್ವಹಿಸಲು ಹಣಕಾಸಿನ ಕೊರತೆ ಎದುರಾಗಿದೆ ಎಂದು ಮಧ್ಯಪ್ರದೇಶದ ಕೃಷಿ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

12% ಬಡ್ಡಿ ವಿಧಿಸುವ ಎಚ್ಚರಿಕೆ

ಅಂತಿಮ ದಿನಾಂಕದ 2 ತಿಂಗಳೊಳಗೆ ರೈತರಿಗೆ ಸಂಪೂರ್ಣ ವಿಮೆ ಮೊತ್ತ ಪಾವತಿಸದಿದ್ದರೆ ಬಾಕಿ ಉಳಿಸಿದ ಮೊತ್ತಕ್ಕೆ 12% ಬಡ್ಡಿ ಸೇರಿಸಿ ಪಾವತಿಸಬೇಕೆಂದು ಕೇಂದ್ರ ಸರಕಾರ 2018ರ ಸೆಪ್ಟೆಂಬರ್‌ನಲ್ಲಿ ಸೂಚಿಸಿತ್ತು. ಆದರೆ ಸರಕಾರ ಎಚ್ಚರಿಕೆ ಯಾವ ಪರಿಣಾಮವನ್ನೂ ಬೀರಿಲ್ಲ. ಅವಧಿ ಮುಗಿದ 7 ತಿಂಗಳ ಬಳಿಕವೂ ವಿಮಾ ಸಂಸ್ಥೆಗಳು 3001 ಕೋಟಿ ರೂ. ಪಾವತಿಗೆ ಬಾಕಿ ಇರಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News