ರಾಜ್ಯದಲ್ಲಿ ಹೊಸದಾಗಿ ಯಾವುದೇ ಕೊರೋನ ಪ್ರಕರಣ ದಾಖಲಾಗಿಲ್ಲ: ಸಚಿವ ಡಾ.ಕೆ. ಸುಧಾಕರ್

Update: 2020-03-14 17:08 GMT

ಬೆಂಗಳೂರು, ಮಾ.14: ರಾಜ್ಯದಲ್ಲಿ ಹೊಸದಾಗಿ ಯಾವುದೇ ಕೊರೋನ ಪ್ರಕರಣ ದಾಖಲಾಗಿಲ್ಲ. ಇದುವರೆಗೆ ಆರು ಜನರಿಗೆ ಪಾಸಿಟಿವ್ ರಿಪೋರ್ಟ್ ಬಂದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 590 ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನ ತಡೆಯುವ ನಿಟ್ಟಿನಲ್ಲಿ ಸರಕಾರ ಎ, ಬಿ ಹಾಗೂ ಸಿ ಎಂದು ವರ್ಗೀಕರಣ ಮಾಡಲಾಗುತ್ತಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೊರೋನ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಅವರನ್ನು ‘ಎ’ ಗುಂಪಿಗೆ ಸೇರಿಸಿ ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುವುದು ಎಂದರು.

‘ಬಿ’ ಗುಂಪಿನಲ್ಲಿ ಅಸ್ತಮಾ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿರುವವರು, ವಯೋವೃದ್ಧರನ್ನು ಗುರುತಿಸಿ ಅವರಿಗೆ ಮನೆಯಲ್ಲೆ ಚಿಕಿತ್ಸೆ ಕೊಡಿಸಲಾಗುವುದು. ‘ಸಿ’ ಗುಂಪಿನಲ್ಲಿ ಕೊರೋನ ಲಕ್ಷಣವಿಲ್ಲದಿದ್ದರೂ ವಿಶ್ವದ ಯಾವುದೆ ದೇಶದಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆ ನಡೆಸಲಾಗುವುದು ಎಂದು ಸುಧಾಕರ್ ಹೇಳಿದರು.

ರಾಜ್ಯದಲ್ಲಿ ಈವರೆಗೆ 1,09,132 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಪರೀಕ್ಷೆ ಮಾಡುವುದರಲ್ಲಿ ಇಡೀ ದೇಶದಲ್ಲಿ ನಾವು ಮುಂದಿದ್ದು, 731 ಜನರನ್ನು ಪರೀಕ್ಷೆ ಮಾಡಿದ್ದೇವೆ. ಇವತ್ತು ಒಂದೇ ದಿನದಲ್ಲಿ 92 ಜನರನ್ನು ಪರೀಕ್ಷೆ ಮಾಡಿದ್ದೇವೆ. ಒಟ್ಟಾರೆ 590 ಜನರಿಗೆ ನೆಗೆಟಿವ್ ಬಂದಿದೆ. ಬೇರೆಯವರ ರಿಪೋರ್ಟ್‌ಗಳನ್ನು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ಬೆಂಗಳೂರು ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ-7, ಬೆಂಗಳೂರಿನ ಆಯ್ದ ಆಸ್ಪತ್ರೆಗಳಲ್ಲಿ-2, ಹಾಸನ-4, ದಕ್ಷಿಣ ಕನ್ನಡ-7, ಬಳ್ಳಾರಿ-1, ಚಿಕ್ಕಮಗಳೂರು-2, ಕಲಬುರಗಿ-4, ಕೊಡಗು-1, ಉಡುಪಿ-2 ಹಾಗೂ ಬೀದರ್‌ನಲ್ಲಿ ಇಬ್ಬರನ್ನು ಐಸೋಲೇಟೆಡ್ ಮಾಡಲಾಗುತ್ತಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

ಕೊರೋನ ವೈರಸ್ ಸೋಂಕಿತರ ಸಂಖ್ಯೆ ನಿನ್ನೆಗೆ 6 ಇತ್ತು. ಇವತ್ತು ಒಂದು ಕೂಡ ಹೊಸ ಪ್ರಕರಣ ದೃಢಪಡದೆ ಇರುವುದು ನೆಮ್ಮದಿಯ ವಿಚಾರ. ಇದಕ್ಕಾಗಿ, ನಮ್ಮ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು, ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ರಾಜ್ಯದ ಜನತೆಯು ಮುಖ್ಯಮಂತ್ರಿ, ಆರೋಗ್ಯ ಸಚಿವರು ಮಾಡಿದ ಮನವಿಗೆ ಪೂರಕವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇವತ್ತು ಎಲ್ಲಿಯೂ ಹೊರಗೆ ಹೋಗದೆ ಮನೆಯಲ್ಲಿ ಕ್ಷೇಮವಾಗಿ ಇದ್ದಿದ್ದಕ್ಕೆ ಸರಕಾರದ ವತಿಯಿಂದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದು ಸುಧಾಕರ್ ಹೇಳಿದರು.

ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ, ಕೊರೋನ ವೈರಸ್ ಸೋಂಕಿತರ ಸಂಪೂರ್ಣ ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯನ್ನು ಸಜ್ಜುಗೊಳಿಸಲು ಬಯಸಿದ್ದು, ಈ ಸಂಬಂಧ ಶೀಘ್ರದಲ್ಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಆರೋಗ್ಯ ಇಲಾಖೆ ವತಿಯಿಂದ ಸ್ಥಾಪಿಸಲಾಗಿರುವ ಉಚಿತ ಸಹಾಯವಾಣಿ 104ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ನಾಗರಿಕರು ಕರೆ ಮಾಡಿ ಅಗತ್ಯ ಮಾಹಿತಿ ಪಡೆಯುತ್ತಿದ್ದಾರೆ ಎಂದು ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News