ಫಾರೂಕ್ ಅಬ್ದುಲ್ಲಾ ಜೊತೆ ತೆರೆಮರೆಯಲ್ಲಿ ಮಾತುಕತೆಗೆ ಯತ್ನ ನಡೆಸಿದ್ದ ಕೇಂದ್ರ?

Update: 2020-03-14 19:13 GMT

ಹೊಸದಿಲ್ಲಿ,ಮಾ.14: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರನ್ನು ಬಂಧಮುಕ್ತಗೊಳಿಸುವ ಮುನ್ನ ಅವರೊಂದಿಗೆ ರಹಸ್ಯ ಭೇಟಿಯ ಕೆಲವು ವಿವರಗಳನ್ನು ಬಹಿರಂಗಗೊಳಿಸಿರುವ ಸಂದರ್ಶನವೊಂದರಲ್ಲಿ ಮಾಜಿ ರಾ ಮುಖ್ಯಸ್ಥ ಎ.ಎಸ್.ದುಲತ್ ಅವರು,ತಾನು ಅಬ್ದುಲ್ಲಾರನ್ನು ಭೇಟಿಯಾಗಲು ಶ್ರೀನಗರಕ್ಕೆ ಪ್ರಯಾಣಿಸಿದ್ದೆ ಮತ್ತು ತನ್ನ ಭೇಟಿಗೆ ಕೇಂದ್ರ ಸರಕಾರವು ಹಸಿರು ನಿಶಾನೆಯನ್ನು ತೋರಿಸಿತ್ತು,ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿಯಿತ್ತು ಎಂದು ತಿಳಿಸಿದ್ದಾರೆ ಎಂದು thewire.in ಎಂದು ವರದಿ ಮಾಡಿದೆ. ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಬಂಧನದಲ್ಲಿದ್ದ ಅಬ್ದುಲ್ಲಾರನ್ನು ಮಾ.13ರಂದು ಬಿಡುಗಡೆಗೊಳಿಸಲಾಗಿದೆ.

ಸುದ್ದಿ ಜಾಲತಾಣ thewire.in ಗಾಗಿ ಕರಣ್ ಥಾಪರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಫೆ.12ರಂದು ತಾನು ಶ್ರೀನಗರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾರನ್ನು ಭೇಟಿಯಾಗಿದ್ದಾಗಿ ದುಲತ್ ತಿಳಿಸಿದ್ದಾರೆ. ದಶಕಗಳಿಂದಲೂ ಅಬ್ದುಲ್ಲಾಗೆ ಚಿರಪರಿಚಿತರಾಗಿರುವ ದುಲತ್ ಈ ಹಿಂದೆ ಕನಿಷ್ಠ ಎರಡು ಸಂದರ್ಭಗಳಲ್ಲಿ ಹಿಂದಿನ ಸರಕಾರಗಳ ಪರವಾಗಿ ಅವರೊಂದಿಗೆ ಸಂಧಾನಗಳನ್ನು ನಡೆಸಿದ್ದರು. ಸರಕಾರವು ಅಬ್ದುಲ್ಲಾರ ಮುಂದೆ ಪ್ರಸ್ತಾವವನ್ನು ಇರಿಸಿದರೆ ಅವರು ಅದಕ್ಕೆ ಪ್ರತಿಕ್ರಿಯಿಸುತ್ತಾರೆ ಮತ್ತು ಅವರು ಯಾವಾಗಲೂ ಹಾಗೆಯೇ ಮಾಡಿದ್ದಾರೆ ಎಂದು ದುಲತ್ ಹೇಳಿದ್ದಾರೆ.

ಶನಿವಾರ ರಾತ್ರಿ thewire.in ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿರುವ ಸಂದರ್ಶನದಲ್ಲಿ ಈ ರಹಸ್ಯ ಭೇಟಿ ಸಂಭವಿಸಿದ್ದು ಹೇಗೆ, ಕೇಂದ್ರ ಸರಕಾರದಿಂದ ತನಗೆ ಲಭಿಸಿದ್ದ ಅನುಮತಿ ಮತ್ತು ಬೆಂಬಲ ಹಾಗು ಶ್ರೀನಗರದಲ್ಲಿಯ ಗುಪ್ತಚರ ಸಂಸ್ಥೆ (ಐಬಿ) ಹೇಗೆ ತನ್ನೊಂದಿಗೆ ಸಹಕರಿಸಿತ್ತು ಎನ್ನುವ ಬಗ್ಗೆ ವಿವರಗಳನ್ನು ದುಲತ್ ಬಹಿರಂಗಗೊಳಿಸಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ 370ನೇ ವಿಧಿಯನ್ನು ಮೋದಿ ಸರಕಾರವು ರದ್ದುಗೊಳಿಸಿದ್ದ ಆ.5ರಂದು ಅಬುಲ್ಲಾರನ್ನು ದಿಗ್ಬಂಧನಕ್ಕೊಳಪಡಿಸಲಾಗಿತ್ತು. ಫಾರೂಕ್ ಅಬ್ದುಲ್ಲಾರ ಆರೋಗ್ಯ ವಿಚಾರಿಸಲು ಅಕ್ಟೋಬರ್ 31ರಂದು ತಾನು ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಅವರನ್ನು ಭೇಟಿಯಾಗಬಹುದೇ ಎಂದು ಕೇಳಿದ್ದೆ. ಅಧಿಕಾರಿಗಳು ಒಪ್ಪಿದರೆ ಬನ್ನಿ ಎಂದು ಅಬ್ದುಲ್ಲಾ ಉತ್ತರಿಸಿದ್ದರು. ಆದರೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಆದರೆ 2020ರ ಫೆಬ್ರವರಿ 9ರಂದು ಗೃಹ ಸಚಿವಾಲಯದಿಂದ ತನಗೆ ಕರೆ ಬಂದಿದ್ದು, ಕಾಶ್ಮೀರಕ್ಕೆ ತೆರಳಲು ಅನುಮತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕರೆಯ ಬಗ್ಗೆ ಭದ್ರತಾ ಸಲಹೆಗಾರ ಧೋವಲ್‌ಗೆ ತಿಳಿದಿತ್ತು ಎಂದು ದುಲತ್ ಹೇಳಿದ್ದಾರೆ. ಫೆ.12ರಂದು ತಾನು ಶ್ರೀನಗರಕ್ಕೆ ಖಾಸಗಿ ಭೇಟಿ ನೀಡಿದ್ದರೂ, ಶ್ರೀನಗರದಲ್ಲಿರುವ ಗುಪ್ತಚರ ಇಲಾಖೆಯು ತನಗೆ ಶ್ರೀನಗರ ವಿಮಾನನಿಲ್ದಾಣದಿಂದ ಗುಪ್‌ಕಾರ್ ರಸ್ತೆಯಲ್ಲಿರುವ ಅಬ್ದುಲ್ಲಾರ ನಿವಾಸದ ವರೆಗೆ ವಾಹನದ ವ್ಯವಸ್ಥೆ ಮಾಡಿತ್ತು. ಅಬ್ದುಲ್ಲಾರನ್ನು ಭೇಟಿಯಾಗಿ ಅಂದೇ ದಿಲ್ಲಿಗೆ ವಾಪಸಾಗಿದ್ದೆ. ದಿಲ್ಲಿಗೆ ಮರಳಿದ ಕೆಲ ಹೊತ್ತಿನ ಬಳಿಕ ಗೃಹ ಸಚಿವಾಲಯದಿಂದ ಕರೆ ಬಂದಿದ್ದು ಶ್ರೀನಗರದ ಪ್ರವಾಸದ ಬಗ್ಗೆ ವಿಚಾರಿಸಿದ್ದರು. ಅಬ್ದುಲ್ಲಾರನ್ನು ಭೇಟಿಯಾದ ಸಂದರ್ಭ ಅವರು, ತಮ್ಮ ಪುತ್ರ ಉಮರ್ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ವಿರುದ್ಧ ಪಿಎಸ್‌ಎ ಬಳಸಿರುವ ಬಗ್ಗೆ ತೀವ್ರ ಆತಂಕಿತರಾಗಿದ್ದರು. ಭಾರತದ ಬಗ್ಗೆ ತನಗೆ ಬದ್ಧತೆಯಿದೆ ಮತ್ತು ಮಕ್ಕಳನ್ನೂ ಇದೇ ರೀತಿ ಬೆಳೆಸಿದ್ದೇನೆ ಎಂದವರು ಹೇಳಿದ್ದರು. 370ನೇ ವಿಧಿ ರದ್ದತಿಯಿಂದ ಹಾಗೂ ಆ ಬಳಿಕ ಕಾಶ್ಮೀರದಲ್ಲಿ ಆಗಿರುವ ಬೆಳವಣಿಗೆ ತನ್ನ ಮೊಮ್ಮಕ್ಕಳ ಮೇಲೆ ಯಾವ ಪರಿಣಾಮ ಬೀರಿರಬಹುದು ಎಂಬ ಆತಂಕ ಅವರಲ್ಲಿತ್ತು ಎಂದು ದುಲತ್ ವಿವರಿಸಿದ್ದಾರೆ. ಕಾಶ್ಮೀರಕ್ಕೆ ಸಂಬಂಧಿಸಿ ಮುಂದೆ ಯಾವ ಕ್ರಮ ಕೈಗೊಳ್ಳಬಹುದು ಎಂದು ಅಜಿತ್ ಧೋವಲ್ ಕೇಳಿ ದರೆ, ಮಾತುಕತೆ ಎಂದು ಉತ್ತರಿಸುತ್ತೇನೆ. ಸರಕಾರ ಪ್ರಮುಖ ರಾಜಕೀಯ ಪಕ್ಷದೊಂದಿಗೆ ಹಾಗೂ ಮಿರ್ವೈಝ್ ಫಾರೂಕ್‌ರೊಂದಿಗೆ ಮಾತುಕತೆ ನಡೆಸಬೇಕು ಎಂದು ದುಲತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News