​ನಾಳೆಯೇ ಬಹುಮತ ಸಾಬೀತಿಗೆ ಮಧ್ಯಪ್ರದೇಶ ರಾಜ್ಯಪಾಲ ಸೂಚನೆ

Update: 2020-03-15 03:44 GMT
ಕಮಲ್‌ನಾಥ್

ಭೋಪಾಲ್: ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟು ಹೊಸ ತಿರುವು ಪಡೆದಿದ್ದು, ಸೋಮವಾರ (ಮಾರ್ಚ್ 16)ವೇ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಕಮಲ್‌ನಾಥ್ ಅವರಿಗೆ ರಾಜ್ಯಪಾಲ ಲಾಲ್‌ಜಿ ಟಂಡನ್ ಸೂಚನೆ ನೀಡಿದ್ದಾರೆ.

ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ತಕ್ಷಣ ಬಹುಮತ ಸಾಬೀತುಪಡಿಸಬೇಕು ಎಂದು ಶನಿವಾರ ತಡರಾತ್ರಿ ಆದೇಶ ನೀಡಿದ್ದಾರೆ. ಈ ಆದೇಶ ಪತ್ರವನ್ನು ಮುಖ್ಯಮಂತ್ರಿಗೆ ಮಧ್ಯರಾತ್ರಿ ಕಳುಹಿಸಲಾಗಿದೆ ಎಂದು ರಾಜಭವನ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

22 ಮಂದಿ ಶಾಸಕರು ತಮ್ಮ ರಾಜೀನಾಮೆಯನ್ನು ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್‌ ಅವರಿಗೆ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಕ್ಕೆ ಕೂಡಾ ಅವರು ಮಾಹಿತಿ ನೀಡಿದ್ದಾರೆ. ಈ ಕುರಿತ ಸುದ್ದಿಗಳನ್ನು ಗಮನವಿಟ್ಟು ಪರಿಶೀಲಿಸಿದ್ದೇನೆ ಎಂದು ಮಾರ್ಚ್ 14ರ ದಿನಾಂಕ ಇರುವ ಪತ್ರದಲ್ಲಿ ವಿವರಿಸಲಾಗಿದೆ.

2020ರ ಮಾರ್ಚ್ 10ರಂದು ಅವರು ನನಗೆ ಕೂಡಾ ಪ್ರತ್ಯೇಕವಾಗಿ ಪತ್ರ ಬರೆದು ಮಾರ್ಚ್ 13ರಂದು ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರಗಳನ್ನು ನೀಡಲು ಸೂಕ್ತ ಭದ್ರತೆ ಒದಗಿಸುವಂತೆಯೂ ಮನವಿ ಮಾಡಿದ್ದರು ಎಂದು ರಾಜ್ಯಪಾಲರು ಹೇಳಿದ್ದಾರೆ.

ಸಂವಿಧಾನದ 174 ಮತ್ತು 175(2) ವಿಧಿ ಅನ್ವಯ ಇರುವ ಅಧಿಕಾರವನ್ನು ಚಲಾಯಿಸಿ ಮಧ್ಯಪ್ರದೇಶ ವಿಧಾನಸಭೆ ಅಧಿವೇಶನವನ್ನು ಮಾರ್ಚ್ 16ರಂದು ಬೆಳಗ್ಗೆ 11 ಗಂಟೆಗೆ ಕರೆಯಲು ಸೂಚಿಸಿದ್ದೇನೆ. ನನ್ನ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ. ಅದಾದ ಬಳಿಕ ಇರುವ ಏಕೈಕ ಕೆಲಸವೆಂದರೆ ವಿಶ್ವಾಸಮತದ ಬಗೆಗಿನ ಮತದಾನ ಎಂದು ಪತ್ರದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News