ಕಳ್ಳತನ ಪ್ರಕರಣ: ಮೂವರ ಬಂಧನ, 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಜಪ್ತಿ

Update: 2020-03-16 12:31 GMT

ಮಡಿಕೇರಿ, ಮಾ.16: ಕಳೆದ ಮೂರು ವರ್ಷಗಳ ಅವಧಿಯಲ್ಲಿ 9 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪದ ಮೇಲೆ ಅಂತರ್ ಜಿಲ್ಲಾ ಚೋರ ಸೇರಿದಂತೆ ಮೂವರನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿ, ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.

ಕೊಡ್ಲಿಪೇಟೆ ಹೋಬಳಿಯ ಹಂಡ್ಲಿ ಸಮೀಪದ ಕಣಗಲ್ ನಾಕಲಗೂಡು ನಿವಾಸಿ ಸಣ್ಣಪ್ಪ ಕೆ.ಎನ್.ಯಾನೆ ಡೀಲಾಕ್ಷ ಯಾನೆ ಮಧು (45), ಕೊಡ್ಲಿಪೇಟೆ ಹೋಬಳಿಯ ಅವರೆದಾಳು ಗ್ರಾಮದ ಕುಶಾಲ್( 47) ಮತ್ತು ಸೋಮವಾರಪೇಟೆ ರೇಂಜರ್ ಬ್ಲಾಕ್ ನಿವಾಸಿ, ಕಾರ್ಪೋರೇಶನ್ ಬ್ಯಾಂಕ್ ಅಟೆಂಡರ್ ಗಣೇಶ್ ಪ್ರಸಾದ್ ಎಂ.ಎಸ್. (28) ಬಂಧಿತ ಆರೋಪಿಗಳು.

ಬಂಧಿತರಿಂದ 1.80 ಲಕ್ಷ ರೂ. ಮೌಲ್ಯದ 61.29 ಗ್ರಾಂ ಚಿನ್ನಾಭರಣ, 27 ಸಾವಿರ ರೂ. ನಗದು, 135.78 ಗ್ರಾಂ  ಬೆಳ್ಳಿಯ ಆಭರಣಗಳು ಹಾಗೂ  ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್ ಮತ್ತು ಸ್ಕ್ರೂ ಡ್ರೈವರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾರ್ವಜನಿಕರ ನಡುವೆಯೇ ಇದ್ದ ಚೋರ
ಪ್ರಕರಣದ ಪ್ರಮುಖ ಆರೋಪಿ ಸಣ್ಣಪ್ಪ ಸಾರ್ವಜನಿಕರ ನಡುವೆಯೇ ಓಡಾಡಿಕೊಂಡು ಯಾರೂ ಇಲ್ಲದ ಮನೆಗಳನ್ನು ಪತ್ತೆ ಮಾಡಿ ಹಗಲು ಹಾಗೂ ರಾತ್ರಿ ವೇಳೆಯಲ್ಲಿ ಕಳವು ಮಾಡುತ್ತಿದ್ದ. ಶನಿವಾರಸಂತೆ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಬೀಗ ಹಾಕಿದ ಮನೆಗಳನ್ನು ಆರೋಪಿತನು ಹೊಂಚು ಹಾಕಿ ನೋಡಿಕೊಂಡು ಬೀಗದ ಕೀ ಇಟ್ಟ ಜಾಗವನ್ನು ಗುರುತಿಸಿಕೊಂಡು ಮನೆಗಳಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿಟ್ಟಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದನೆಂದು ಎಸ್‍ಪಿ ತಿಳಿಸಿದರು.

ಕೊಡಗು, ಹಾಸನ, ಸಕಲೇಶಪುರ ಸೇರಿದಂತೆ ವಿವಿಧೆಡೆಗಳಲ್ಲಿ ಕಳವು ನಡೆಸಿದ್ದ ಸಣ್ಣಪ್ಪ ಮತ್ತು ಆತನ ಸಹವರ್ತಿಗಳ ಬಂಧನಕ್ಕೆ ರಚಿಸಲಾಗಿದ್ದ ಸೋಮವಾರಪೇಟೆ ಉಪ ವಿಭಾಗದ ವಿಶೇಷ ಪೊಲೀಸ್ ತಂಡವು ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರಮುಖ ಆರೋಪಿ ಸಣ್ಣಪ್ಪನನ್ನು ಸೋಮವಾರಪೇಟೆಯಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

34 ಕಳವು ಪ್ರಕರಣಗಳು
ಆರೋಪಿ ಸಣ್ಣಪ್ಪನ ಮೇಲೆ ಬೆಂಗಳೂರು, ಯಸಳೂರು, ಸಕಲೇಶಪುರ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಗಳಲ್ಲಿ 34 ಕಳುವು ಪ್ರಕರಣ ದಾಖಲಾಗಿದ್ದು, ಶನಿವಾರಸಂತೆ ಠಾಣೆಯ 9 ಕಳವು ಪ್ರಕರಣಗಳಲ್ಲಿ ಆರೋಪಿತನಿಗೆ ಸೋಮವಾರಪೇಟೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿತ್ತು. ಇನ್ನು ಹಲವು ಕಳವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಕಳವು ಪ್ರಕರಣಗಳಲ್ಲಿ ಆರೋಪಿ ಸಣ್ಣಪ್ಪ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ಮೇಲೆ ಸುಮಾರು 13 ದಸ್ತಗಿರಿ ವಾರೆಂಟ್ ಕೂಡ ಆಗಿರುತ್ತದೆ. ಆರೋಪಿತನು ಕಳುವು ಮಾಡಿದ ಚಿನ್ನಾಭರಣಗಳನ್ನು 3ನೇ ಆರೋಪಿ ಸೋಮವಾರಪೇಟೆ ಕಾರ್ಪೋರೇಶನ್ ಬ್ಯಾಂಕ್ ಅಟೆಂಡರ್ ಗಣೇಶ್ ಪ್ರಸಾದ್‍ಗೆ ಮಾರಾಟ ಮಾಡಿದ್ದು, ಆತನಿಂದ ಮಾಲನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಮಾಹಿತಿ ನೀಡಿ, ಆರೋಪಿ ಸಣ್ಣಪ್ಪನಿಂದ ಕಳವು ಮಾಲನ್ನು ಸ್ವೀಕರಿಸಿದ ಗಣೇಶ್ ಹಾಗೂ ಕುಶಾಲ್‍ರವರನ್ನು ಬಂಧಿಸಿ  ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಸ್‍ಪಿ ಡಾ.ಸುಮನ್ ಡಿ.ಪನ್ನೇಕರ್ ಹೇಳಿದರು. 

ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‍ಪಿ ಹೆಚ್.ಎಂ. ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಕುಶಾಲನಗರ ವೃತ್ತ ನಿರೀಕ್ಷಕ ಎಂ.ಮಹೇಶ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶನಿವಾರಸಂತೆ ಪೊಲೀಸ್ ಉಪನಿರೀಕ್ಷಕರಾದ ಕೃಷ್ಣ ನಾಯಕ್, ಸಿಬ್ಬಂದಿಗಳಾದ ಎಂ.ಎಸ್. ಬೋಪಣ್ಣ, ಎಸ್.ಸಿ. ಲೋಕೇಶ್, ಬಿ.ಡಿ. ಮುರಳಿ, ವಿನಯ್ ಕುಮಾರ್ ಮತ್ತು ಕುಶಾಲನಗರ ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಎಂ.ಎ. ಗೋಪಾಲ್, ಬಿ.ಎಸ್. ದಯಾನಂದ, ಟಿ.ಎಸ್.ಸಜಿ, ಸಿಪಿಐ ಕಚೇರಿಯ ಸಿಬ್ಬಂದಿ ಅನಂತ ಕುಮಾರ್, ಮಂಜುನಾಥ್ ಮತ್ತು ಕುಮಾರಸ್ವಾಮಿ ಹಾಗೂ ಕೊಡಗು ಜಿಲ್ಲಾ ಬೆರಳು ಮುದ್ರಾ ಘಟಕದ ಸಂತೋಷ್ ಹಾಗೂ ಮಡಿಕೇರಿ ಸಿ.ಡಿ.ಆರ್. ಸೆಲ್‍ನ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News