ಅರ್ಹರಿಗೆ ಸಾಲ ಸೌಲಭ್ಯ ಕಲ್ಪಿಸಲು ಬ್ಯಾಂಕರ್‌ಗಳ ಮನವೊಲಿಕೆ: ಸಚಿವ ಸೋಮಣ್ಣ

Update: 2020-03-16 13:00 GMT

ಬೆಂಗಳೂರು, ಮಾ. 16: ಅಂಬೇಡ್ಕರ್, ಬಸವ, ವಾಜಪೇಯಿ ವಸತಿ ಯೋಜನೆ ಅಡಿ ಅರ್ಹ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡಲು ಬ್ಯಾಂಕರ್‌ಗಳು ಮುಂದೆ ಬರುವಂತೆ ಮನವೊಲಿಕೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಳ್ಳಲು ಪಾವತಿಸಬೇಕಾದ ತಮ್ಮ ಪಾಲಿನ ಮೊತ್ತವನ್ನು ನೀಡಲು ಬ್ಯಾಂಕರ್ಸ್‌ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಉಡುಪಿ ಜಿಲ್ಲೆಯಲ್ಲಿ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯವನ್ನು ಫಲಾನುಭವಿಗಳಿಗೆ ಕಲ್ಪಿಸಿಕೊಡಲು ಶಾಸಕರು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ರಾಜ್ಯಾದ್ಯಂತ ಬ್ಯಾಂಕ್‌ಗಳಿಂದ ಫಲಾನುಭವಿಗಳಿಗೆ ಆರ್ಥಿಕ ನೆರವು ಕಲ್ಪಿಸಲು ಬ್ಯಾಂಕರ್‌ಗಳ ಮನವೊಲಿಸಲಾಗುವುದು ಎಂದು ಹೇಳಿದರು.

ವಿಸ್ತರಣೆ: ವಸತಿ ಯೋಜನೆ ಬ್ಲಾಕ್ ಆಗಿರುವ ಎಲ್ಲ ಮನೆಗಳನ್ನು ಅನ್‌ಬ್ಲಾಕ್ ಮಾಡಿ ತಿಂಗಳು ಕಾಲಾವಕಾಶ ನೀಡಿ ವಾಸ್ತವವಾಗಿ ಪ್ರಾರಂಭವಾಗಿರುವ ಮನೆಗಳನ್ನು ಜಿಪಿಎಸ್ ಆಧರಿತ ಛಾಯಾಚಿತ್ರ ತೆಗೆದು ಮನೆ ಕಾಮಗಾರಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶ ಮಾರ್ಚ್ ಅಂತ್ಯದ ವರೆಗೂ ವಿಸ್ತರಿಸಲಾಗಿದೆ. 2017ರಿಂದ ವಿವಿಧ ವಸತಿ ಯೋಜನೆಯಡಿ 9,55,943 ಮನೆಗಳನ್ನು ಮಂಜೂರು ಮಾಡಲಾಗಿದೆ. 3 ವರ್ಷಗಳಲ್ಲಿ ಸಾಕಷ್ಟು ಸಮಯಾವಕಾಶ ನೀಡಿದ್ದು ಪ್ರಾರಂಭಗೊಳ್ಳದ 2,74,253 ಮನೆಗಳನ್ನು ಬ್ಲಾಕ್ ಮಾಡಲಾಗಿತ್ತು. ಇದನ್ನು ತೆರವುಗೊಳಿಸಲಾಗಿದೆ ಎಂದರು.

183 ಕೋಟಿ ರೂ.ಬಿಡುಗಡೆ: ರಾಜ್ಯದಲ್ಲಿ 31 ಸಾವಿರ ಮನೆಗಳಿಗೆ 183 ಕೋಟಿ ರೂ.ಗಳು ಬಿಡುಗಡೆ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ, ಶಾಸಕ ಡಿ.ಎಸ್.ಹೂಲಗೇರಿ ಪರವಾಗಿ ಕಾಂಗ್ರೆಸ್‌ನ ಅಮರೇಗೌಡ ಬಯ್ಯೆಪುರ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News