ನಾಳೆಯೇ ವಿಶ್ವಾಸಮತಯಾಚನೆಗೆ ಕಮಲ್ ನಾಥ್ ಗೆ ರಾಜ್ಯಪಾಲರ ಆದೇಶ

Update: 2020-03-16 14:43 GMT

ಭೋಪಾಲ, ಮಾ.16: ಮಧ್ಯಪ್ರದೇಶ ವಿಧಾನಸಭೆಯ ಅಧಿವೇಶನವನ್ನು ಮಾರ್ಚ್ 26ರವರೆಗೆ ಮುಂದೂಡಿದ ಬೆನ್ನಲ್ಲೇ, ಮಂಗಳವಾರ(ಮಾ.17)ದಂದೇ ಬಹುಮತ ಸಾಬೀತುಪಡಿಸುವಂತೆ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ರಾಜ್ಯಪಾಲರು ಸೂಚಿಸಿದ್ದಾರೆ.

ಸೋಮವಾರ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಸದನ ಸಮಾವೇಶಗೊಂಡಿದ್ದು ಸದನವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ಲಾಲ್‌ಜಿ ಟಂಡನ್, ಕೊರೊನ ವೈರಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮಾರ್ಚ್ 26ರವರೆಗೆ ಮುಂದೂಡಲಾಗಿದೆ ಎಂದು ಹೇಳಿದ್ದರು. ಬಳಿಕ ಮುಖ್ಯಮಂತ್ರಿ ಕಮಲನಾಥ್‌ಗೆ ಪತ್ರ ಬರೆದಿರುವ ರಾಜ್ಯಪಾಲರು, ಮಾರ್ಚ್ 17ರ ಒಳಗೆ ಸದನದಲ್ಲಿ ವಿಶ್ವಾಸಮತ ಯಾಚಿಸದಿದ್ದರೆ ನೀವು ಬಹುಮತ ಕಳೆದುಕೊಂಡಿದ್ದೀರಿ ಎಂದು ಭಾವಿಸಲಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ಸೋಮವಾರವೇ ಬಹುಮತ ಸಾಬೀತುಪಡಿಸಲು ಸ್ಪೀಕರ್‌ಗೆ ಈ ಹಿಂದೆ ಸೂಚಿಸಿರುವುದು ಅಸಾಂವಿಧಾನಿಕ ಮತ್ತು ಅರ್ಥಹೀನ ಎಂಬ ಕಮಲನಾಥ್ ಟೀಕೆಯನ್ನು ರಾಜ್ಯಪಾಲರು ಆಕ್ಷೇಪಿಸಿದ್ದಾರೆ. ಬೆಳಿಗ್ಗೆ ಸ್ಪೀಕರ್ ಸದನಕ್ಕೆ ಆಗಮಿಸಿದಾಗ ಮುಖಕ್ಕೆ ಮಾಸ್ಕ್ ಧರಿಸಿಕೊಂಡಿದ್ದ ಮುಖ್ಯಮಂತ್ರಿ ಕಮಲನಾಥ್ ಹಾಗೂ ಕಾಂಗ್ರೆಸ್ ಸದಸ್ಯರು ಅವರನ್ನು ಸ್ವಾಗತಿಸಿದರು. ಆದರೆ ಬಿಜೆಪಿ ಸದಸ್ಯರು ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ.

ಮಧ್ಯಪ್ರದೇಶದಲ್ಲಿ ಸೋಮವಾರ ನಡೆದ ರಾಜಕೀಯ ವಿದ್ಯಮಾನಗಳ ಸಾರಾಂಶ ಹೀಗಿದೆ:

► ವಿಧಾನಸಭೆಯಲ್ಲಿ ಬಜೆಟ್ ಭಾಷಣದ ಕೊನೆಯ ಪುಟವನ್ನು ಮಾತ್ರ ಓದಿದ ರಾಜ್ಯಪಾಲ ಲಾಲ್ಜಿ ಟಂಡನ್, ಸಂವಿಧಾನದ ನಿಯಮವನ್ನು ಎಲ್ಲರೂ ಪಾಲಿಸಿ ಮಧ್ಯಪ್ರದೇಶದ ಘನತೆಯನ್ನು ರಕ್ಷಿಸಬೇಕು ಎಂದು ಚುಟುಕು ಭಾಷಣ ಮಾಡಿ ಸದನದಿಂದ ನಿರ್ಗಮಿಸಿದರು.

► ರಾಜ್ಯಪಾಲರ ಭಾಷಣ ಮುಗಿಯುತ್ತಿದ್ದಂತೆಯೇ ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದು ಬಿಜೆಪಿ ಸದಸ್ಯರು ಘೋಷಣೆ ಕೂಗಲಾರಂಭಿಸಿದರು. ಎಲ್ಲಾ ಶಾಸಕರು ಸದನದಲ್ಲಿ ಹಾಜರಿದ್ದರೆ ಮಾತ್ರ ವಿಶ್ವಾಸಮತ ಯಾಚನೆ ನಡೆಯಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

► ಸಚಿವ ಡಾ ಗೋವಿಂದ್ ಸಿಂಗ್, ಕೊರೊನ ವೈರಸ್ ಭೀತಿಯ ಕಾರಣ ಸದನವನ್ನು ಮಾರ್ಚ್ 26ರವರೆಗೆ ಮುಂದೂಡುವ ನಿರ್ಣಯ ಮಂಡಿಸಿದರು. ಕಾಂಗ್ರೆಸ್ ಶಾಸಕರು ಅದನ್ನು ಬೆಂಬಲಿಸಿದ ಬಳಿಕ ಸ್ಪೀಕರ್, ಸದನವನ್ನು ಮುಂದೂಡಿರುವುದಾಗಿ ಘೋಷಿಸಿದರು. ಕಾಂಗ್ರೆಸ್ ಸದಸ್ಯರೂ ಸದನದಿಂದ ಹೊರಗೆ ನಡೆದಾಗ ಬಿಜೆಪಿ ಸದಸ್ಯರಿಂದ ‘ಹಮ್ ಹೋಂಗೆ ಕಾಮ್‌ಯಾಬ್’ ಎಂಬ ಘೋಷಣೆ.

► ಈಗ ಕೊರೊನಾ ಕೂಡಾ ಕಮಲನಾಥ್ ಸರಕಾರವನ್ನು ರಕ್ಷಿಸದು. ಅವರು ಬಹುಮತ ಕಳೆದುಕೊಂಡಿರುವುದು ಸ್ಪಷ್ಟವಾಗಿರುವುದರಿಂದ ವಿಶ್ವಾಸಮತ ಯಾಚನೆಗೆ ಹಿಂಜರಿಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಶಿವರಾಜ್ ಚೌಹಾಣ್ ಹೇಳಿಕೆ.

► 12 ಗಂಟೆಯೊಳಗೆ ರಾಜ್ಯ ಸರಕಾರ ವಿಶ್ವಾಸಮತ ಯಾಚಿಸುವಂತೆ ನಿರ್ದೇಶಿಸಬೇಕು ಎಂದು ಒತ್ತಾಯಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಿಜೆಪಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News