ಆದಿತ್ಯನಾಥ್ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಪೋಸ್ಟರ್: ಕಾಂಗ್ರೆಸ್ ಕಾರ್ಯಕರ್ತರ ಬಂಧನ

Update: 2020-03-16 18:03 GMT

ಲಕ್ನೋ,ಮಾ.16: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮತ್ತು ಇತರ ಬಿಜೆಪಿ ನಾಯಕರನ್ನು ದಂಗೆಕೋರರು ಎಂದು ಬಿಂಬಿಸಿ ಪೋಸ್ಟರ್‌ಗಳನ್ನು ಅಂಟಿಸಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತ ರಾದ ಸುಧಾಂಶು ಬಾಜಪೈ ಮತ್ತು ಅಶ್ವಿನಿ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ್ದ 53 ಜನರ ಹೆಸರು,ವಿಳಾಸ ಮತ್ತು ಭಾವಚಿತ್ರಗಳ ಸಹಿತ ಹೋರ್ಡಿಂಗ್‌ಗಳನ್ನು ಜಿಲ್ಲಾಡಳಿತವು ಸ್ಥಾಪಿಸಿದ್ದಕ್ಕೆ ಉತ್ತರವಾಗಿ ಈ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಬಿಜೆಪಿ ಕೇಂದ್ರ ಕಚೇರಿಯ ಹೊರಗೆ ಈ ಪೋಸ್ಟರ್‌ಗಳನ್ನು ಅಂಟಿಸಿದ್ದರು.

ಸಿಸಿಟಿವಿ ಪೂಟೇಜ್‌ನ ಆಧಾರದಲ್ಲಿ ಶನಿವಾರ ಪೊಲೀಸರು ಬಾಜಪೈ ಮತ್ತು ಅಶ್ವಿನಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಪೋಸ್ಟರ್‌ಗಳಲ್ಲಿ ಕಡ್ಡಾಯವಾಗಿರಬೇಕಾದ ಪ್ರಕಾಶಕರ ಹೆಸರು ಇಲ್ಲ,ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ದಿನೇಶ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು. ಐಪಿಸಿಯ ವಿವಿಧ ಕಲಮ್‌ಗಳು ಮತ್ತು ಪಿಆರ್‌ಬಿ ಕಾಯ್ದೆಯಡಿಯೂ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ ಎಂದರು.

ಪೋಸ್ಟರ್‌ಗಳು ಬಿಜೆಪಿ ನಾಯಕರ ಚಿತ್ರಗಳು ಮತ್ತು ಆದಿತ್ಯನಾಥ ಹಾಗೂ ವೌರ್ಯ ಚುನಾವಣಾ ಅಫಿಡವಿಟ್‌ಗಳಲ್ಲಿ ಉಲ್ಲೇಖಿಸಿರುವ ಕ್ರಿಮಿನಲ್ ಪ್ರಕರಣಗಳ ಪಟ್ಟಿಯನ್ನು ಒಳಗೊಂಡಿದ್ದವು. ‘ ಈ ದಂಗೆಕೋರರಿಂದ ಯಾವಾಗ ನಷ್ಟವನ್ನು ವಸೂಲು ಮಾಡಲಾಗುತ್ತದೆ? ಜನರಿಗೆ ಉತ್ತರಗಳು ಬೇಕಿವೆ ’ಎಂಬ ಒಕ್ಕಣೆಯೂ ಪೋಸ್ಟರ್‌ಗಳಲ್ಲಿತ್ತು.

 ಆದಿತ್ಯನಾಥ್ ಅವರು ಗೋರಖಪುರ ದಂಗೆಗಳ ಮತ್ತು ಇತರ ಐದು ಗಂಭೀರ ಪ್ರಕರಣಗಳ ಮುಖ್ಯ ಆರೋಪಿಗಳಲ್ಲೋರ್ವರಾಗಿದ್ದಾರೆ . ಮೌರ್ಯ ಕೂಡ ದಂಗೆಗಳ ಆರೋಪಿಯಾಗಿದ್ದು,ಹಾಲಿ ಕೌಶಾಂಬಿಯಲ್ಲಿ 11 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಪೋಸ್ಟರ್‌ಗಳಲ್ಲಿ ಆರೋಪಿಸಿಲಾಗಿತ್ತು. 2013ರ ಮುಝಫ್ಫರ್‌ನಗರ ಕೋಮು ದಂಗೆಗಳ ಸಂದರ್ಭದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಬಿಜೆಪಿ ನಾಯಕರಾದ ಸಂಗೀತ ಸೋಮ್, ಸುರೇಶ ರಾಣಾ,ಸಂಜೀವ ಬಲ್ಯಾನ್,ಸಾಧ್ವಿ ಪ್ರಾಚಿ ಮತ್ತು ಉಮೇಶ ಮಲಿಕ್ ಅವರನ್ನೂ ಪೋಸ್ಟರ್ ‌ಗಳಲ್ಲಿ ಉಲ್ಲೇಖಿಸಲಾಗಿತ್ತು.

ಬಿಜೆಪಿಯು ಭಿನ್ನಾಭಿಪ್ರಾಯವನ್ನು ದಮನಿಸುತ್ತಿದೆ ಮತ್ತು ಪ್ರತೀಕಾರದ ರೀತಿಯಲ್ಲಿ ಬಂಧನಗಳು ನಡೆಯುತ್ತಿವೆ ಎಂದು ಆರೋಪಿಸಿದ ರಾಜ್ಯ ಕಾಂಗ್ರೆಸ್ ವರಿಷ್ಠ ಅಜಯಕುಮಾರ ಲಲ್ಲು ಅವರು,ಈ ಸರಕಾರವು ಕಾನೂನಿನ ಆಡಳಿತವನ್ನು ಅನುಸರಿಸುತ್ತಿಲ್ಲ. ಪೋಸ್ಟರ್‌ಗಳಿಂದಲೇ ಇಷ್ಟೊಂದು ಸಿಟ್ಟಿಗೆದ್ದರೆ ಅಕ್ರಮ ಚಟುವಟಿಕೆಗಳೇನಾದರೂ ಜನತೆಯ ಮುಂದೆ ಬಹಿರಂಗಗೊಂಡರೆ ಏನಾಗಬಹುದು ಎಂದು ಊಹಿಸಿ ಎಂದು ಹೇಳಿದರು.

ತನ್ನ ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಕಾಂಗ್ರೆಸ್ ಇಲ್ಲಿಯ ಗಾಂಧಿ ಪ್ರತಿಮೆ ಪ್ರದೇಶದಲ್ಲಿ ಪ್ರತಿಭಟನೆಯನ್ನೂ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News