ಸುಟ್ಟು ಕರಕಲಾದ ಮೃತದೇಹದ ಡಿಎನ್‌ಎ ಪರೀಕ್ಷೆ ವಿಳಂಬ: ದಿಲ್ಲಿ ಸರಕಾರ, ಎಫ್‌ಎಸ್‌ಎಲ್‌ಗೆ ಹೈಕೋರ್ಟ್ ತರಾಟೆ

Update: 2020-03-19 17:26 GMT

ಹೊಸದಿಲ್ಲಿ, ಮಾ. 18: ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ 26ರಂದು ನಡೆದ ಹಿಂಸಾಚಾರದ ಸಂದರ್ಭ ಕಾರಿನೊಂದಿಗೆ ಪತ್ತೆಯಾದ ಸುಟ್ಟುಕರಕಲಾದ ಯುವಕನ ಮೃತದೇಹದ ಡಿಎನ್‌ಎ ಮಾದರಿಯ ಪರೀಕ್ಷೆ ನಡೆಸದ ದಿಲ್ಲಿ ಸರಕಾರ ಹಾಗೂ ರೋಹಿಣಿಯ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ವನ್ನು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ತರಾಟೆಗೆ ತೆಗೆದುಕೊಂಡಿದೆ.

ಮೃತಪಟ್ಟ ಯುವಕನ ತನ್ನ ಪುತ್ರ ಮೊಹ್ಸಿನ್ ಎಂದು ಸಾಜಿದ್ ಅಲಿ ಎಂಬವರ ಪ್ರತಿಪಾದಿಸಿದ್ದರು. ಇದನ್ನು ಸಾಬೀತುಪಡಿಸುವ ಉದ್ದೇಶದಿಂದ ಸಾಜಿದ್ ಅಲಿ ಹಾಗೂ ಅವರ ಪತ್ನಿಯ ಡಿಎನ್‌ಎ ಮಾದರಿ ಪಡೆಯಲಾಗಿತ್ತು. ಆದರೆ, ನ್ಯಾಯಾಲಯದ ಅನುಮತಿ ದೊರೆತಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಕಳೆದ ಎರಡು ವಾರದಿಂದ ಡಿಎನ್‌ಎ ಮಾದರಿಯನ್ನು ಪರೀಕ್ಷೆ ನಡೆಸಿಲ್ಲ.

ಇಂತಹ ಅನುಮತಿ ಪಡೆಯಬೇಕೆಂಬ ನಿಯಮ ಇದೆಯೇ ಎಂದು ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನವೀನ್ ಚಾವ್ಲಾ ದಿಲ್ಲಿ ಸರಕಾರದ ಪರ ವಕೀಲರನ್ನು ಪ್ರಶ್ನಿಸಿದ್ದಾರೆ. ಆದರೆ, ದಿಲ್ಲಿ ಸರಕಾರ ಇಲ್ಲ ಎಂದು ಹೇಳಿತು. ಇದಕ್ಕೆ ಚಾವ್ಲಾ ಇದು ಸ್ವೀಕಾರಾರ್ಹವಲ್ಲ ಹೇಳಿದರು.

ಡಿಎನ್‌ಎ ಹೋಲಿಕೆ ಪರೀಕ್ಷೆ ತ್ವರಿತವಾಗಿ ನಡೆಸುವಂತೆ ಹಾಗೂ ಅದರ ವರದಿ ಸಲ್ಲಿಸುವಂತೆ ದಿಲ್ಲಿ ಸರಕಾರ ಹಾಗೂ ರೋಹಿಣಿಯ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ಕ್ಕೆ ನಿರ್ದೇಶ ನೀಡುವಂತೆ ಕೋರಿ ಸಾಜಿದ್ ಅಲಿ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಅವರು ಈ ಆದೇಶ ನೀಡಿದ್ದಾರೆ.

ಡಿಎನ್‌ಎ ಪರೀಕ್ಷೆಗೆ ಆದೇಶ ಪಡೆಯಲು ಕಾನೂನಿನಲ್ಲಿ ಯಾವುದೇ ನಿಯಮ ಇಲ್ಲದೆ ಇರುವಾಗ ನ್ಯಾಯಾಲಯದ ಆದೇಶಕ್ಕೆ ಕಾಯುವ ಮೂಲಕ ಪರೀಕ್ಷೆ ನಡೆಸುವುದನ್ನು ವಿಳಂಬ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಚಾವ್ಲಾ ಹೇಳಿದ್ದಾರೆ.

ಪ್ರತಿ ಪ್ರಕರಣಗಳಲ್ಲಿ ತುರ್ತಾಗಿ ಕಾರ್ಯ ನಿರ್ವಹಿಸಿ. ಯಾವುದೇ ನ್ಯಾಯಾಲಯದ ಆದೇಶಕ್ಕಾಗಿ ಕಾಯದೆ ಇಂತಹ ಪರೀಕ್ಷೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಚಾವ್ಲಾ ಆದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News