ಎಲ್ಲ ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರ: ಪತನದಂಚಿನಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ

Update: 2020-03-20 07:14 GMT

ಭೋಪಾಲ್, ಮಾ.20: ತಡರಾತ್ರಿ ರಾಜಕೀಯ ಬೆಳವಣಿಗೆಯಲ್ಲಿ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿಯವರು 16 ಮಂದಿ ಬಂಡಾಯ ಕಾಂಗ್ರೆಸ್ ಶಾಸಕರ ರಾಜೀನಾಮೆ ಅಂಗೀಕರಿಸಿದ್ದಾರೆ. ಇದರಿಂದಾಗಿ, ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಎಲ್ಲ 22 ಅನುಯಾಯಿಗಳ ರಾಜೀನಾಮೆ ಆಂಗೀಕಾರವಾದಂತಾಗಿದೆ. ಎಲ್ಲ 22 ಶಾಸಕರು ಮಾರ್ಚ್ 9ರಿಂದೀಚೆಗೆ ಬೆಂಗಳೂರಿನ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿದ್ದಾರೆ.

ಈ ಮಧ್ಯೆ ಶುಕ್ರವಾರ ಸಂಜೆ 5 ಗಂಟೆ ಒಳಗಾಗಿ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಮಲ್‌ನಾಥ್ ಸರ್ಕಾರ ಅಪರಾಹ್ನ 2 ಗಂಟೆಗೆ ವಿಶ್ವಾಸಮತ ಯಾಚಿಸಲು ನಿರ್ಧರಿಸಿದೆ.

ಶಾಸಕರ ರಾಜೀನಾಮೆ ಅಂಗೀಕಾರದ ಬಳಿಕ ಸದನದ ಬಲ 206ಕ್ಕೆ ಕುಸಿದಿದೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷ 92 ಶಾಸಕರನ್ನು ಹೊಂದಿದ್ದು, ಮಿತ್ರಪಕ್ಷಗಳ ಏಳು ಶಾಸಕರು ಸರ್ಕಾರವನ್ನು ಬೆಂಬಲಿಸಿದ್ದಾರೆ. ಆದರೆ ಸರಳ ಬಹುಮತಕ್ಕೆ 104 ಶಾಸಕರ ಅಗತ್ಯವಿದ್ದು, ಐದು ಶಾಸಕರ ಕೊರತೆ ಆಡಳಿತ ಪಕ್ಷಕ್ಕೆ ಎದುರಾಗಿದೆ. ಇದರಿಂದ ಕಮಲ್‌ನಾಥ್ ಸರ್ಕಾರ ಪತನದ ಅಂಚಿಗೆ ಬಂದಿದೆ. 107 ಶಾಸಕರನ್ನು ಹೊಂದಿರುವ ಬಿಜೆಪಿ ಅಗತ್ಯಕ್ಕಿಂತ ಮೂರು ಹೆಚ್ಚುವರಿ ಸದಸ್ಯಬಲ ಹೊಂದಿದೆ.

ಗುರುವಾರ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನುಸಾರ ಮಾರ್ಚ್ 10ರಿಂದ ಪೂರ್ವಾನ್ವಯವಾಗುವಂತೆ ಶಾಸಕರ ರಾಜೀನಾಮೆ ಆಂಗೀಕರಿಸಲಾಗಿದೆ ಎಂದು ಸ್ಪೀಕರ್ ಹೇಳಿದ್ದಾರೆ. ಸಂವಿಧಾನ ಮೌನವಿದ್ದಾಗ ಶಾಸಕಾಂಗ, ನ್ಯಾಯಾಂಗವನ್ನು ಅನುಸರಿಸುತ್ತದೆ ಎಂದು ಅವರು ಹೇಳಿದ್ದಾರೆ. ಸುಪ್ರೀಂ ನಿರ್ದೇಶನದಂತೆ ವಿಶ್ವಾಸಮತ ಯಾಚನೆಗೆ ಶುಕ್ರವಾರ ಸದನದ ಕಲಾಪ ನಡೆಸಲಾಗುತ್ತದೆಯೇ ಎಂಬ ಪ್ರಶ್ನೆಗೆ, ಕಾದು ನೋಡಿ ಎಂದು ಸ್ಪೀಕರ್ ಉತ್ತರಿಸಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಶುಕ್ರವಾರ ಸದನದಲ್ಲಿ ಕಡ್ಡಾಯ ಹಾಜರಾಗುವಂತೆ ಶಾಸಕರಿಗೆ ವಿಪ್ ನೀಡಿದ್ದರೂ, ಗುರುವಾರ ತಡರಾತ್ರಿವರೆಗೂ ಸದನದ ಕಲಾಪ ಪಟ್ಟಿಯನ್ನು ಸರ್ಕಾರ ಪ್ರಕಟಿಸಿಲ್ಲ. ಮಾರ್ಚ್ 16ರಂದು ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದರೂ ಕಮಲ್‌ನಾಥ್ ಸರ್ಕಾರ ವಿಶ್ವಾಸಮತ ಯಾಚನೆಗೆ ನಿರಾಕರಿಸಿತ್ತು. ಕಳೆದ ಸೋಮವಾರ ಸ್ಪೀಕರ್ ಸದನವನ್ನು ಮಾರ್ಚ್ 26ರವರೆಗೆ ಮುಂದೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News