2 ತಿಂಗಳ ಹಿಂದೆ ರಂಜನ್ ಗೊಗೊಯಿ ಸಹೋದರನನ್ನು ಈಶಾನ್ಯ ಮಂಡಳಿಗೆ ನೇಮಕಗೊಳಿಸಿದ್ದ ಸರಕಾರ

Update: 2020-03-21 09:45 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಸರಕಾರ ರಾಜ್ಯಸಭೆಗೆ ನಾಮಕರಣಗೊಳಿಸುವ ಎರಡು ತಿಂಗಳ ಹಿಂದೆ ಅವರ ಸೋದರ, ನಿವೃತ್ತ ಏರ್ ಮಾರ್ಷಲ್ ಅಂಜನ್ ಕುಮಾರ್ ಗೊಗೊಯಿ ಅವರನ್ನು ಭಾರತ ಸರಕಾರ ಈಶಾನ್ಯ ಮಂಡಳಿ (ನಾರ್ತ್ ಈಸ್ಟರ್ನ್ ಕೌನ್ಸಿಲ್) ಸದಸ್ಯರನ್ನಾಗಿ ನೇಮಕಗೊಳಿಸಿತ್ತು.

ದೇಶದ ಈಶಾನ್ಯ ರಾಜ್ಯಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕುರಿತಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡುವ ಅಧಿಕಾರ ಹೊಂದಿರುವ ಸಲಹಾ ಸಂಸ್ಥೆಯಾಗಿರುವ ನಾರ್ತ್ ಈಸ್ಟರ್ನ್ ಕೌನ್ಸಿಲ್‍ ಗೆ ಅಂಜನ್ ಗೊಗೊಯಿ ಅವರ ನೇಮಕಾತಿ ಅವಧಿ ಮೂರು ವರ್ಷಗಳಾಗಿವೆ. ರಂಜನ್ ಗೊಗೊಯಿ ಅವರನ್ನು ರಾಜ್ಯಸಭೆಗೆ ನಾಮಕರಣಗೊಳಿಸಿರುವ ಕ್ರಮ ಈಗಾಗಲೇ ವಿಪಕ್ಷಗಳಿಂದ ಭಾರೀ ಟೀಕೆಗೊಳಗಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಪರಮ ವಿಶಿಷ್ಟ ಸೇವಾ ಪದಕ ಹಾಗೂ ಅತಿ ವಿಶಿಷ್ಟ್ ಸೇವಾ ಪದಕ ಪಡೆದಿರುವ ಅಂಜನ್ ಕುಮಾರ್ ಗೊಗೊಯಿ ಕೌನ್ಸಿಲ್ ಸದಸ್ಯರಾಗಿ ಹಲವಾರು ಸವಲತ್ತುಗಳಿಗೆ ಅರ್ಹರಾಗಿದ್ದಾರೆ.

ಈ ಕೌನ್ಸಿಲ್ ಸದಸ್ಯರು ಭಾರತ ಸರಕಾರದಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿರುವವರಿಗೆ ಸಮಾನ ವೇತನ  ಮತ್ತಿತರ  ಸವಲತ್ತುಗಳನ್ನು ಪಡೆಯುತ್ತಾರೆ. ಸರಕಾರದ ಕಾರ್ಯದರ್ಶಿಯೊಬ್ಬರು ತರ ಸವಲತ್ತುಗಳನ್ನು ಹೊರತುಪಡಿಸಿ ಮಾಸಿಕ ರೂ. 2.25 ಲಕ್ಷ ಗಳಿಸುತ್ತಾರೆ.

ನಾರ್ತ್ ಈಸ್ಟರ್ನ್ ಕೌನ್ಸಿಲ್‍ ನಲ್ಲಿ ಒಟ್ಟು ಮೂವರು ಸದಸ್ಯರಿದ್ದು, ಅವರ ಪೈಕಿ ಕೇಂದ್ರ ಈಶಾನ್ಯ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಅಧಿಕಾರೇತರ ಸದಸ್ಯರಾಗಿರುತ್ತಾರೆ. ಈ ಹುದ್ದೆಯನ್ನು ಈಗ ಇಂದ್ರಜೀತ್ ಸಿಂಗ್ ಹೊಂದಿದ್ದಾರೆ. ಇತರ ನಾಮನಿರ್ದೇಶಿತ ಸದಸ್ಯರು ಪ್ರೊ. ಬಿಮನ್ ಕುಮಾರ್ ದತ್ತಾ ಹಾಗೂ ಅಂಜನ್ ಕುಮಾರ್ ಗೊಗೊಯಿ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News