ಕೊರೋನ ಎದುರಿಸಲು ಕೇರಳ ಮಾದರಿ ಕ್ರಮಗಳನ್ನು ಕೈಗೊಳ್ಳಿ: ಬಿಎಸ್‌ವೈಗೆ ಸಿದ್ದರಾಮಯ್ಯ ಸಲಹೆ

Update: 2020-03-21 12:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ. 21: ‘ಸಾಮಾನ್ಯ ಜನತೆಯನ್ನು ಗಮನದಲ್ಲಿಟ್ಟುಕೊಂಡು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೊರೋನ ಸೋಂಕು ಎದುರಿಸಲು ಕೈಗೊಂಡಿರುವ ಕ್ರಮಗಳು ಮಾದರಿಯಾಗಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಕೇರಳ ರಾಜ್ಯದ ಕ್ರಮಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಮುಂದಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಎಲ್ಲ ಕೊರೋನ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸುವುದು ಸಾಧ್ಯವಾಗಲಾರದು. ಜಿಲ್ಲೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಗಳ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ತಕ್ಷಣ 2-3 ಜಿಲ್ಲೆಗಳಿಗೊಂದರಂತೆಯಾದರೂ ಮುಖ್ಯವಾಗಿ, ಉತ್ತರ ಕರ್ನಾಟಕದಲ್ಲಿ ಕೊರೋನ ವೈರಸ್ ಪರೀಕ್ಷಾ ಪ್ರಯೋಗಾಲಯಗಳನ್ನು ಪ್ರಾರಂಭಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಕಫದ ಮಾದರಿ ಸಂಗ್ರಹ ಕೇಂದ್ರಗಳನ್ನು ತೆರೆಯಬೇಕು. ಐಸೋಲೇಷನ್ ಕೇಂದ್ರ ಮತ್ತು ಕೃತಕ ಉಸಿರಾಟದ ವ್ಯವಸ್ಥೆಯನ್ನು ಹೆಚ್ಚಿಸಬೇಕು’ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

‘ರಾಜ್ಯದ ಬೆಂಗಳೂರು, ಮೈಸೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಮಾತ್ರ ಕೊರೋನ ವೈರಸ್ ಪತ್ತೆ ಹಚ್ಚುವ ಐದು ಪರೀಕ್ಷಾ ಪ್ರಯೋಗಾಲಯಗಳಿವೆ. ಬಳ್ಳಾರಿ ಮತ್ತು ಕಲ್ಬುರಗಿಗಳಲ್ಲಿ ಮಾತ್ರ ಕಫದ ಮಾದರಿ ಸಂಗ್ರಹಿಸುವ ಕೇಂದ್ರಗಳಿವೆ. ಇಷ್ಟು ಮಾತ್ರ ಸಾಕೇ? ಪರಿಸ್ಥಿತಿ ಉಲ್ಭಣಿಸಿದರೆ ಏನು ಸಿದ್ಧತೆ ಇದೆ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಪ್ರಕೃತಿ ಭಾರತದ ಪಾಲಿಗೆ ಕರುಣಾಮಯಿಯಾಗಿ, ಕೊರೋನ ಹೆಮ್ಮಾರಿಯನ್ನು ಎದುರಿಸಲು ಸಿದ್ಧತೆ ನಡೆಸಲಿಕ್ಕಾಗಿ ಸಮಯಾವಕಾಶ ನೀಡಿದೆ. ಈ ಸಮಯವನ್ನು ಮಾತುಗಳಲ್ಲಿಯೇ ವ್ಯರ್ಥ ಮಾಡದೆ ಸಮರೋಪಾದಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಬೇಕು’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News