ಮಂಡ್ಯದಲ್ಲಿ ಕೊರೋನ ದೃಢಪಟ್ಟಿಲ್ಲ, ಜನತಾ ಕರ್ಫ್ಯೂಗೆ ಸಹಕರಿಸಿ: ಜಿಲ್ಲಾಧಿಕಾರಿ ಡಾ.ವೆಂಕಟೇಶ್

Update: 2020-03-21 18:31 GMT

ಮಂಡ್ಯ, ಮಾ.21: ಕೊರೋನ ವೈರಸ್ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಮಾ.22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ ಕರೆ ನೀಡಿರುವ ಜನತಾ ಕರ್ಫ್ಯೂಗೆ ಜಿಲ್ಲೆಯ ಜನತೆ ಸ್ವಯಂಪ್ರೇರಿತವಾಗಿ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮನವಿ ಮಾಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರಕ ಕೊರೋನ ವೈರಸ್ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂನಲ್ಲಿ ಜನತೆ ಸ್ವಯಂಪ್ರೇರಿತರಾಗಿ ಭಾಗಿಯಾಗಬೇಕು ಎಂದರು. ಸಾರ್ವಜನಿಕರು, ಹಲವು ಸಂಘಟನೆಗಳ ಮುಖಂಡರು, ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಜನತಾ ಕರ್ಫ್ಯೂಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದು, ಜನತೆ ಜಾಗೃತಿ ಮತ್ತು ಎಚ್ಚರಿಕೆ ಬೇಕಾಗಿದೆ ಎಂದು ಅವರು ಹೇಳಿದರು.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಜಿಲ್ಲೆಯಲ್ಲಿ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಆಪ್‍ಕಾಮ್ಸ್, ಪೆಟ್ರೋಲ್ ಬಂಕ್, ಕುಡಿಯುವ ನೀರು ಸರಬರಾಜು, ಅಂಬ್ಯುಲೆನ್ಸ್ ಇರುತ್ತದೆ ಎಂದು ಅವರು ತಿಳಿಸಿದರು.

ಹೊಟೇಲ್, ರೆಸ್ಟೋರೆಂಟ್‍ಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸಲ್ ಮಾತ್ರ ಮಾಡಬೇಕು. ರೇಷ್ಮೆ ಗೂಡು, ಎಪಿಎಂಸಿ ಸೇರಿದಂತೆ ಎಲ್ಲ ಬಗೆಯ ಮಾರುಕಟ್ಟೆಗಳು ಸ್ಥಬ್ಧವಾಗಿರುತ್ತವೆ. ಬಸ್, ಆಟೋ ರಿಕ್ಷಾ, ರೈಲ್ವೆ ಸಂಚಾರ ಇರುವುದಿಲ್ಲ. ಬಾರ್, ರೆಸ್ಟೋರೆಂಟ್, ವರ್ಕ್‍ಷಾಪ್‍ಗಳು ಮುಚ್ಚಿರುತ್ತವೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೊರೋನ ಪ್ರಕರಣ ಇಲ್ಲ
ಕೊರೋನ ವೈರಸ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವಹಿಸಿದ್ದು, ಇದುವರೆಗೂ ಜಿಲ್ಲೆಯಲ್ಲಿ ಕೊರೋನ ಪ್ರಕರಣ ಪತ್ತೆಯಾಗಿಲ್ಲ. ಮುಂದೆಯೂ ಜನತೆ ಜಾಗೃತಿ ಮತ್ತು ಎಚ್ಚರಿಕೆವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದರು.

ವಿದೇಶದಿಂದ ಬಂದಿರುವ ಜಿಲ್ಲೆಯ 112 ಮಂದಿಗೆ ಅವರ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. 19 ಜನ ದುಬೈನಿಂದ, ಸೌದೆ ಅರೆಬಿಯಾದಿಂದ 16, ಜರ್ಮನಿಯಿಂದ 13 ಮಂದಿ, ಅಮೇರಿಕಾ, ಸಿಂಗಪೂರ್, ಅಸ್ಟ್ರೇಲಿಯಾ, ಇತರ ದೇಶಗಳಿಂದ ಕೆಲವರು ಜಿಲ್ಲೆಗೆ ಆಗಮಿಸಿದ್ದಾರೆ ಎಂದು ಅವರು ತಿಳಿಸಿದರು.
ಜರ್ಮನಿಯಲ್ಲಿ ಎಂ.ಎಸ್. ವ್ಯಾಸಂಗ ಮಾಡುತ್ತಿದ್ದ ಮಂಡ್ಯದ ಹೊಸಹಳ್ಳಿಯ ಯುವಕನಿಗೆ ಗಂಟಲು ಬೇನೆ ಇತ್ತು. ಅವರ ರಕ್ತ ಮತ್ತು ಕಫ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಕೊರೋನ ವೈರಸ್ ಇಲ್ಲವೆಂದು ದೃಢಪಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ ಕೊರೋನ ವೈರಸ್ ನಿಯಂತ್ರಣ ಜಾಗೃತಿ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಡಿಎಚ್‍ಒ ಡಾ.ಮಂಚೇಗೌಡ, ವಾರ್ತಾಧಿಕಾರಿ ಟಿ.ಕೆ.ಹರೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News