ಮಾರ್ಚ್ 25ರಿಂದ ದೇಶೀಯ ವಿಮಾನ ಸೇವೆಗಳೂ ಬಂದ್

Update: 2020-03-23 12:17 GMT

ಹೊಸದಿಲ್ಲಿ: ಕೊರೋನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಇನ್ನೊಂದು ಮಹತ್ವದ ಹೆಜ್ಜೆಯಾಗಿ ಬುಧವಾರದಿಂದ ಎಲ್ಲಾ ದೇಶೀಯ ವಿಮಾನ ಸೇವೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದೆ.

ಎಲ್ಲಾ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಸೇವೆಗಳು ಮಾ.24ರ ರಾತ್ರಿ 11:59ರೊಳಗಾಗಿ ತಮ್ಮ ಹಾರಾಟ ಸ್ಥಗಿತಗೊಳಿಸುವಂತೆ ನೋಡಿಕೊಳ್ಳಲು ಸರಕಾರ ಹೇಳಿದೆ. ಬುಧವಾರದ ನಂತರ ಕೇವಲ ಸರಕು  ವಿಮಾನಗಳಿಗೆ ಮಾತ್ರ ಅವಕಾಶವಿರಲಿದೆ. ಸರಕಾರ ಈಗಾಗಲೇ ಅಂತರಾಷ್ಟ್ರೀಯ ವಿಮಾನಗಳನ್ನು ಒಂದು ವಾರ ನಿಷೇಧಿಸಿದೆ.

ದೇಶದಲ್ಲಿನ ಕೊರೋನ ವೈರಸ್ ಪ್ರಕರಣಗಳು ಸೋಮವಾರ 415ಕ್ಕೆ ತಲುಪಿದ ನಂತರ ಕೇಂದ್ರ ದೇಶೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ದಿಲ್ಲಿಗೆ ಆಗಮಿಸಲು ಅಥವಾ ಅಲ್ಲಿಂದ ನಿರ್ಗಮಿಸಲು ಯಾವುದೇ ವಿಮಾನಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ರವಿವಾರ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದರೆ ಇದಕ್ಕೆ  ಪ್ರತಿಕ್ರಿಯಿಸಿದ್ದ ವಿಮಾನಯಾನ ನಿರ್ದೇಶನಾಲಯ ದೇಶೀಯ ವಿಮಾನ ಸೇವೆಗಳಲ್ಲಿ ಯಾವುದೇ ಬದಲಾವಣೆಯಿಲ್ಲವೆಂದು ಈ ಹಿಂದೆ ಹೇಳಿತ್ತು.

ಪಶ್ಚಿಮ ಬಂಗಾಳಕ್ಕೆ ಎಲ್ಲಾ ವಿಮಾನ ಹಾರಾಟ ರದ್ದುಗೊಳಿಸುವಂತೆ ಇಂದು ಅಲ್ಲಿನ ಸೀಎಂ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News