ಕೊರೋನ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಿ: ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2020-03-23 14:20 GMT

ಬೆಂಗಳೂರು, ಮಾ.23: ಕೊರೋನ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕೊರೋನ ವೈರಸ್ ತಡೆಗಟ್ಟಲು ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮೌಖಿಕ ಆದೇಶ ನೀಡಿದೆ. 

ಈ ಕುರಿತು ಮುಹಮ್ಮದ್ ಆರೀಫ್ ಜಮೀಲ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಅವರು, ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಉಸಿರಾಟದ ಪರೀಕ್ಷೆಗೆ ಒಂದೇ ಸಾಧನವನ್ನು ಬಳಸುತ್ತಿದ್ದಾರೆ. ಇದರಿಂದ, ಕೊರೋನ ಹರಡುವ ಭೀತಿಯಿದೆ. ಹೀಗಾಗಿ, ವಿಮಾನ ನಿಲ್ದಾಣಗಳ ಸಂಚಾರಕ್ಕೆ ನಿಷೇಧ ಹೇರಬೇಕು ಹಾಗೂ ರಾಜ್ಯದಲ್ಲಿ ಕೊರೋನ ಹರಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೀಠಕ್ಕೆ ಮನವಿ ಮಾಡಿದರು.     

ಕೊರೋನ ಭೀತಿ ಹಿನ್ನೆಲೆಯಲ್ಲಿ ಕೋರ್ಟ್‌ಗಳಿಗೆ ರಜೆ ಘೋಷಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನಿರ್ದೇಶನದ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮೌಖಿಕವಾಗಿ ಮಾಹಿತಿ ನೀಡಿದರು. ಸರಕಾರದ ಪರ ವಾದಿಸಿದ ವಕೀಲರು, ಕೇಂದ್ರ ಹಾಗೂ ರಾಜ್ಯ ಸರಕಾರ ಕೊರೋನ ತಡೆಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ವಿಮಾನ ಸಂಚಾರ ಹಾಗೂ ಬಸ್ ಸಂಚಾರಗಳನ್ನು ಈಗಾಗಲೇ ನಿಷೇಧಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಕೆಲಕಾಲ ವಕೀಲರ ವಾದ ಆಲಿಸಿದ ನ್ಯಾಯಪೀಠವು ಕಟ್ಟಡಗಳ ತೆರವು ಹಾಗೂ ಸುಂಕ ವಸೂಲಾತಿಯಲ್ಲಿ ಸರಕಾರ ತನಗೆ ಸೂಕ್ತವಾದ ನಿರ್ಧಾರಗಳನ್ನು ಕೈಗೊಳ್ಳಬಹುದೆಂದು ಮೌಖಿಕವಾಗಿ ಆದೇಶ ನೀಡಿ, ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News