ಕೊರೋನ ವೈರಸ್ ತಡೆಗಟ್ಟಲು ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ

Update: 2020-03-23 14:54 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ. 23: ಕೊರೋನ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಜನರೊಂದಿಗೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಆಗಾಗ್ಗೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಕೆಮ್ಮುವಾಗ ಮತ್ತು ಸೀನುವಾಗ ಮೂಗು ಮತ್ತು ಬಾಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಬಳಸಿದ ಟಿಶ್ಯೂ ಕಾಗದವನ್ನು ಕೂಡಲೇ ಮುಚ್ಚಿದ ತ್ಯಾಜ್ಯ ತೊಟ್ಟಿಯೊಳಗಡೆ ಬಿಸಾಡಬೇಕು. ಬೇರೆ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವಾಗ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು.

ಜ್ವರ, ಕೆಮ್ಮು ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳಿಂದ ದೂರವಿರುವುದು. ಸೀನುವಾಗ ಮತ್ತು ಕೆಮ್ಮುವಾಗ ಮೊಣಕೈನ ಒಳಭಾಗದಲ್ಲಿ ಅಥವಾ ಅಂಗೈಗಳನ್ನು ಬಳಸುವುದನ್ನು ಮಾಡಬಾರದು. ದೇಹದ ತಾಪಮಾನ ಮತ್ತು ಉಸಿರಾಟದ ಲಕ್ಷಣ ನಿಯಮಿತವಾಗಿ ಪರಿಶೀಲಿಸಿಕೊಳ್ಳಬೇಕು.

ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ ಕೂಡಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಬಳಿಗೆ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸಬೇಕು. ಜ್ವರ ಮತ್ತು ನ್ಯುಮೋನಿಯಾದಂತಹ ರೋಗ ಲಕ್ಷಣಗಳಿದ್ದಲ್ಲಿ ಸಹಾಯವಾಣಿ-104 ಹಾಗೂ ಆರೋಗ್ಯ ಇಲಾಖೆಯ ಸಹಾಯವಾಣಿ-080-4684 8600 ಮತ್ತು 66692000 ಅಥವಾ 24 ಗಂಟೆಯ ಟೋಲ್‌ಫ್ರಿ ಸಂಖ್ಯೆ-011-2397 8046ಗೆ ಕರೆ ಮಾಡಬೇಕೆಂದು ಸೂಚನೆ ನೀಡಲಾಗಿದೆ.

ಈ ಕ್ರಮ ಅನುಸರಿಸಬೇಡಿ: ಹಸ್ತಲಾಘವ ಮಾಡಬಾರದು. ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದಲ್ಲಿ ಬೇರೆ ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು. ಅಂತಹವರು ಕಣ್ಣುಗಳು, ಮೂಗು ಮತ್ತು ಬಾಯನ್ನು ಸ್ಪರ್ಶಿಸಿಕೊಳ್ಳಬಾರದು. ಅಂಗೈಗಳನ್ನು ಬಳಸಿ ಸೀನುವುದು ಮತ್ತು ಕೆಮ್ಮುವುದು ಮಾಡಬಾರದು.

ಸಾರ್ವಜನಿಕ ಸ್ಥಳದಲ್ಲಿ ಉಗಿಯಬಾರದು. ಅನಗತ್ಯವಾಗಿ ಪ್ರಯಾಣಿಸಬಾರದು. ಅದರಲ್ಲೂ ಕೊರೋನ ಸೋಂಕು ಪೀಡಿತ ಪ್ರದೇಶಗಳಿಗೆ ಪ್ರಯಾಣಿಸಬಾರದು. ಸಾರ್ವಜನಿಕ ಕೂಟ, ಸಭೆ, ಸಮಾರಂಭಗಳಲ್ಲಿ ಭಾಗವಹಿಸಬಾರದು ಹಾಗೂ ಕ್ಯಾಂಟೀನ್‌ಗಳಲ್ಲಿ ಗುಂಪಾಗಿ ಕುಳಿತುಕೊಳ್ಳಬಾರದು.

ಜಿಮ್, ಕ್ಲಬ್ ಹಾಗೂ ಜನಸಂದಣಿಯಿಂದ ಕಿಕ್ಕಿರಿದ ಪ್ರದೇಶಗಳಿಗೆ ಭೇಟಿ ನೀಡಬಾರದು. ಕೊರೋನ ಬಗ್ಗೆ ವದಂತಿಗಳನ್ನು ಹಬ್ಬಿಸಬಾರದು ಹಾಗೂ ಭಯಪಡಬೇಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News