ಕೊರೋನಕ್ಕಿಂತ ಅಪಾಯಕಾರಿಯಾದ ಮೌಢ್ಯಗಳೆಂಬ ವೈರಸ್

Update: 2020-03-23 18:14 GMT

ಎಲ್ಲ ಬಣ್ಣ ಮಸಿ ನುಂಗಿತು ಎಂಬಂತೆ ನರೇಂದ್ರ ಮೋದಿಯವರು ರವಿವಾರ ಕರೆಕೊಟ್ಟ 'ಜನತಾ ಕರ್ಫ್ಯೂ' ಅವರ 'ಭಕ್ತ'ರ ಕಾರಣದಿಂದಲೇ ಹಲವೆಡೆ ವಿಫಲವಾಯಿತು. ಕೊರೋನ ವಿರುದ್ಧ ಈ ದೇಶದ ವೈದ್ಯರೂ ಸೇರಿದಂತೆ ವಿವಿಧ ಕ್ಷೇತ್ರಗಳ ಸಿಬ್ಬಂದಿ ದಿಟ್ಟತನದಿಂದ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಸಹಕರಿಸುವ ಭಾಗವಾಗಿ ಇಡೀ ದಿನ ಮನೆಯಲ್ಲಿ ಕುಳಿತು ವೈರಸ್ ಪರಸ್ಪರ ಹರಡದಂತೆ ನೋಡಿಕೊಳ್ಳಬೇಕು ಹಾಗೂ ಸಂಜೆ 5 ಗಂಟೆಯ ಹೊತ್ತಿಗೆ ಅವರ ಸೇವೆಯನ್ನು ಗೌರವಿಸುವ ಸಲುವಾಗಿ ಐದು ನಿಮಿಷ ಚಪ್ಪಾಳೆ ತಟ್ಟಬೇಕು ಎಂದು ಪ್ರಧಾನಿ ಜನರಿಗೆ ಸೂಚಿಸಿದ್ದರು.

ಚಪ್ಪಾಳೆಯ ಉದ್ದೇಶವೇ ರೋಗಿಗಳನ್ನು ಜೀವದ ಹಂಗು ತೊರೆದು ಹಗಲು ರಾತ್ರಿ ಶುಶ್ರೂಷೆ ನಡೆಸುತ್ತಿರುವ ವೈದ್ಯರಿಗೆ ಧೈರ್ಯ ತುಂಬುವ ಸಲುವಾಗಿ ಎನ್ನುವುದನ್ನು ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದರು. ಆದರೆ ವಿಪರ್ಯಾಸವೆಂದರೆ, ಪ್ರಧಾನಿ ಹಾಗೆ ಕರೆಕೊಟ್ಟ ಬೆನ್ನಿಗೇ 'ಚಪ್ಪಾಳೆಯನ್ನೇ ಕೊರೋನ ವೈರಸ್‌ಗೆ ಔಷಧಿ'ಯಾಗಿ ಜನರು ಪರಿವರ್ತಿಸಿ ಬಿಟ್ಟರು.

ಹಲವರು ಚಪ್ಪಾಳೆ ಮತ್ತು ಗಂಟೆ ಬಾರಿಸುವ ಮೂಲಕ ಹೇಗೆ ವೈರಸ್ ಇಲ್ಲವಾಗುತ್ತದೆ ಎನ್ನುವುದನ್ನು ಸಾಮಾಜಿಕ ತಾಣದಲ್ಲಿ ಪುಂಖಾನುಪುಂಖವಾಗಿ ಬರೆದರು. ಮೋಹನ್‌ಲಾಲ್‌ನಂತಹ ಹಿರಿಯ ನಟರು ಕೂಡ ಇದರಲ್ಲಿ ಹಿಂದೆ ಬೀಳಲಿಲ್ಲ. 'ಎಲ್ಲರೂ ಒಂದಾಗಿ ಶಬ್ದ ಮಾಡುವುದರಿಂದ ಪ್ರಯೋಜನಗಳಿವೆ. ಶಬ್ದ ಎನ್ನುವುದು ಮಂತ್ರ' ಎನ್ನುವ ಮೋಹನ್‌ಲಾಲ್ ಅವರ ಧ್ವನಿ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದರ ಬೆನ್ನಿಗೇ ಅಮಿತಾಭ್ ಅವರೂ ಇಂತಹದೇ ಒಂದು ಹೇಳಿಕೆಯನ್ನು ನೀಡಿ, ವ್ಯಾಪಕ ವಿರೋಧ ಬಂದಾಕ್ಷಣ ಅದನ್ನು ಹಿಂದೆಗೆದುಕೊಂಡಿದ್ದರು. ಆದರೆ ಇದೆಲ್ಲದರಿಂದಾಗಿ 'ಜನತಾ ಕರ್ಫ್ಯೂ' ಉದ್ದೇಶ ಹಲವೆಡೆ ವಿಫಲವಾಯಿತು. ಸಂಜೆಯವರೆಗೆ ಇಡೀ ದೇಶ ಸ್ತಬ್ಧವಾಗಿತ್ತಾದರೂ, ಸಂಜೆ ಐದರ ಹೊತ್ತಿಗೆ ಜನರೆಲ್ಲ ಒಂದಾಗಿ ಬೀದಿಗಿಳಿದು ತಟ್ಟೆ, ಡೋಲು ಇತ್ಯಾದಿ ಬಡಿಯುತ್ತಾ ಮೆರವಣಿಗೆ ಹೊರಟರು. ಬಹುಶಃ 'ಸಂಜೆಯ ಹೊತ್ತಿಗೆ ಕೊರೋನ ನಾಶವಾಗಿ ಬಿಟ್ಟಿತೇನೋ' ಎಂಬ ರೀತಿಯಲ್ಲಿ ಹಲವೆಡೆ ಜನರು ವಿಜಯೋತ್ಸವವನ್ನು ಆಚರಿಸಿದ್ದರು. ಪರಿಣಾಮ, ಇಡೀ ದಿನ ಮನೆಯೊಳಗಿದ್ದು ವೈರಸ್‌ನಿಂದ ದೂರವಿದ್ದವರು, ತಾವಾಗಿಯೇ ಬೀದಿಗಿಳಿದು ವೈರಸ್‌ನ್ನು ಆಹ್ವಾನಿಸಿಕೊಂಡರು. ಸಂಜೆಯ ಹೊತ್ತಿಗೆ ಬೀದಿಗಿಳಿದು ಒಂದಾಗಿ ಮೆರವಣಿಗೆ ನಡೆಸುವುದಿದ್ದರೆ, ಇಡೀ ದಿನ ಮನೆಯಲ್ಲಿದ್ದು ಅಂತರ ಕಾಯ್ದುಕೊಂಡದ್ದಾದರೂ ಏಕೆ? ಈ ಘಟನೆ, ಜನರು ಕೊರೋನ ರೋಗವನ್ನು ಅದೆಷ್ಟು ಹಗುರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಹೇಳುತ್ತದೆ. ಇಂದು ಕೊರೋನಕ್ಕಿಂತ, ಜನರ ಈ ಬೇಜವಾಬ್ದಾರಿಯೇ ಹೆಚ್ಚು ಅಪಾಯಕಾರಿಯಾಗಿದೆ.

ಚೀನಾದಂತಹ ದೇಶ ಈ ವೈರಸ್‌ನ ತಾಯಿಯಾದರೂ, ಕೊನೆಯ ಕ್ಷಣದಲ್ಲಿ ಎಚ್ಚೆತ್ತುಕೊಂಡು ಮಿಂಚಿನೋಪಾದಿಯಲ್ಲಿ ಕಾರ್ಯಾಚರಣೆ ಎಸಗಿದ ಕಾರಣ, ಇದರ ವಿರುದ್ಧ ಭಾಗಶಃ ಯಶಸ್ಸನ್ನು ಸಾಧಿಸಿದೆ. ಭಾರತ ಮೌಢ್ಯಗಳ ಆಗರವಾಗಿದೆ. ಆದುದರಿಂದಲೇ ನಾವು ಕೊರೋನದಂತಹ ವೈರಸ್‌ಗಳಿಗೆ ಇಲ್ಲಿ ಹೆಚ್ಚು ಹೆದರಬೇಕು. ಜೊತೆ ಜೊತೆಗೇ ಚೀನಾಕ್ಕೆ ಹೋಲಿಸಿದರೆ ಭಾರತದ ಆರ್ಥಿಕ ಶಕ್ತಿ ಏನೇನೂ ಅಲ್ಲ. ದೇಶ ಈವರೆಗೂ ರೋಗವನ್ನು ಎದುರಿಸಲು ವಿಶೇಷ ಪ್ಯಾಕೇಜ್‌ನ್ನು ಘೋಷಿಸಿಯೇ ಇಲ್ಲ. ವೈದ್ಯರು ವ್ಯಾಪಕ ಪ್ರಮಾಣದಲ್ಲಿ ಸೌಲಭ್ಯಗಳ ಕೊರತೆಗಳನ್ನು ಎದುರಿಸುತ್ತಿದ್ದಾರೆ. ಈ ದೇಶದಲ್ಲಿರುವ ಒಟ್ಟು ವೆಂಟಿಲೇಟರ್‌ನ ಸಂಖ್ಯೆಯೇ 40 ಸಾವಿರ. ಇವೆಲ್ಲವೂ ದೊಡ್ಡ ನಗರಗಳಲ್ಲಿವೆ. ದಕ್ಷಿಣ ಕೊರಿಯದಲ್ಲಿರುವ ವೆಂಟಿಲೇಟರ್‌ನ ಶೇ. 20ರಷ್ಟು ಮಾತ್ರ ಭಾರತದಲ್ಲಿವೆ. ಕೊರೋನ ವಿಷಯಲ್ಲಿ ಕೊರಿಯ ಗೆಲ್ಲುವುದಕ್ಕೆ ಇದೂ ಒಂದು ಕಾರಣ. ವೆಂಟಿಲೇಟರ್ ಅಷ್ಟೇ ಅಲ್ಲ ಲ್ಯಾಬ್ ಸೇರಿದಂತೆ ಹಲವು ಸೌಲಭ್ಯಗಳ ಕೊರತೆಗಳು ಈ ಭಾರತದಲ್ಲಿವೆ. ಇದನ್ನು ಒಮ್ಮೆಲೆ ಸರಕಾರ ತುಂಬಿಕೊಡುವುದು ಕಷ್ಟ ಸಾಧ್ಯ. ಇಂತಹ ಸಂದರ್ಭದಲ್ಲಿ ಈ ದೇಶದ ಜನತೆ ಮಾಡಬೇಕಾದ ಅತ್ಯಂತ ಜವಾಬ್ದಾರಿಯ ಕೆಲಸವೆಂದರೆ, ಈ ರೋಗವನ್ನು ಹರಡದಂತೆ ನೋಡಿಕೊಳ್ಳುವುದು. ಸೋಂಕಿತರನ್ನು ವೈದ್ಯರು ಗುಣಪಡಿಸಬಹುದು. ಆದರೆ ಅದನ್ನು ಹರಡದಂತೆ ತಡೆಯುವುದು ವೈದ್ಯರಿಂದ ಸಾಧ್ಯವಿಲ್ಲ. ವೈದ್ಯರು ತಮ್ಮ ಹೊಣೆಗಾರಿಕೆಗಳನ್ನು ನಿಭಾಯಿಸುವಾಗ ಸಾರ್ವಜನಿಕರು ಅಷ್ಟೇ ಬದ್ಧತೆಯಿಂದ ರೋಗವನ್ನು ಇನ್ನೊಬ್ಬರಿಗೆ ಯಾವ ರೀತಿಯಲ್ಲೂ ನಾವು ಹಬ್ಬಿಸುವುದಿಲ್ಲ ಎನ್ನುವ ಶಪಥ ಮಾಡುವುದೇ ನಾವು ಈ ದೇಶಕ್ಕೆ ಕೊಡುವ ಕೊಡುಗೆ. ನಮಗೆ ನಾವು ಮಾಡಿಕೊಳ್ಳುವ ಉಪಕಾರವೂ ಹೌದು.

ಕೊರೋನ ರೋಗದ ವಿಶೇಷತೆಯೆಂದರೆ, ಅದು ರೋಗಿಯನ್ನು ಸಾಯಿಸುವ ಪ್ರಮಾಣ ತೀರಾ ಕಡಿಮೆ. ಆದರೆ ಅದು ಶೀಘ್ರವಾಗಿ ಒಬ್ಬರಿಂದ ಒಬ್ಬರಿಗೆ ಹರಡಬಲ್ಲದು. ಯುವಕರಿಂದ ಅದು ವೃದ್ಧರು ಅಥವಾ ಮಕ್ಕಳಿಗೆ ವರ್ಗಾವಣೆಯಾದಾಗ ಸೋಂಕು ಅಪಾಯಕಾರಿಯಾಗುತ್ತದೆ. ಸಾಮಾನ್ಯ ನೆಗಡಿ, ಕೆಮ್ಮು ಇರುವ ಪ್ರತಿಯೊಬ್ಬರು ಮುಖಗವಚಗಳನ್ನು ಧರಿಸಿಕೊಂಡೇ ಮನೆಯೊಳಗೆ ಓಡಾಡಬೇಕು. ತನಗೆ ಕೊರೋನಾ ಸೋಂಕು ಇಲ್ಲ ಎನ್ನುವ ಕಾರಣಕ್ಕಾಗಿ ಇವರು ಸಾರ್ವಜನಿಕವಾಗಿ ಓಡಾಡುವುದು ದೊಡ್ಡ ತಪ್ಪು. ಇದೇ ಸಂದರ್ಭದಲ್ಲಿ ಯಾವುದೇ ನೆಗಡಿಯ ಲಕ್ಷಣಗಳಿಲ್ಲದವರೂ ಇನ್ನೊಬ್ಬರಿಂದ ಅದನ್ನು ತಮ್ಮದಾಗಿಸಿಕೊಳ್ಳದ ಹಾಗೆ ನೋಡಿಕೊಳ್ಳಬೇಕು. ಮುಖ್ಯವಾಗಿ ಕೈತೊಳೆಯುವುದು, ಸಾರ್ವಜನಿಕ ಅಂತರಗಳನ್ನು ಕಾಪಾಡಿಕೊಳ್ಳುವುದು ಇವುಗಳಲ್ಲಿ ಮುಖ್ಯ. ಕೆಲವು ದಿನ, ಅಗತ್ಯಕ್ಕನುಸಾರವಾಗಿ ಮಾತ್ರ ಸಾರ್ವಜನಿಕವಾಗಿ ವ್ಯವಹರಿಸಬೇಕು. ವಿದೇಶಗಳಿಂದ ಅಥವಾ ಸೋಂಕು ಪೀಡಿತ ಪ್ರದೇಶಗಳಿಂದ ನಿಮ್ಮ ನಿವಾಸಗಳಿಗೆ ಯಾರಾದರೂ ಬಂದಿದ್ದರೆ ಅವರಿಂದ ಕಡ್ಡಾಯವಾಗಿ ಅಂತರವನ್ನು ಕಾಯ್ದುಕೊಳ್ಳುವುದು ಮಾತ್ರವಲ್ಲ, ತಾವು ಕೂಡ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಾಗ ಮುಂಜಾಗರೂಕತೆಯನ್ನು ವಹಿಸಬೇಕು. ಹಾಗೆಯೇ ಸೋಂಕು ಪೀಡಿತ ಪ್ರದೇಶಗಳಲ್ಲಿರುವ ಆರೋಗ್ಯವಂತ ಜನರು, ಕಡ್ಡಾಯವಾಗಿ ಇತರ ಪ್ರದೇಶಗಳಿಗೆ ಪ್ರವಾಸ ಹೋಗಬಾರದು. ತಮ್ಮ ಮನೆಯಲ್ಲಿರುವ ಹಿರಿಯರು ಮತ್ತು ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಯಾಕೆಂದರೆ ಕೊರೋನ ಬಿಗಡಾಯಿಸುವುದು ಪ್ರತಿರೋಧ ಕಡಿಮೆ ಇರುವ ಈ ಹಿರಿಯರು ಅಥವಾ ತೀರಾ ಕಿರಿಯರ ಮೇಲೆ. ಆದುದರಿಂದ ಅವರಲ್ಲಿ ಯಾವುದೇ ರೀತಿಯ ಸೋಂಕು ಲಕ್ಷಣ ಕಂಡಾಗ ಅದನ್ನು ಮುಚ್ಚಿಡಬಾರದು. ತಕ್ಷಣ ಸಂಬಂಧಪಟ್ಟವರನ್ನು ಸಂಪರ್ಕಿಸಿ ಸಲಹೆಗಳನ್ನು ತೆಗೆದುಕೊಳ್ಳಬೇಕು.

ಇದೇ ಸಂದರ್ಭದಲ್ಲಿ ಮೌಢ್ಯಗಳನ್ನು ಹರಡುವ ಯಾವುದೇ ಸಂದೇಶವನ್ನೂ ಇನ್ನೊಬ್ಬರಿಗೆ ತಲುಪದಂತೆ ನೋಡಿಕೊಳ್ಳುವ ಹೊಣೆಗಾರಿಕೆಗಳು ನಮ್ಮಲ್ಲಿವೆ. ಹೇಗೆ ವೈರಸ್ ಜೊತೆಗೆ ನಾವು ಅಂತರವನ್ನು ಕಾಪಾಡಿಕೊಳ್ಳಬೇಕೋ ಹಾಗೆಯೇ ಇಂತಹ ಮೌಢ್ಯ ಸಂದೇಶಗಳಿಂದಲೂ ದೂರವಿರಬೇಕು. ಹಾಗೆಯೇ ಇಂತಹ ಶ್ಲೋಕಗಳನ್ನು ಪಠಿಸಿದರೆ ರೋಗವಾಸಿಯಾಗುತ್ತದೆ, ಇಂತಹ ಎಲೆಗಳನ್ನು ತಿಂದರೆ ಪ್ರತಿರೋಧಕ ಶಕ್ತಿ ಬರುತ್ತದೆ ಎನ್ನುವ ಸಂದೇಶಗಳನ್ನೂ ಇನ್ನೊಬ್ಬರಿಗೆ ತಲುಪದಂತೆ ನಾವು ನೋಡಿಕೊಳ್ಳಬೇಕು. ರೋಗವನ್ನು ಮುಂದಿಟ್ಟು ತಮ್ಮ ತಮ್ಮ ಧರ್ಮಗಳನ್ನು, ಸಂಪ್ರದಾಯಗಳನ್ನು, ರಾಜಕೀಯ ನಾಯಕರನ್ನು ವೈಭವೀಕರಿಸುವ ಮಂದಿಯಿಂದಲೂ ಆದಷ್ಟು ದೂರವಿರಿ. ಸಾಧ್ಯವಾದರೆ ಅವರಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡಿ. ಕೊರೋನವನ್ನು ವೈದ್ಯರ ಸಲಹೆಗಳ ಮೂಲಕವೇ ನಾವೆಲ್ಲರೂ ಎದುರಿಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News