ಲಾಕ್‍ಡೌನ್‍ ಗೆ ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ

Update: 2020-03-24 12:28 GMT

ಚಿಕ್ಕಮಗಳೂರು, ಮಾ.24: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸೋಮವಾರ ರಾತ್ರಿಯಿಂದ ಮಾ.31ರವರೆಗೆ ಲಾಕ್‍ಡೌನ್‍ಗೆ ರಾಜ್ಯ ಸರಕಾರ ಆದೇಶಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಇಡೀ ಜಿಲ್ಲಾದ್ಯಂತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ಹೊರತು ಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳು ನಗರ ಸೇರಿದಂತೆ ಜಿಲ್ಲಾದ್ಯಂತ ಸ್ತಬ್ಧಗೊಂಡಿತ್ತು. ಬುಧವಾರ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಕೆಲ ರಸ್ತೆಗಳಲ್ಲಿ ಸಾರ್ವಜನಿಕರು ಹೂವು, ಹಣ್ಣು, ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳೂ ಕಂಡುಬಂತು.

ಮಂಗಳವಾರ ಬೆಳಗ್ಗೆ ನಗರದಲ್ಲಿ ಹಾಲು, ಮೆಡಿಕಲ್ ಶಾಪ್‍ಗಳು, ಕ್ಲಿನಿಕ್, ಆಸ್ಪತ್ರೆಗಳು, ಬ್ಯಾಂಕ್, ಪೆಟ್ರೋಲ್ ಬಂಕ್‍ಗಳು, ಸರಕಾರಿ ಕಚೇರಿ ಸೇರಿಂದತೆ ಹಣ್ಣು, ಹೂ, ಮಾಂಸದ ಅಂಗಡಿಗಳೂ ಸೇರಿದಂತೆ ಕೆಲವೆಡೆ ಕೆಲ ದಿನಸಿ ಅಂಗಡಿಗಳು ತೆರೆದಿದ್ದವು. ಮುಂಜಾನೆ ನಗರದ ಎಲ್ಲ ರಸ್ತೆಗಳು ವಾಹನಗಳು, ಸಾರ್ವಜನಿಕರ ಓಡಾವಿದಲ್ಲದೇ ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಂಡು ಬಂದವಾದರೂ ದ್ವಿಚಕ್ರ ವಾಹನಗಳೂ ಸೇರಿದಂತೆ ಸರಕು ಸಾಗಣೆ ವಾಹನಗಳ ಓಡಾಟ ಎಂದಿನಂತೆ ಇತ್ತು. ಸರಕಾರಿ ಹಾಗೂ ಖಾಸಗಿ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ನಗರದ ಬಸ್ ನಿಲ್ದಾಣದಲ್ಲಿ ಕೆಎಸ್ಸಾರ್ಟಿಸಿ ಸಂಸ್ಥೆಯ ಕೆಲ ಸಿಬ್ಬಂದಿಯನ್ನು ಹೊರತು ಪಡಿಸಿ ಇಡೀ ಬಸ್ ನಿಲ್ದಾಣ ಖಾಲಿಯಾಗಿತ್ತು. ನಗರದ ಮಲ್ಲಂದೂರು ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‍ಗಳು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡುಬಂದವು.

ಬುಧವಾರ ಯುಗಾದಿ ಹಬ್ಬ ಇರುವ ಹಿನ್ನೆಲೆಯಲ್ಲಿ ಹಬ್ಬ ಆಚರಿಸಲು ಬೇಕಾಗುವ ಹೂವು, ಹಣ್ಣು, ದಿನಸಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳು ನಗರದ ಕೆಲ ರಸ್ತೆಗಳಲ್ಲಿ ಮಂಗಳವಾರ ಕಂಡುಬಂತು, ನಗರದ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರಿಗಳು ಬೆಳಗ್ಗೆಯಿಂದಲೇ ಮಾರಾಟದಲ್ಲಿ ತೊಡಗಿದ್ದರು. ಸಾರ್ವಜನಿಕರು ಹೂವುಗಳ ಖರೀದಿಯಲ್ಲಿ ಮಗ್ನರಾಗಿದ್ದಾರಾದರೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆ ಇತ್ತು. ಖರೀದಿ ಹಿನ್ನೆಲೆಯಲ್ಲಿ ನಗರದ ವಿವಿಧ ರಸ್ತೆಗಳ ಅಲ್ಲಲ್ಲಿ ಸಾರ್ವಜನಿಕರ ಓಡಾಟ ಕಂಡುಬಂತು.

ಇನ್ನು ನಗರದ ಮಾಂಸ, ಮೀನು ಮಾರುಕಟ್ಟೆ ಆವರಣದಲ್ಲೂ ಬೆಳಗ್ಗೆಯಿಂದ ಸಂಜೆವರೆಗೆ ಕೆಲ ಅಂಗಡಿಗಳು ತೆರದಿದ್ದು, ಸಾರ್ವಜನಿಕರೂ ಮಾಂಸ ಖರೀದಿಯಲ್ಲಿ ತೊಡಗಿದ್ದಾರಾದರೂ ಜನರ ಸಂಖ್ಯೆ ಭಾರೀ ಕಡಿಮೆ ಇತ್ತು. ನಗರದ ಮಾರ್ಕೆಟ್ ರಸ್ತೆಯಲ್ಲಿ ಸೋಮವಾರ ಸಂಜೆಯಿಂದಲೇ ಹೂವಿನ ವ್ಯಾಪಾರಿಗಳು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಿದರು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜನರು ಖರೀದಿಗೆ ತಂಡೋಪತಂಡವಾಗಿ ಆಗಮಿಸಿ ಹೂವು, ಬಾಳೆ ಗಿಡ, ಬೇವು, ತರಕಾರಿ ಖರೀದಿಯಲ್ಲಿ ನಿರತರಾಗಿದ್ದರು. ಮಾರ್ಕೆಟ್ ರಸ್ತೆಯಲ್ಲಿ ಸೋಮವಾರ ಸಂಜೆ ಮತ್ತು ರಾತ್ರಿ ಭಾರೀ ಸಂಖ್ಯೆಯಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಕೂಡ ಆಗಿದ್ದ ದೃಶ್ಯಗಳು ಕಂಡು ಬಂದವು. ಮಾರ್ಕೆಟ್ ರಸ್ತೆಯಲ್ಲಿ ಮಂಗಳವಾರ ಬೆಳಗಿನಿಂದ ಮಧ್ಯಾಹ್ನದವರೆಗೂ ಜನರು ತರಕಾರಿ, ಹೂವು, ಹಣ್ಣು ಖರೀದಿಯಲ್ಲಿ ಮಗ್ನರಾಗಿದ್ದರು.

ಲಾಕ್‍ ಡೌನ್ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿ ಮಂಗಳವಾರ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದರಿಂದ ಸರಕು ವಾಹನಗಳ ಸಂಚಾರಕ್ಕೆ ಲಾಕ್‍ಡೌನ್ ಆದೇಶ ಬಾಧಿಸಲಿಲ್ಲ. ಆಟೋ ಸೇವೆಯನ್ನೂ ಸ್ಥಗಿತಗೊಳಿಸಲು ಸರಕಾರ ಆದೇಶ ನೀಡಿದ್ದರೂ ನಗರದಲ್ಲಿ ಕೆಲ ಆಟೋಗಳ ಸಂಚಾರ ಎಂದಿನಂತಿತ್ತು. ಇಂತಹ ಆಟೋಗಳನ್ನು ಪೊಲೀಸರು ತಡೆದು ಪ್ರಶ್ನಿಸುತ್ತಿದ್ದ, ಸೇವೆ ಸ್ಥಗಿತಗೊಳಿಸುವಂತೆ ಸೂಚಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂತು. 

ಮಂಗಳವಾರ ನಗರದಾದ್ಯಂತ ಲಾಕ್‍ಡೌನ್ ಇದ್ದ ಪರಿಣಾಮ ಎಲ್ಲ ರಸ್ತೆಗಳ ಅಲ್ಲಲ್ಲಿ ಪೊಲೀಸರು ಬಂದೋಬಸ್ತ್ ಕೆಲಸ ನಿರ್ವಹಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ನಗರದ ಎಂಜಿ ರಸ್ತೆ, ಐಜಿ ರಸ್ತೆ, ಹನುಮಂತಪ್ಪ ವೃತ್ತದಲ್ಲಿ ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದ ಪೊಲೀಸರು ರಸ್ತೆಗಳಲ್ಲಿ ಬೈಕ್‍ಗಳಲ್ಲಿ ಅಲೆದಾಡುತ್ತಿದ್ದ ಕೆಲ ಯುವಕರಿಗೆ ಲಾಠಿ ತೋರಿಸಿದರು. ಬಂದ್ ಹಿನ್ನೆಲೆಯಲ್ಲಿ ಹೈವೇ ಪ್ಯಾಟ್ರೋಲ್ ಪೊಲೀಸ್ ವಾಹನಗಳು ಎಲ್ಲ ರಸ್ತೆಗಳಲ್ಲಿ ಬೀಟ್ ಹಾಕುತ್ತಾ ಬಾಗಿಲು ಲಾಕ್‍ಡೌನ್ ಇದ್ದಾಗ್ಯೂ ತೆರೆದುಕೊಂಡಿದ್ದ ಅಗತ್ಯ ವಸ್ತುಗಳಲ್ಲದ ಅಂಗಡಿ ಮುಂಗಟ್ಟುಗಳ ಮಾಲಕರಿಗೆ ಎಚ್ಚರಿಕೆ ನೀಡುತ್ತಾ ಮುಚ್ಚಿಸುತ್ತಿದ್ದ ದೃಶ್ಯಗಳೂ ನಗರದ ಅಲ್ಲಲ್ಲಿ ಕಂಡು ಬಂದವು. ಮಂಗಳವಾರವೂ ಕಾರ್ಯನಿರ್ವಹಿಸುತ್ತಿದ್ದ ಕೆಲ ಹೊಟೇಲ್ ಮಾಲಕರಿಗೂ ಎಚ್ಚರಿಕೆ ನೀಡುತ್ತಿದ್ದ ಪೊಲೀಸರು ಹೊಟೇಲ್‍ನಲ್ಲಿ ಸಾರ್ವಜನಿಕರಿಗೆ ಉಪಹಾರ, ಊಟ ನೀಡದಂತೆ, ಅಗತ್ಯವಿದ್ದಲ್ಲಿ ಪಾರ್ಸಲ್ ನೀಡುವಂತೆ ಸೂಚಿಸಿದರು.

ಇನ್ನು ರಾಜ್ಯ ಸರಕಾರ ಸರಕಾರಿ ಕಚೇರಿಗಳಲ್ಲಿ ತುರ್ತು ಸೇವೆಗಳನ್ನು ಹೊರತು ಪಡಿಸಿ ಬಾಕಿ ಎಲ್ಲ ಕೆಲಸಗಳನ್ನು ನಿರ್ವಹಿಸವುದಕ್ಕೆ ತಡೆ ನೀಡಿರುವುದರಿಂದ ನಗರದಲ್ಲಿರುವ ವಿವಿಧ ಸರಕಾರಿ ಇಲಾಖೆಗಳಲ್ಲಿ ಕೆಲವೇ ಕೆಲವು ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ದೃಶ್ಯಗಳು ಕಂಡು ಬಂತು. ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಸೇರಿದಂತೆ ಎಲ್ಲ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವಾದರೂ ನೌಕರರು ಮತ್ತು ಸಾರ್ವಜನಿಕರ ಸಂಖ್ಯೆ ಭಾರೀ ಕಡಿಮೆ ಇತ್ತು. ಇನ್ನು ನಗರದಲ್ಲಿರುವ ಅಂಚೆ ಕಚೇರಿ ಸೇರಿದಂತೆ ಕೇಂದ್ರ ಸರಕಾರದ ಕಚೇರಿಗಳಿಗೆ ಬೀಗ ಹಾಕಲಾಗಿತ್ತು. ಜಿಲ್ಲೆಯ ತಾಲೂಕು, ಹೋಬಳಿ ಕೇಂದ್ರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಲಾಕ್‍ಡೌನ್ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ಸಿಕ್ಕಿದೆ.

ಒಟ್ಟಾರೆ ಮಹಾಮಾರಿಯಂತೆ ಇಡೀ ದೇಶವನ್ನು ಕಾಡುತ್ತಿರುವ ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರಕಾರ ಘೋಷಿಸಿರುವ ಲಾಕ್‍ ಡೌನ್ ಆದೇಶದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾದ್ಯಂತ ಬಂದ್‍ನ ವಾತಾವರಣ ನಿರ್ಮಾಣವಾಗಿದ್ದು, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೆಲ ಸಾರ್ವಜನಿಕರು ಮಂಗಳವಾರ ನಗರದ ಅಲ್ಲಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದನ್ನು ಹೊರತುಪಡಿಸಿ ಲಾಕ್‍ಡೌನ್ ಸಂಪೂರ್ಣ ಯಶಸ್ವಿಯಾಗಿದೆ. ಯುಗಾದಿ ಹಬ್ಬದ ನಂತರ ಜಿಲ್ಲೆ ಸಂಪೂರ್ಣ ಲಾಕ್‍ಡೌನ್ ಆಗುವ ವಿಶ್ವಾವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇಂದಿರಾ ಕ್ಯಾಂಟಿನ್‍ನಲ್ಲಿ ಊಟ ತಿಂಡಿಗೆ ಮುಗಿಬಿದ್ದ ಸಾರ್ವಜನಿಕರು: 
ಮಂಗಳವಾರದಿಂದ ಮಾ.31ರವರೆಗೆ ರಾಜ್ಯ ಸೇರಿದಂತೆ ಜಿಲ್ಲೆಯಲ್ಲೂ ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಇಂದಿರಾ ಕ್ಯಾಂಟಿನ್‍ಗೆ ವಿನಾಯಿತಿ ನೀಡಲಾಗಿದ್ದು, ಮಂಗಳವಾರ ಎಂದಿನಂತೆ ಕಾರ್ಯನಿರ್ವಹಿಸಿದ ಇಂದಿರಾ ಕ್ಯಾಂಟಿನ್‍ನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಹಾರ ಸೇವಿಸಿದರು. ಬೆಳಗ್ಗೆ ಹಾಗೂ ಮಧ್ಯಾಹ್ನ ಸಾರ್ವಜನಿಕರು ಇಂದಿರಾ ಕ್ಯಾಂಟಿನ್ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಆಹಾರ ಸೇವಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ನಗರ ಪ್ರದಕ್ಷಿಣೆ ಹಾಕಿದ ಎಸ್ಪಿ, ಡಿಸಿ
ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಬೆಳಗ್ಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ನಗರ ಪ್ರದಕ್ಷಿಣೆ ಹಾಕಿದರು. ಈ ವೇಳೆ ನಗರದ ಮಲ್ಲಂದೂರು ರಸ್ತೆಗಳಲ್ಲಿ ತೆರೆದುಕೊಂಡಿದ್ದ ಅಂಗಡಿ ಮುಂಗಟ್ಟುಗಳ ಮಾಲಕರಿಗೆ ಸ್ವತಃ ಎಸ್ಪಿ, ಡಿಸಿ ತಿಳುವಳಿಕೆ ಹೇಳಿ ಮುಚ್ಚಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಇದೇ ವೇಳೆ ಹೆಲ್ಮೆಟ್ ಧರಿಸಿದೇ ಬೈಕ್ ಓಡಿಸುತ್ತಿದ್ದ ಕೆಲ ಯುವಕರನ್ನು ತಡೆದು ಎಚ್ಚರಿಕೆಯನ್ನೂ ನೀಡಿದರು. ಅಲ್ಲದೇ ಮಹಾಮಾರಿ ಕೊರೋನ ವೈರಸ್ ಸಂಬಂಧ ಸಾರ್ವಜನಿಕರಿಗೆ ಮನೆಯಿಂದ ಹೊರಬಾರದಂತೆ ಸಲಹೆ ನೀಡಿದರು.

ಹೊರ ಜಿಲ್ಲೆಯ ಪ್ರವಾಸಿಗರು, ಸಾರ್ವಜನಿಕರ ವಾಹನಗಳಿಗೆ ನಿರ್ಬಂಧ
ಇನ್ನು ಕೊರೋನ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಪ್ರವೇಶಿಸುವ ಸಾರ್ವಜನಿಕರ ಹಾಗೂ ಪ್ರವಾಸಿಗರ ವಾಹನಗಳನ್ನು ಜಿಲ್ಲೆಯ ಗಡಿ ಭಾಗದಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ತಡೆಯುತ್ತಿದ್ದ ಪೊಲೀಸರು ಜಿಲ್ಲೆಯ ವಾಹನಗಳನ್ನು ಒಳಗೆ ಬಿಡುತ್ತಾ, ಹೊರ ಜಿಲ್ಲೆಗಳ ಜನರು, ಪ್ರವಾಸಿಗರ ವಾಹನಗಳನ್ನು ಹಿಂದಕ್ಕೆ ಕಳುಹಿಸಲಾರಂಭಿಸಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ನಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಬಂದ ಸಾವಿರಾರು ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಪೊಲೀಸರು ಈ ಪೈಕಿ ಸರಕು ಸಾಗಣೆ ವಾಹನಗಳು, ಪತ್ರಿಕೆಗಳ ವಾಹನಗಳನ್ನು ಮಾತ್ರ ಜಿಲ್ಲೆಯೊಳಗೆ ಬಿಡುತ್ತಿದ್ದು, ಹೊರ ಜಿಲ್ಲೆಗಳ ವಾಹನ ಹಾಗೂ ಪ್ರವಾಸಿಗರನ್ನು ಬಿಡದೇ ಹಿಂದಕ್ಕೆ ಕಳುಹಿಸಿದ್ದಾರೆ. ಇದರಿಂದಾಗಿ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ಗಳಲ್ಲಿ ಕಿಲೋ ಮೀಟರ್ ವರಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡುಬಂದವು.

ಕೋವಿಡ್ ಭೀತಿ ಹಿನ್ನೆಲೆಯಲ್ಲಿ ನಗರದ ಎಲ್ಲ ಮಂದಿರ, ಮಸೀದಿ, ಚರ್ಚ್‍ಗಳು ಮಂಗಳವಾರ ಮುಚ್ಚಿದ್ದವು. ನಗರದ ಪ್ರಮುಖ ದೇವಾಲಯಗಳಿಗೆ ಸೋಮವಾರ ರಾತ್ರಿಯಿಂದಲೇ ಬೀಗ ಹಾಕಲಾಗಿತ್ತು. ಯುಗಾದಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಹೆಚ್ಚು ಜನರು ಸೇರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದಲೇ ದೇವಾಲಯಗಳಿಗೆ ಬೀಗ ಹಾಕಲಾಗಿದ್ದು, ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಿರಲು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News