'ಕೊರೋನ ನಿಯಂತ್ರಣ'ದ ಸಂಪೂರ್ಣ ಹೊಣೆ ಶ್ರೀರಾಮುಲು ಬದಲು ಸಚಿವ ಡಾ.ಸುಧಾಕರ್ ಗೆ

Update: 2020-03-24 16:37 GMT

ಬೆಂಗಳೂರು, ಮಾ.24: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲುಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ. ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕೋವಿಡ್-19ನ ಎಲ್ಲ ವಿಚಾರಗಳ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದ ಶಿಫಾರಸ್ಸಿಗೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ.

ಕೊರೋನ ಸೋಂಕು ತಡೆಗಟ್ಟುವ ವಿಚಾರದಲ್ಲಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳಲ್ಲಿ ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ನಡುವೆ ಹೊಂದಾಣಿಕೆ ಇಲ್ಲ ಎಂದು ವಿರೋಧ ಪಕ್ಷದವರು ಮಾಡುತ್ತಿದ್ದ ಟೀಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಹೆಚ್ಚುವರಿ ಇಲಾಖೆಯ ಹೊಣೆಗಾರಿಕೆ ವಹಿಸಿ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಕೊರೋನ(ಕೋವಿಡ್-19) ಕುರಿತ ಎಲ್ಲ ವಿಚಾರಗಳನ್ನು ನಿರ್ವಹಿಸುವಂತೆ ಸೂಚಿಸಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲು 4 ಮಂತ್ರಿಗಳ ಕೋವಿಡ್-19 ಕಾರ್ಯಪಡೆಯ ಮುಖ್ಯಸ್ಥರಾಗಿದ್ದು, ಅರೋಗ್ಯ ಇಲಾಖೆಯ ಜೊತೆಗೆ ರಾಜ್ಯಾದ್ಯಂತ ಕೋವಿಡ್ 19 ಕಾರ್ಯವನ್ನು ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಲಾಗಿದೆ. ಇದೇ ವೇಳೆ ಡಾ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೋವಿಡ್-19ರ ಬೆಂಗಳೂರಿನ ಮತ್ತು ಬೆಂಗಳೂರಿನಲ್ಲಿರುವ ವಾರ್ ರೂಮ್ ಮೇಲ್ವಿಚಾರಣೆ ಮಾಡುತ್ತಾರೆ. ಇವರಿಬ್ಬರ ಕಾರ್ಯಕ್ಷೇತ್ರದ ಬಗ್ಗೆ ಯಾವುದೆ ಗೊಂದಲ ಇಲ್ಲ.

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News