ನಮ್ಮ ಕುಟುಂಬಕ್ಕಾಗಿಯಾದರೂ ಕೊರೋನ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳೋಣ: ನಟ ದರ್ಶನ್

Update: 2020-03-24 13:11 GMT

ಬೆಂಗಳೂರು, ಮಾ. 24: ಕೊರೋನ ಸೋಂಕಿನಿಂದ ಪಾರಾಗುವುದೇ ನಮ್ಮ ಮೊದಲ ಆದ್ಯತೆಯಾಗಲಿ. ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ನಟ ದರ್ಶನ್ ತಿಳಿಸಿದ್ದಾರೆ.

ಕೊರೋನ ಸೋಂಕು ಎಷ್ಟು ಅಪಾಯಕಾರಿಯೆಂದು ಸರಕಾರ, ತಜ್ಞ ವೈದ್ಯರು ಮಾಹಿತಿ ನೀಡುತ್ತಿದ್ದರೂ ಜನತೆ ಅನಗತ್ಯವಾಗಿ ಪ್ರಯಾಣ ಮಾಡುವುದು, ಗುಂಪು ಗೂಡುವುದು ಮಾಡುತ್ತಿದ್ದಾರೆ. ಇಂತಹ ತಪ್ಪುಗಳಿಂದ ಹೆಚ್ಚಿನ ಜನ ಕೊರೋನ ಸೋಂಕಿಗೆ ತುತ್ತಾಗುವ ಅಪಾಯವಿದೆ ಎಂದು ತಿಳಿಸಿದರು.

ಜನತೆಯ ಆರೋಗ್ಯಕ್ಕಾಗಿ ಸರಕಾರ, ವೈದ್ಯರು, ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಮಗಾಗಿ, ನಮ್ಮ ಕುಟುಂಬಕ್ಕಾಗಿಯಾದರೂ ಕೊರೋನ ಸೋಂಕಿನ ಬಗ್ಗೆ ಸ್ವಯಂ ಪ್ರೇರಿತವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳೋಣವೆಂದು ಅವರು ತಿಳಿಸಿದ್ದಾರೆ.

ಇಟಲಿ, ಸ್ಪೇನ್ ದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸ್ವಲ್ಪ ಯಡವಟ್ಟು ಮಾಡಿಕೊಂಡ ಕಾರಣದಿಂದಾಗಿ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಜನತೆ ಸಾವನ್ನಪ್ಪುತ್ತಿದ್ದಾರೆ. ಇಂತಹ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದ್ದಾಗಲೂ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಹೀಗಾಗಿ ನಮ್ಮ ಹಾಗೂ ದೇಶದ ಹಿತಕ್ಕಾಗಿ ನಾವೆಲ್ಲರೂ ಸರಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸೋಣವೆಂದು ಅವರು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News