ಇಂದು ರಾತ್ರಿ 12 ಗಂಟೆಯ ನಂತರ 21 ದಿನಗಳ ಕಾಲ ಇಡೀ ದೇಶ ಲಾಕ್ ಡೌನ್: ಪ್ರಧಾನಿ ಘೋಷಣೆ

Update: 2020-03-24 17:56 GMT

ಹೊಸದಿಲ್ಲಿ, ಮಾ.24: ದೇಶಾದ್ಯಂತ ಕೊರೋನ ವೈರಸ್ ಮಹಾಮಾರಿ ಶರವೇಗದಲ್ಲಿ ಹರಡುವುದನ್ನು ತಡೆಗಟ್ಟುವ ಪ್ರಯತ್ನವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಧ್ಯರಾತ್ರಿಯಿಂದ ಎಪ್ರಿಲ್ 14ರವರೆಗೆ ಒಟ್ಟು 21 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದಾರೆ. ಇಂದು ರಾತ್ರಿ 8:00 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ‘‘ಮುಂದಿನ 21 ದಿನಗಳವರೆಗೆ ಮನೆಯನ್ನು ತೊರೆಯುವುದನ್ನೇ ಮರೆತುಬಿಡಿರಿ. ನೀವು ಈ ಲಕ್ಷ್ಮಣ ರೇಖೆಯನ್ನು ದಾಟಿದಲ್ಲಿ, ನಿಮ್ಮ ಮನೆಗೆ ವೈರಸ್ ಅನ್ನು ಆಹ್ವಾನಿಸಿದಂತ’’ ಎಂದು ಹೇಳಿದ್ದಾರೆ.

‘‘ಇಂದು ಮಧ್ಯರಾತ್ರಿಯಿಂದ ದೇಶಾದ್ಯಂತ ಸಂಪೂರ್ಣ ಲಾಕ್‌ ಡೌನ್ ಘೋಷಿಸಲಾಗುವುದು. ಇದೊಂದು ಮಾದರಿಯ ಕರ್ಫ್ಯೂ ಇದ್ದಂತೆ, ಅದು ಜನತಾ ಕರ್ಫ್ಯೂಗಿಂತಲೂ ಕಠಿಣವಾದುದಾಗಿದೆ’’ ಎಂದು ಪ್ರಧಾನಿ ತಿಳಿಸಿದ್ದಾರೆ. ರವಿವಾರ ಕರೆ ನೀಡಿದ ಜನತಾ ಕರ್ಫ್ಯೂ ಸಂಪೂರ್ಣ ಯಶಸ್ವಿಯಾಗಿರುವುದಕ್ಕಾಗಿ ನಾಗರಿಕರನ್ನು ಅವರು ಶ್ಲಾಘಿಸಿದರು.

21 ದಿನಗಳ ಲಾಕ್‌ಡೌನ್ ಒಂದು ದೀರ್ಘಾವಧಿಯ ಹಾಗೆ ಕಾಣುತ್ತಿದೆ. ಆದರೆ ಕೊರೋನ ವೈರಸ್‌ನಿಂದ ಪ್ರತಿಯೊಬ್ಬರನ್ನು ರಕ್ಷಿಸಲು ಇರುವ ಏಕೈಕ ಮಾರ್ಗ ಇದಾಗಿದೆ. ಇದನ್ನು ನಾವು 21 ದಿನಗಳೊಳಗೆ ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಕುಟುಂಬವು 21 ವರ್ಷಗಳಷ್ಟು ಹಿಂದೆ ಹೋಗಲಿದೆ’’ ಎಂದು ಪ್ರಧಾನಿ ಕೈಜೋಡಿಸಿ ಹೇಳಿದರು.

ಜನತೆಗೆ ಅವಶ್ಯಕ ಸೇವೆಗಳಿಗೆ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶ್ರಮಿಸಲಿವೆಯೆಂದು ಅವರು ಹೇಳಿದರು. ಕೊರೋನ ವೈರಸ್ ಸೋಂಕಿನ ಹಾವಳಿಯನ್ನು ನಿಯಂತ್ರಿಸಲು ಆರೋಗ್ಯ ಮೂಲ ಸೌಕರ್ಯವನ್ನು ನಿಭಾಯಿಸುವುದಕ್ಕಾಗಿ ಅವರು 15 ಸಾವಿರ ಕೋಟಿ ರೂ.ಗಳ ಪ್ಯಾಕೇಜನ್ನು ಕೂಡಾ ಘೋಷಿಸಿದ್ದಾರೆ. ಭಾರತವು ಈಗ ಅತ್ಯಂತ ನಿರ್ಣಾಯಕ ಹಂತದಲ್ಲಿದ್ದು, ಅದು ಒಂದೇ ಒಂದು ತಪ್ಪು ಹೆಜ್ಜೆಯನ್ನಿಟ್ಟಲ್ಲಿ ಮಾರಣಾಂತಿಕ ಕೊರೋನ ವೈರಸ್ ಸೋಂಕು ಕಾಡ್ಗಿಚ್ಚಿನಂತೆ ದೇಶಾದ್ಯಂತ ಹಬ್ಬಲಿದೆ ಎಂದು ಹೇಳಿದರು. ಅಮೆರಿಕದಂತಹ ವೈದ್ಯಕೀಯವಾಗಿ ಅತ್ಯಂತ ಮುಂದುವರಿದಿರುವ ದೇಶಗಳು ಕೂಡಾ ಕೊರೋನಾ ವಿರುದ್ಧ ಹೋರಾಟದಲ್ಲಿ ಜರ್ಝರಿತವಾಗಿವೆ ಎಂದವರು ಹೇಳಿದರು.

‘‘ಸಾಮಾಜಿಕ ಅಂತರವು ಕೇವಲ ರೋಗಿಗಳಿಗಷ್ಟೇ ಸೀಮಿತವಾಗಿದೆ ಎಂದು ಕೆಲವರು ಹೇಳುತ್ತಾರೆ. ಅದು ಸರಿಯಲ್ಲ. ಸಾಮಾಜಿಕ ಅಂತರ ಪಾಲನೆಯು, ವೈರಸ್ ವಿರುದ್ಧ ಹೋರಾಡಲು ಇರುವ ಏಕೈಕ ಮಾರ್ಗವಾಗಿದೆ. ಇದು ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಕುಟುಂಬ, ಪ್ರತಿಯೊಬ್ಬ ಸದಸ್ಯ ಮಾತ್ರವಲ್ಲ ಪ್ರಧಾನಿಗೂ ಕೂಡಾ ಅನ್ವಯವಾಗುತ್ತದೆ ಎಂದು ಅವರು ಹೇಳಿದರು.

ಕೊರೋನದ ವಿರುದ್ಧ ದೇಶದ ಹೋರಾಟವನ್ನು ಮನದಟ್ಟು ಮಾಡಲು ಪ್ರಧಾನಿ ತನ್ನ ಭಾಷಣದ ವೇಳೆ, ‘‘ಕೋರೋನಾ ಎಂದರೆ ‘ಕೋಯಿ ರೋಡ್ ಪರ್ ನ ನಿಕ್‌ಲೆ (ಯಾರೂ ರಸ್ತೆಗಳಿಗೆ ಇಳಿಯದಿರಿ) ಎಂಬ ಸಂದೇಶವನ್ನು ಸಾರುವ ಪೋಸ್ಟರನ್ನು ಪ್ರದರ್ಶಿಸಿದರು.

ಕೊರೋನಾ ಸೋಂಕು ಪೀಡಿತರು ಆರಂಭದಲ್ಲಿ ಅತ್ಯಂತ ಸಾಮಾನ್ಯವಾಗಿರುವಂತೆ ಕಾಣುತ್ತಾರೆ ಎಂದು ಪ್ರಧಾನಿ ಭಾಷಣದಲ್ಲಿ ಜನತೆಯ ಗಮನಸೆಳೆದರು. ‘‘ಒಂದು ವೇಳೆ ಕೊರೋನಾ ಪೀಡಿತನು ಸೋಂಕಿಗೊಳಗಾದಲ್ಲಿ ಆತನಲ್ಲಿ ರೋಗಲಕ್ಷಣಗಳು ಕಂಡುಬರಲು ಹಲವು ಇದನಗಳೇ ಬೇಕಾಗುತ್ತವೆ. ಈ ಅವಧಿಯಲ್ಲಿ ಸೋಂಕಿತ ವ್ಯಕ್ತಿಯು ಕೆಲವೇ ವಾರಗಳಲ್ಲಿ ನೂರಾರು ಮಂದಿಗೆ ಸೋಂಕು ಹರಡಬಹುದಾಗಿದೆ. ಇದು ಕಾಡ್ಗಿಚ್ಚಿನಂತೆ ಹರಡುತ್ತದೆ’’ ಎಂದು ಮೋದಿ ಎಚ್ಚರಿಕೆ ನೀಡಿದರು.

* ‘‘ಇಂದು ಮಧ್ಯರಾತ್ರಿಯಿಂದ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗುವುದು. ಇದೊಂದು ಮಾದರಿಯ ಕರ್ಫ್ಯೂ ಇದ್ದಂತೆ, ಅದು ಜನತಾ ಕರ್ಫ್ಯೂಗಿಂತಲೂ ಕಠಿಣವಾದುದಾಗಿದೆ’’.

* 21 ದಿನಗಳ ಲಾಕ್‌ಡೌನ್ ಒಂದು ದೀರ್ಘಾವಧಿಯ ಹಾಗೆ ಕಾಣುತ್ತಿದೆ. ಆದರೆ ಕೊರೋನ ವೈರಸ್‌ನಿಂದ ಪ್ರತಿಯೊಬ್ಬರನ್ನು ರಕ್ಷಿಸಲು ಇರುವ ಏಕೈಕ ಮಾರ್ಗ ಇದಾಗಿದೆ. ಇದನ್ನು ನಾವು 21 ದಿನಗಳೊಳಗೆ ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಕುಟುಂಬವು 21 ವರ್ಷಗಳಷ್ಟು ಹಿಂದೆ ಹೋಗಲಿದೆ’’

* ಅಖಿಲ ಭಾರತ ಮಟ್ಟದ ಲಾಕ್‌ಡೌನ್ ಮಂಗಳವಾರ ಮಧ್ಯರಾತ್ರಿಯಿಂದ ಮೂರು ವಾರಗಳವರೆಗೆ ಜಾರಿಗೆ ಬರಲಿದ್ದು, ಎಪ್ರಿಲ್ 14ರವರೆಗೆ ಕೊನೆಗೊಳ್ಳಲಿದೆ. ಬಹುತೇಕ ಎಲ್ಲಾ ರಾಜ್ಯಗಳು ಈ ತಿಂಗಳ ಅಂತ್ಯದವರೆಗೆ ತಾವಾಗಿಯೇ ಲಾಕ್‌ಡೌನ್ ಘೋಷಿಸಿದ್ದವು. ಆದರೆ ಪ್ರಧಾನಿಯವರ ಈ ಪ್ರತಣೆಯಿಂದ ಲಾಕ್‌ಡೌನ್ ಮುದಿನ ತಿಂಗಳ ಮಧ್ಯದವರೆಗೂ ಮುಂದುವರಿಯಲಿದೆ.

* ಕೊರೋನಾ ವಿರುದ್ಧ ಹೋರಾಟಕ್ಕಾಗಿ 15 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆ.

* ವಿಮಾನಗಳು, ರೈಲ್ವೆ ಹಾಗೂ ಬಸ್ ಸೇರಿದಂತೆ ಎಪ್ರಿಲ್ 14ರವರೆಗೆ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳು ರದ್ದುಗೊಳ್ಳಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News