ಲಾಕ್ ಡೌನ್: ಊಟಕ್ಕೂ ಪರದಾಡುತ್ತಿವೆ ಜೋಪಡಿಯೊಳಗಿನ ಜೀವಗಳು !

Update: 2020-03-24 16:14 GMT
ಸಾಂದರ್ಭಿಕ ಚಿತ್ರ

ಬೆಳಗಾವಿ, ಮಾ.24: ಬೆಳಗಾವಿ ನಗರದ ಕೋಟೆ ಕೆರೆಯ ಬದಿಯಲ್ಲಿ ಜೋಪಡಿ ಕಟ್ಟಿಕೊಂಡು, ಬೀಸುಕಲ್ಲು, ಒರಳು ಕಲ್ಲುಗಳನ್ನು ತಯಾರಿಸಿ ಅವುಗಳನ್ನು ಮಾರಿ ಜೀವನ ನಡೆಸುತ್ತಿದ್ದ ರಾಜಸ್ಥಾನ, ಬಿಹಾರ ಮೂಲದ ಜನರಿಗೆ ಕೊರೋನ ವೈರಸ್‍ನ ಭೀತಿ ಹಾಗೂ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ವ್ಯಾಪಾರವಿಲ್ಲದಂತಾಗಿದ್ದು, ಅವರು ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. 

ರಸ್ತೆಗಳಲ್ಲಿ ಓಡಾಡದಂತೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ, ಬೀಸುಕಲ್ಲು, ಒರಳು ಕಲ್ಲುಗಳನ್ನೂ ಮಾರುವಂತಿಲ್ಲ. ಜನರೂ ಖರೀದಿಸಲು ಬರುತ್ತಿಲ್ಲ. ಜೊತೆಗೆ ಓಡಾಡುವುದಕ್ಕೆ ನಿರ್ಬಂಧ ವಿಧಿಸಿದ್ದರಿಂದ ಉಳಿದ ಪುಡಿಗಾಸಿನಲ್ಲಿ ದಿನಸಿ ಅಂಗಡಿಗೆ ಹೋಗಿ ಅಗತ್ಯ ವಸ್ತುಗಳನ್ನು ಕೊಳ್ಳುವಂತಿಲ್ಲ. ಇದರಿಂದಾಗಿ ಊಟವಿಲ್ಲದೆ ಅಕ್ಷರಶಃ ಕಂಗಾಲಾಗಿದ್ದಾರೆ.

ನಮ್ಮನ್ನು ಕಷ್ಟದಿಂದ ಪಾರು ಮಾಡಲು ಅಧಿಕಾರಿಗಳು ಬರುವ ಅವಶ್ಯಕತೆ ಇದೆ ಎಂದು ಹೇಳಿರುವ ವ್ಯಾಪಾರಿಗಳು ಅಧಿಕಾರಿಗಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ಈ ವಿಚಾರವನ್ನು ತಿಳಿದು ತಕ್ಷಣವೇ ಸ್ಪಂದಿಸಿರುವ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಯ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ, ಹಲವರ ನೆರವನ್ನು ಪಡೆದು ಅಕ್ಕಿ, ಹಾಲು ಇತರೆ ದಿನಸಿ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಕೊರೋನ ಭೀತಿ ಹಿನ್ನೆಲೆಯಲ್ಲಿ ಜನ ಸಂಚಾರ ಕಡಿಮೆಯಾಗಿದ್ದು, ಈ ಜೋಪಡಿ ವಾಸಿಗಳಿಗೆ ಒಂದು ಬಿಡಿಗಾಸಿನ ವ್ಯಾಪಾರವೂ ಆಗುತ್ತಿಲ್ಲ. ಇಂತಹ ಜನಗಳಿಗೆ ಉಚಿತವಾಗಿ ಊಟ ನೀಡುವ ಕೆಲಸವನ್ನು ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಚಂದರಗಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News