ಸುಳ್ಳು ಸುದ್ದಿಗಳ ಮೂಲಕ ಮಾಧ್ಯಮಗಳಿಂದ ತಪ್ಪು ಸಂದೇಶ ರವಾನೆ: ಬಿಎಸ್‌ವೈ ಆಕ್ರೋಶ

Update: 2020-03-24 16:28 GMT

ಬೆಂಗಳೂರು, ಮಾ. 24: ನಾಳೆ(ಬುಧವಾರ)ಯಿಂದ ಯಾವುದೇ ವಾಹನವನ್ನು ಹೊರಗಡೆ ಹೋಗಲು ಬಿಡುವುದಿಲ್ಲ. ಸಂಪೂರ್ಣವಾಗಿ ನಾಕಾಬಂದಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದು(ಮಂಗಳವಾರ) ಸಂಜೆಯಿಂದ ಮಧ್ಯರಾತ್ರಿ 12ರವರೆಗೆ ಬೆಂಗಳೂರಿನಿಂದ ತಮ್ಮ ತಮ್ಮ ಊರಿಗೆ ಹೋಗುವವರು ಹೋಗಬಹುದು. ನಾಳೆಯಿಂದ(ಬುಧವಾರ) ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಕ್ಕೆ ಸಂಯಮವಿರಲಿ: ಕೊರೋನ ಸೋಂಕಿನಿಂದ ಇಡೀ ದೇಶ ಎದುರಿಸುತ್ತಿರುವ ಸಂದಗ್ಧ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಸಂಯಮದಿಂದ ವರ್ತಿಸಬೇಕು. ಬಹಳಷ್ಟು ಮಾಧ್ಯಮಗಳು ಸತ್ಯವನ್ನು ಬಿತ್ತರಿಸುತ್ತಿವೆ. ಆದರೆ, ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳ ಮುಖಾಂತರ ತಪ್ಪು ಸಂದೇಶ ರವಾನಿಸುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಿನ್ನೆ ಮತ್ತು ಇಂದು ಬೇರೆ ಜಿಲ್ಲೆಗಳಿಂದ ಬಂದ ಕೆಲವು ಜನರು ವಾಹನಗಳಲ್ಲಿ ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ಕಡೆ ಸಂಚಾರ ದಟ್ಟಣೆ ಉಂಟಾದಾಗ, ಅದನ್ನು ಸರಿಪಡಿಸಿ ಊರಿಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಪೊಲೀಸರಿಗೆ ಸೂಚನೆ ನೀಡಲಾಯಿತು. ಇದನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಬಿಂಬಿಸಿವೆ ಎಂದು ಅವರು ತಿಳಿಸಿದರು.

ಮಾಧ್ಯಮಗಳಿಗೆ ನನ್ನ ಕಳಕಳಿಯ ಮನವಿಯೆಂದರೆ ರಾಷ್ಟ್ರ ವಿಪತ್ತು ಎದುರಿಸುತ್ತಿದೆ, ಮಾಧ್ಯಮಗಳು ಸಂಯಮದಿಂದ ವರ್ತಿಸಬೇಕು, ಸರಕಾರದೊಂದಿಗೆ ಸಹಕರಿಸಬೇಕಿದೆ. 
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News