​ಈ ವಾತಾವರಣದಲ್ಲಿ ಕೊರೋನ ಹರಡುವ ಸಾಧ್ಯತೆ ಕಡಿಮೆ : ಹೊಸ ಅಧ್ಯಯನ

Update: 2020-03-26 04:06 GMT

ಹೊಸದಿಲ್ಲಿ : ಬೆಚ್ಚಗಿನ ಹಾಗೂ ತೇವಾಂಶ ಅಧಿಕ ಇರುವ ವಾತಾವರಣದಲ್ಲಿ ಕೋವಿಡ್-19 ವೈರಸ್ ಹರಡುವ ಸಾಧ್ಯತೆ ಕಡಿಮೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಏಷ್ಯನ್ ದೇಶಗಳಲ್ಲಿ ಮುಂಗಾರು ಮಳೆ ಆರಂಭವಾದ ಬಳಿಕ ಈ ಸೋಂಕು ಹರಡುವಿಕೆ ಕಡಿಮೆಯಾಗಬಹುದು ಎಂದು ಅಧ್ಯಯನ ಅಂದಾಜಿಸಿದೆ.

ವಿಶ್ವಾದ್ಯಂತ ಸುಮಾರು 20 ಸಾವಿರ ಮಂದಿಯನ್ನು ಬಲಿಪಡೆದಿರುವ ಈ ಮಾರಕ ಸೋಂಕು ಬಗೆಗಿನ ಮಾಹಿತಿಯನ್ನು ಕಲೆಹಾಕಿ ವಿಶ್ಲೇಷಿಸಿರುವ ಮೆಸೆಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಇಬ್ಬರು ಸಂಶೋಧಕರು, ಕೊರೋನ ವೈರಸ್ ಪ್ರಕರಣಗಳನ್ನು ಉಷ್ಣತೆ ಮತ್ತು ತೇವಾಂಶದ ಮಾನದಂಡದಿಂದ ಅಧ್ಯಯನ ನಡೆಸಿದ್ದಾರೆ. ಅಂದರೆ ಪ್ರತಿ ಚದರ ಮೀಟರ್ ಪ್ರದೇಶದಲ್ಲಿ ಇರುವ ನೀರಿನ ಅಂಶವನ್ನು ಮಾಪನ ಮಾಡಲಾಗಿದೆ.

ವಿಶ್ವಾದ್ಯಂತ ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಪೈಕಿ 90% ಪ್ರಕರಣಗಳು 3 ಡಿಗ್ರಿಯಿಂದ 17 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಹಾಗೂ ಪ್ರತಿ ಚದರ ಮೀಟರ್‌ಗೆ 4 ರಿಂದ 9 ಗ್ರಾಂ ತೇವಾಂಶ ಹೊಂದಿರುವ ಪ್ರದೇಶಗಳಿಂದ ವರದಿಯಾಗಿವೆ ಎಂದು ಅಧ್ಯಯನ ದೃಢಪಡಿಸಿದೆ.

ಉಷ್ಣತೆ, ನಿಚ್ಚಳ ತೇವಾಂಶ ಮತ್ತು ಸೋಂಕು ಹರಡುವಿಕೆ ನಡುವೆ ಸಂಬಂಧ ಕಂಡುಬಂದಿದೆ. ಆದರೆ ಅಧಿಕ ಉಷ್ಣಾಂಶ ಇರುವ ಅಮೆರಿಕದ ಫ್ಲೋರಿಡಾ ಹಾಗೂ ಲೂಸಿಯಾನಾದಿಂದ, ಬ್ರೆಝಿಲ್, ಭಾರತ ಹಾಗೂ ಮಲೇಷ್ಯಾದಂಥ ದೇಶಗಳಲ್ಲೂ ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ತೇವಾಂಶ ಮತ್ತು ಸೋಂಕು ಹರಡುವಿಕೆಗೆ ಸಂಬಂಧ ಇರುವ ಸಾಧ್ಯತೆ ಇದೆ. ಪ್ರಯೋಗಾಲಯ ಮಾಪನದಿಂದ ಇದು ದೃಢಪಡಬೇಕಿದೆ ಎಂದು ಅಧ್ಯಯನ ತಂಡದ ಯೂಸುಫ್ ಜಮೀಲ್ ಹೇಳಿದ್ದಾರೆ.

ಭಾರತದಲ್ಲಿ ನಿಚ್ಚಳ ತೇವಾಂಶವನ್ನು ಮಾಪನ ಮಾಡುವುದಿಲ್ಲ. ಈ ತಿಂಗಳು ಸಾಪೇಕ್ಷ ತೇವಾಂಶ ದೆಹಲಿಯಲ್ಲಿ 47% ಹಾಗೂ ಮುಂಬೈನಲ್ಲಿ 60% ಇತ್ತು. ಸಾಪೇಕ್ಷ ತೇವಾಂಶ ಎಂದರೆ ಗಾಳಿಯಲ್ಲಿರುವ ನೀರಿನ ಆವಿಯ ಪ್ರಮಾಣ ಹಾಗೂ ಗಾಳಿ ಹಿಡಿದಿಟ್ಟುಕೊಳ್ಳಬಹುದಾದ ಆವಿಯ ಪ್ರಮಾಣದ ನಡುವಿನ ಅನುಪಾತ.

ಕೋವಿಡ್-19ಗೆ ಸಾರ್ಸ್-ಕೋವಿ-2 ವೈರಸ್ ಕಾರಣವಾಗಿದ್ದು, ಇದು 2003ರಲ್ಲಿ ಹರಡಿದ ಸಿವಿಯರ್ ಅಕ್ಯೂಟ್ ರೆಸ್ಪರೇಟರಿ ಸಿಂಡ್ರೋಮ್ (ಸಾರ್ಸ್) ಸೋಂಕಿಗೆ ಸನಿಹವಾಗಿದ್ದು, ಅಧಿಕ ಉಷ್ಣಾಂಶದಲ್ಲಿ ಇದು ಉಳಿಯುವ ಹಾಗೂ ಸೋಂಕು ಹರಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News