ಕೊರೋನ ಎನ್ನುವ ಪರೀಕ್ಷೆಯನ್ನು ಗೆಲ್ಲೋಣ

Update: 2020-03-26 17:50 GMT

ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನ, ಭಾರತದಲ್ಲಿಯೂ ತನ್ನ ದುಷ್ಪರಿಣಾಮಗಳನ್ನು ವಿಸ್ತರಿಸುತ್ತಿದೆ. ಚೀನಾದಲ್ಲಿ ಸಾವಿನ ಕರೆಗಂಟೆ ಭಾರಿಸುತ್ತಿರುವಾಗಲೇ, ಭಾರತ ವಿಮಾನ ನಿಲ್ದಾಣದ ದಿಡ್ಡಿ ಬಾಗಿಲನ್ನು ಮುಚ್ಚಿದ್ದಿದ್ದರೆ, ಇಂದು ಈ ಪರಿಯ ಅನಾಹುತಗಳು ಸಂಭವಿಸುತ್ತಿರಲಿಲ್ಲವೇನೋ. ಕೊರೋನ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ನುಸುಳಿರುವ ವೈರಸ್ ಆಗಿರುವುದರಿಂದ, ಭಾರತದಲ್ಲಿ ಇದರ ಅನಾಹುತ ತೀರಾ ಕಡಿಮೆಯಾಗಿದೆ. ಇಟಲಿ, ಅಮೆರಿಕದಂತೆ ಭಾರತ ಶ್ರೀಮಂತ ರಾಷ್ಟ್ರವಲ್ಲ. ಭಾರತ ಅಭಿವೃದ್ಧಿ ಹೊಂದುತ್ತಿರುವ ಅಥವಾ ಬಡ ರಾಷ್ಟ್ರವಾಗಿರುವುದರಿಂದ ಇಲ್ಲಿಯ ಶೇ. 90ರಷ್ಟು ಜನರಿಗೆ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಅವಿನಾಭಾವ ಸಂಬಂಧವಿಲ್ಲ. ಅನಿವಾಸಿ ಭಾರತೀಯರು ಮತ್ತು ಶ್ರೀಮಂತ ಕುಳಗಳಷ್ಟೇ ಇದರ ಜೊತೆಗೆ ನಂಟನ್ನು ಹೊಂದಿದ್ದಾರೆ. ಈ ಕಾರಣದಿಂದ, ಕೊರೋನ ಹರಡುವಿಕೆಯಿಂದ ಪಾರಾಗಲು ಇಟಲಿ, ಅಮೆರಿಕದಂತಹ ದೇಶಕ್ಕಿಂತ ಹೆಚ್ಚಿನ ಅವಕಾಶ ಭಾರತಕ್ಕಿತ್ತು. ಆದರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಲ್ಲಿ ಸರಕಾರ ತೀರಾ ತಡ ಮಾಡಿತು. ಇಂದಿಗೂ ಒಂದು ಸಣ್ಣ ಆಶಾಕಿರಣವೆಂದರೆ, ಕೊರೋನ ಇನ್ನೂ ಪೂರ್ಣವಾಗಿ ಮೂರನೇ ಹಂತವನ್ನು ತಲುಪಿಲ್ಲ.

ಅನಿವಾಸಿ ಭಾರತೀಯರೊಂದಿಗೆ ಸಂಬಂಧವೇ ಇಲ್ಲದ ಭಾರತದ ತಳಸ್ತರದ ಜನರ ನಡುವೆ ಈ ಕೊರೋನ ಸೋಂಕು ಇನ್ನೂ ಗುರುತಿಸಿಕೊಂಡಿಲ್ಲ. ಒಮ್ಮೆ ಅದು ಈ ವರ್ಗವನ್ನು ತಲುಪಿ ಬಿಟ್ಟರೆ ಭಾರತದ ಸ್ಥಿತಿ ಚಿಂತಾಜನಕವಾದೀತು. ಯಾಕೆಂದರೆ, ಇಟಲಿ, ಅಮೆರಿಕದಂತಹ ದೇಶಗಳು ಅತ್ಯಾಧುನಿಕ ವೈದ್ಯಕೀಯ ಸವಲತ್ತುಗಳಿರುವ ದೇಶ. ಅಂತಹ ದೇಶವನ್ನೇ ಕೊರೋನ ನಡುಗಿಸಿ ಬಿಟ್ಟಿರುವಾಗ, ತಳಸ್ತರ ಜನರೊಳಗೆ ಇದು ಪ್ರವೇಶಿಸಿ ಬಿಟ್ಟರೆ ಅದನ್ನು ತಡೆಯಲು ಯಾವ ದಾರಿಯೂ ಸರಕಾರದ ಬಳಿಯಿಲ್ಲ. ಕೊರೋನಾ ದುಷ್ಪರಿಣಾಮಗಳನ್ನು ಎದುರಿಸಲು ಕೇಂದ್ರ ಸರಕಾರ ಮೀನಾಮೇಷ ಎಣಿಸಿ ಗುರುವಾರವಷ್ಟೇ ಪ್ಯಾಕೇಜ್ ಘೋಷಣೆ ಮಾಡಿದೆ. ಯಾಕೆಂದರೆ ದೇಶ ಆರ್ಥಿಕವಾಗಿ ದಿಕ್ಕೆಟ್ಟು ಕೂತಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ತೀವ್ರಕೊರತೆಯಿದೆ. ಭಾರತ, ಇಂದು ಲಾಕ್‌ಡೌನ್ ಒಂದನ್ನೇ ನೆಚ್ಚಿಕೊಂಡಿರುವುದಕ್ಕೆ ಇದೇ ಕಾರಣ.

ನಮಗೆ ನಾವೇ ದಿಗ್ಬಂಧನ ವಿಧಿಸಿಕೊಳ್ಳಬೇಕಾದ ಅನಿವಾರ್ಯ ಒದಗಿರುವುದೂ ಇದೇ ಕಾರಣಕ್ಕೆ. ಭಾರತಾದ್ಯಂತ ಲಾಕ್‌ಡೌನ್ ದೇಶವನ್ನು ಕಂಗಾಲಾಗಿಸಿದೆ. ಮುಂಬೈಯಂತಹ ಶಹರದಲ್ಲಂತೂ ಇದರ ಪರಿಣಾಮಗಳನ್ನು ಊಹಿಸುವುದಕ್ಕೂ ಅಸಾಧ್ಯ. ಆದರೆ ಭವಿಷ್ಯದಲ್ಲಿ ಕೊರೋನ ಸೃಷ್ಟಿಸಬಹುದಾದ ಅವಾಂತರಗಳನ್ನು ಎದುರಿಸಲು ಈ ಬಂದೋಬಸ್ತ್ ಅನಿವಾರ್ಯ ಎನ್ನುವಂತಹ ಸ್ಥಿತಿಗೆ ಬಂದು ನಿಂತಿದ್ದೇವೆ. ಕರ್ನಾಟಕದಲ್ಲಿ ಗುರುವಾರ ಕೊರೋನ ಸೋಂಕಿಗೆ ಇನ್ನೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ ಎರಡಕ್ಕೇರಿದೆ. ಇದೇ ಸಂದರ್ಭದಲ್ಲಿ ಸ್ವಯಂ ನಿರ್ಬಂಧದ ವಿಷಯದಲ್ಲಿ ಜಿಲ್ಲಾಡಳಿತ-ಜನಪ್ರತಿನಿಧಿಗಳ ನಡುವೆ ಹಲವು ಗೊಂದಲಗಳು ಎದ್ದು ಕಾಣುತ್ತಿವೆ. ನರೇಂದ್ರ ಮೋದಿಯವರು ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ದಿನವೇ, ರಾಜ್ಯ ಸರಕಾರ ಒಂದು ದಿನದ ಮಟ್ಟಿಗೆ ನಗರದ ಜನರು ಊರಿಗೆ ಹೋಗುವುದಕ್ಕೆ ಅವಕಾಶ ನೀಡಿತು. ಈ ನಿರ್ಧಾರ ಭವಿಷ್ಯದಲ್ಲಿ ಕೊರೋನ ಸೋಂಕನ್ನು ನಗರದಿಂದ ಹಳ್ಳಿಯ ಕಡೆಗೆ ಒಯ್ಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ವಿದೇಶದಲ್ಲಿದ್ದ ವೈರಸ್, ಅನಿವಾಸಿಗಳ ಮೂಲಕ ದೇಶದ ನಗರಗಳಿಗೆ ಕಾಲಿಟ್ಟಿತು.

ಬೆಂಗಳೂರಿನಂತಹ ನಗರಗಳಲ್ಲಿ ಯಾರ್ಯಾರೆಲ್ಲ ಈ ಸೋಂಕಿಗೆ ಒಳಗಾಗಿದ್ದಾರೆ ಎನ್ನುವುದು ಇನ್ನೂ ಖಚಿತಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ನಗರಗಳಲ್ಲಿರುವ ಜನರು ತಾತ್ಕಾಲಿಕವಾಗಿ ಊರಿಗೆ ಹೊರಡದೇ ಇರುವುದರಿಂದ ಹೆಚ್ಚು ಪ್ರಯೋಜನವಿದೆ. ಆದುದರಿಂದ ಸದ್ಯಕ್ಕೆ ಬೃಹತ್ ನಗರ ಮತ್ತು ಊರುಗಳ ನಡುವಿನ ದಿಡ್ಡಿ ಬಾಗಿಲನ್ನು ಮುಚ್ಚುವುದು ಅತ್ಯಗತ್ಯವಾಗಿದೆ. ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ಒಂದು ಹೇಳಿಕೆ ನೀಡಿದರೆ, ಜನಪ್ರತಿನಿಧಿಗಳು ಅದಕ್ಕೆ ವ್ಯತಿರಿಕ್ತವಾದ ಹೇಳಿಕೆಗಳು ನೀಡುವುದೂ ನಡೆಯುತ್ತಿದೆ. ಒಂದೆಡೆ ಬಿಜೆಪಿಯ ನಾಯಕರೊಬ್ಬರು ‘ಸಂಪೂರ್ಣ ಕರ್ಫ್ಯೂ’ ಎಂಬ ಹೇಳಿಕೆ ನೀಡುತ್ತಾರೆ. ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ‘ಸಂಪೂರ್ಣ ಮುಚ್ಚುಗಡೆಯಿಲ್ಲ. ಮಧ್ಯಾಹ್ನ 12 ಗಂಟೆಯವರೆಗೆ ಅತ್ಯಗತ್ಯ ವಸ್ತುಗಳ ಅಂಗಗಳು ತೆರೆದಿರುತ್ತವೆ’ ಎಂದು ಹೇಳುತ್ತಾರೆ. ಜನರು ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ತಿಳಿಯದೆ ಗೊಂದಲಕ್ಕೊಳಗಾಗುತ್ತಿದ್ದಾರೆ.

ಆದುದರಿಂದ, ಮುಖ್ಯಮಂತ್ರಿ ಯಡಿಯೂರಪ್ಪನವರು, ತಮ್ಮ ಸಹೋದ್ಯೋಗಿಗಳಿಗೆ ‘ಅನಗತ್ಯ ಪತ್ರಿಕಾಹೇಳಿಕೆಗಳನ್ನು ನೀಡದಂತೆ ಎಚ್ಚರಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ‘ಕೊರೋನ ಕರ್ಫ್ಯೂ’ವನ್ನು ಅನರ್ಥ ಮಾಡಿಕೊಂಡಿರುವ ಪೊಲೀಸ್ ಸಿಬ್ಬಂದಿ ರಸ್ತೆಗಿಳಿದ ಜನರ ಮೇಲೆ ಬರ್ಬರ ದೌರ್ಜನ್ಯ ಎಸಗುತ್ತಿದ್ದಾರೆ. ‘ಈ ಕರ್ಫ್ಯೂವನ್ನು ಯಾಕೆ ಹೇರಲಾಗಿದೆ. ಇದರ ಹಿಂದಿರುವ ಮಾನವೀಯವಾದ ಉದ್ದೇಶವೇನು’ ಎನ್ನುವುದರ ಕುರಿತಂತೆ ಎಳ್ಳಷ್ಟು ಮಾಹಿತಿಯೂ ಪೊಲೀಸರಿಗೆ ಇದ್ದಂತಿಲ್ಲ. ಸಾಧಾರಣವಾಗಿ ದೇಶದಲ್ಲಿ ಕರ್ಫ್ಯೂ ವಿಧಿಸುವುದು ಕಾನೂನು ವ್ಯವಸ್ಥೆ ಅಸ್ತವ್ಯಸ್ತವಾದಾಗ ಮತ್ತು ಹಿಂಸಾಚಾರ ಭುಗಿಲೆದ್ದಾಗ. ಆದರೆ ಇಂದು ಕರ್ಫ್ಯೂ ವಿಧಿಸಿರುವುದು ಒಂದು ಸಾಂಕ್ರಾಮಿಕ ರೋಗದಿಂದ ಜನಸಮುದಾಯವನ್ನು ರಕ್ಷಿಸುವುದಕ್ಕಾಗಿ. ಬೇರೆ ಸಂದರ್ಭಗಳಲ್ಲಿ ವಿಧಿಸುವ ಕರ್ಫ್ಯೂ ಸಮಯದಲ್ಲಿ ಪೊಲೀಸರು ದುಷ್ಕರ್ಮಿಗಳನ್ನು, ಗಲಭೆ ಕೋರರನ್ನು ಮುಖಾಮುಖಿಯಾಗುವ ಸಂದರ್ಭ ಬರುತ್ತದೆ. ಆಗ ತುಸು ನಿಷ್ಠುರವಾಗಿ ವರ್ತಿಸಬೇಕಾಗುತ್ತದೆ. ಆದರೆ ಈಗಿನ ಕರ್ಫ್ಯೂ ಈ ಹಿಂದಿನ ಕರ್ಫ್ಯೂನಂತಲ್ಲ. ಸಾರ್ವಜನಿಕವಾಗಿ ಜನರು ಅಂತರಗಳನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ನಿಜ. ಗುಂಪಾಗಿ ಇದ್ದರೆ ಅವರನ್ನು ಚದುರಿಸುವುದು ಪೊಲೀಸರ ಕರ್ತವ್ಯ. ಆದರೆ ರಾಜ್ಯವೂ ಸೇರಿದಂತೆ ದೇಶಾದ್ಯಂತ ಪೊಲೀಸರು ಈ ಕರ್ಫ್ಯೂವನ್ನು ಅಮಾಯಕರ ಮೇಲೆ ತಮ್ಮ ದರ್ಪ ಸಾಧಿಸಲು ಸಿಕ್ಕಿದ ಅವಕಾಶ ಎಂಬಂತೆ ಬಳಸುತ್ತಿದ್ದಾರೆ.

ಹಾಲು ಕೊಳ್ಳುವುದಕ್ಕೆಂದು ರಸ್ತೆಗೆ ಕಾಲಿಟ್ಟ ಅಮಾಯಕನಿಗೆ ಪೊಲೀಸರು ಯದ್ವಾತದ್ವಾ ಥಳಿಸಿದ್ದು, ಆತ ಮೃತಪಟ್ಟಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ. ಉತ್ತರ ಪ್ರದೇಶದಲ್ಲಿ ತಮ್ಮ ಊರಿನೆಡೆಗೆ ಸಾಗುತ್ತಿದ್ದ ಕಾರ್ಮಿಕರ ಮೇಲೆ ಪೊಲೀಸರು ಬರ್ಬರವಾಗಿ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲೂ ಇದು ಮುಂದುವರಿದಿದೆ. ಕೊರೋನದಂತಹ ವೈರಸ್ ಜನಸಾಮಾನ್ಯರ ಬದುಕನ್ನೇ ಮೂರಾಬಟ್ಟೆ ಮಾಡಿ ಅವರನ್ನು ಕಂಗಾಲಾಗಿಸಿರುವ ಈ ಹೊತ್ತಿನಲ್ಲಿ ರಸ್ತೆಗೆ ಕಾಲಿಟ್ಟ ಏಕಾಂಗಿಯ ಮೇಲೆ ಲಾಠಿಯಿಂದ ಬರ್ಬರವಾಗಿ ಥಳಿಸುವ ಅಧಿಕಾರವನ್ನು ಪೊಲೀಸರಿಗೆ ಕೊಟ್ಟವರು ಯಾರು? ಗುಂಪುಗೂಡಿದ್ದರೆ ಅವರನ್ನು ಲಾಠಿಯ ಮೂಲಕ ಚದುರಿಸುವುದು ಸರಿ. ಯಾವುದೇ ಜೀವನಾವಶ್ಯಕ ಕಾರಣಕ್ಕಾಗಿ ರಸ್ತೆಗಿಳಿದ ಒಬ್ಬಂಟಿಯ ಮೇಲೆಯೂ ಈ ದೌರ್ಜನ್ಯ ಎಸಗಿದರೆ ಅದಕ್ಕೆ ಅರ್ಥವೇನು? ಇಷ್ಟಕ್ಕೂ ಒಬ್ಬಂಟಿಯಿಂದ ಈ ರೋಗ ಹರಡುವುದಿಲ್ಲ ಎನ್ನುವ ಪ್ರಾಥಮಿಕ ಜ್ಞಾನವೂ ಪೊಲೀಸರಿಗೆ ಇದ್ದಂತಿಲ್ಲ. ಹಾಗೆ ಕಾಣಿಸಿಕೊಂಡ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿ ಅವರಲ್ಲಿ ಜಾಗೃತಿಯನ್ನು ಬಿತ್ತಬೇಕೇ ಹೊರತು, ಆತಂಕ, ಭಯವನ್ನು ಬಿತ್ತುವುದಲ್ಲ. ಇದನ್ನು ಪೊಲೀಸ್ ಇಲಾಖೆ ತಮ್ಮ ಸಿಬ್ಬಂದಿಗೆ ಮನವರಿಕೆ ಮಾಡಿಕೊಡುವುದು ಎಲ್ಲಕ್ಕಿಂತ ಮುಖ್ಯವಾಗಿದೆ.

ಇದೇ ಸಂದರ್ಭದಲ್ಲಿ ವಿದೇಶಗಳಿಂದ ಬಂದ ಅನಿವಾಸಿಗಳನ್ನು ಕೀಳಾಗಿ ನೋಡುವುದು, ಅವರನ್ನು ವ್ಯಂಗ್ಯ ಮಾಡುವುದು, ಅಸ್ಪಶ್ಯರಂತೆ ಕಾಣುವುದು ಅತ್ಯಂತ ಅಮಾನವೀಯ. ಈ ಅನಿವಾಸಿಗಳು ಯಾವುದೋ ವೈಭವದ ಬದುಕನ್ನು ಅರಸಿ ವಿದೇಶಗಳಿಗೆ ಹೊರಟವರಲ್ಲ. ತಮ್ಮ ಬದುಕನ್ನು ಒತ್ತೆಯಿಟ್ಟು ವಿದೇಶಗಳಲ್ಲಿ ದುಡಿದು ಭಾರತೀಯ ಕುಟುಂಬಗಳನ್ನು ಪೊರೆದವರು. ವಿದೇಶಗಳಲ್ಲಿ ನೆಲೆಸಿ ಭಾರತದ ಆರ್ಥಿಕತೆಗೆ ಇವರು ಕೊಡುತ್ತಿರುವ ಕೊಡುಗೆಗಳೂ ಅಪಾರ. ಇಂದು ಸಾಂಕ್ರಾಮಿಕ ಸೋಂಕಿನ ಕಾರಣದಿಂದ ಮರಳಿ ತಮ್ಮ ಗೂಡಿಗೆ ರಕ್ಷಣೆ ಅರಸಿ ಬಂದಿದ್ದಾರೆ. ಅವರನ್ನು ಈಗ ಶತ್ರುಗಳಂ  ತೆ, ರೋಗಿಗಳಂತೆ ಆತಂಕದಿಂದ ನೋಡದೆ ಪ್ರೀತಿ ಭಾವದಿಂದ ಸ್ವೀಕರಿಸಬೇಕು. ಇದೇ ಸಂದರ್ಭದಲ್ಲಿ ರೋಗದ ಕುರಿತ ಸರ್ವ ಜಾಗರೂಕತೆಯನ್ನು ಪಾಲಿಸಿ ಅವರನ್ನೂ, ನಮ್ಮನ್ನೂ ರಕ್ಷಿಸಿಕೊಳ್ಳಬೇಕಾಗಿದೆ.

ಹಲವೆಡೆ ಬಾಡಿಗೆ ಮನೆಯಲ್ಲಿರುವ ವೈದ್ಯರನ್ನು ಎಬ್ಬಿಸುವ ಕೆಲಸ ನಡೆಯುತ್ತಿದೆ. ಕೊರೋನ ವೈರಸ್ ವಿರುದ್ಧ ತಮ್ಮ ಪ್ರಾಣ ಒತ್ತೆಯಿಟ್ಟು ಒಂದೆಡೆ ವೈದ್ಯರು ಹೋರಾಡುತ್ತಿರುವಾಗ, ನಾವು ನಮ್ಮ ಆರೋಗ್ಯದ ಮೇಲಿನ ಕಾಳಜಿಯಿಂದ ವೈದ್ಯರನ್ನು ಮನೆ ಬಿಡಿಸಲು ಮುಂದಾಗುವುದು ಸ್ವಾರ್ಥದ ಪರಮಾವಧಿ. ವೈದ್ಯರೂ ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಾಮೂಹಿಕ ರಜೆ ಘೋಷಿಸಿದರೆ ಜನರ ಸ್ಥಿತಿ ಏನಾಗಬೇಕು? ರೋಗಗಳು ಬರುವುದೇ ಮನುಷ್ಯನೊಳಗೆ ಇನ್ನೂ ಮನುಷ್ಯತ್ವ ಉಳಿದಿದೆಯೇ ಎನ್ನುವುದನ್ನು ಪರೀಕ್ಷಿಸುವುದಕ್ಕೆ. ರೋಗವನ್ನು ಎದುರಿಸಿ ಗೆಲ್ಲುವುದರ ಜೊತೆಗೆ ಈ ಪರೀಕ್ಷೆಯನ್ನೂ ನಾವು ಗೆಲ್ಲಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News