ಕೊರೋನ: ಹೆಚ್ಚಿನ ತಪಾಸಣೆ ಅಗತ್ಯ

Update: 2020-03-27 17:42 GMT

ಸೋಂಕಿತರು ಅಸ್ಪಶ್ಯರಲ್ಲ, ಸಜೀವ ಬಾಂಬ್ ಅಲ್ಲ ಅಥವಾ ಭಯೋತ್ಪಾದಕರಲ್ಲ. ಜಾಗೃತಿ ಇರಲಿ, ಆತಂಕ ಬೇಡ, ಜನರನ್ನು ಸಂಶಯದಿಂದ ಅನುಮಾನದಿಂದ ನೋಡಬೇಡಿ. ಯಾವುದೇ ದೇಶದ ಪ್ರಜೆ ಆಗಿರಲಿ ನೋಡಲು ಹೇಗೆ ಕಾಣಲಿ, ಅವಮಾನಿಸಬೇಡಿ. ಯಾರೂ ನಿಮಗೆ ಸೋಂಕು ಹರಡಲು ತಾವೇ ಸೋಂಕಿತರಾಗಿ ಸಾವಿನ ಜೊತೆ ಗುದ್ದಾಡುವುದಿಲ್ಲ. ಸೋಂಕಿತರು ಗೊತ್ತಿಲ್ಲದೆ ಸೋಂಕು ಪಡೆದಿದ್ದಾರೆ. ಸುಳ್ಳು ಸುದ್ದಿ ಹರಡಬೇಡಿ. ವೈದ್ಯರು, ವಿಜ್ಞಾನಿಗಳು ಇಲ್ಲದ ದೂರದರ್ಶನ ಕಾರ್ಯಕ್ರಮ ನೋಡಬೇಡಿ, ಅನಗತ್ಯ ಸಾಮಾನು ಸಂಗ್ರಹಿಸಬೇಡಿ, ವಿಜ್ಞಾನದ ಮೇಲೆ ಭರವಸೆ ಇಡಿ. 21ದಿನಗಳ ಲಾಕ್‌ಡೌನ್ ಅನ್ನು ನಿಮ್ಮನ್ನು ನಿಮ್ಮ ಜೊತೆಗಿರುವವರನ್ನು ಸಮಾಜದ ನೈಸರ್ಗಿಕ ವ್ಯವಸ್ಥೆಯನ್ನು ಅರಿಯಲು, ಚಿಂತಿಸಲು ಬಳಸಿ. ಆರೋಗ್ಯದ ಕಾಳಜಿ ಇರಲಿ. ಎಲ್ಲಾ ಮಾಹಿತಿಗೆ ಕೆಳಗಿನ ದೂರವಾಣಿ ಬಳಸಿ +41 79 893 18 92 ವಿಶ್ವ ಆರೋಗ್ಯ ಸಂಸ್ಥೆ ವಾಟ್ಸ್‌ಆ್ಯಪ್, 9013151515 ಕೇಂದ್ರ ಸರಕಾರ ವಾಟ್ಸ್‌ಆ್ಯಪ್, +91 96320 60006 ರಾಜ್ಯ ಸರಕಾರ ಟೆಲಿಗ್ರಾಮ್.


ನಂಜನಗೂಡಿನ ಔಷಧಿ ಕಂಪೆನಿಯ ಉದ್ಯೋಗಿಯೊಬ್ಬರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ.
ಅವರು ಯಾವುದೇ ವಿದೇಶಿ ಪ್ರವಾಸ ಹೋಗಿಲ್ಲ ಅಥವಾ ವಿದೇಶದಿಂದ ಬಂದಿಲ್ಲ ಅಲ್ಲದೆ ವಿದೇಶಕ್ಕೆ ಹೋಗಿ ಬಂದವರ ಸಂಪರ್ಕಕ್ಕೂ ಬಂದಿಲ್ಲ ಎಂದು ಹೇಳಲಾಗಿದೆ.

ತಮ್ಮ ಉದ್ಯೋಗದ ಅನಿವಾರ್ಯತೆಯ ಕಾರಣ ಅವರು ಆಸ್ಪತ್ರೆಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ಸಂಪರ್ಕಕ್ಕೆ ಬಂದಿದ್ದು ಅದೇ ಸೋಂಕು ಬರಲು ಕಾರಣ ಎನ್ನಲಾಗಿದೆ. ಆದರೆ ಅವರಿಗೆ ಸೋಂಕು ಆಸ್ಪತ್ರೆಯಿಂದ/ವೈದ್ಯರಿಂದ ಬಂದಿದೆ ಎಂದಾದರೆ ಆಸ್ಪತ್ರೆಯ ಇನ್ನಿತರ ಜನರಿಗೂ ಸೋಂಕು ಇರಬೇಕು. ಆದರೆ ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ಗೊತ್ತಾಗಿಲ್ಲ. ಇನ್ನೊಂದು ವರದಿ ಪ್ರಕಾರ ಅವರು ಅಸ್ಟ್ರೇಲಿಯದಿಂದ ಬಂದ ಸ್ನೇಹಿತರ ಜೊತೆ ಕಾಲ ಕಳೆದಿದ್ದರು. ಆದರೆ ಅವರ ಸ್ನೇಹಿತರ ಪರೀಕ್ಷೆ ಆಗಿಲ್ಲ! (ಕೋಲ್ಕತ್ತಾ ಹಾಗೂ ಪುಣೆಯ ಇಬ್ಬರಿಗೆ ಹೀಗೆ ನೇರ ವಿದೇಶ ಪ್ರವಾಸ ಮಾಡದೆಯೂ ಸೋಂಕು ಬಂದಿದೆ) ಇದರಿಂದ ಎರಡು ಮುಖ್ಯ ವಿಚಾರ ನಾವು ತಿಳಿದುಕೊಳ್ಳಬಹುದು.

1. ಸೋಂಕು ಸಮುದಾಯ ಮಟ್ಟದಲ್ಲಿ ಹರಡುತ್ತಿದೆ. ವಿದೇಶದಿಂದ ಬಂದವರ ಮೇಲೆ ನಿಗಾ ಇಡುವುದು ಸಾಕಾಗುವುದಿಲ್ಲ ಕಾರಣ ಸೋಂಕು ಸಮುದಾಯಕ್ಕೆ ವ್ಯಾಪಿಸಿದ್ದು ಒಬ್ಬರಿಂದ ಮತ್ತೊಬ್ಬರಿಗೆ ದಾಟುತ್ತಿದೆ. ಹಾಗಾಗಿ ಅದನ್ನು ಪತ್ತೆಹಚ್ಚಿ ನಿಲ್ಲಿಸಲು ಮುಖ್ಯವಾಗಿ ಬೇಕಾಗಿರುವುದು ತಪಾಸಣೆ ಮಾಡುವುದು. ರೋಗದ ಲಕ್ಷಣ ತೀವ್ರವಾಗಿ ಇರುವವರು ಮಾತ್ರವಲ್ಲದೆ ಸೋಂಕಿತರ ಸಮೀಪಕ್ಕೆ ಬಂದ ಎಲ್ಲರ ಪರೀಕ್ಷೆ ಮಾಡುವುದು, ಆಸ್ಪತ್ರೆಯ ವೈದ್ಯರು ಆರೋಗ್ಯ ಸಹಾಯಕರ ಸಾಮೂಹಿಕ ಪರೀಕ್ಷೆ ಮಾಡುವುದು.

2. ಸೋಂಕು ಆಸ್ಪತ್ರೆಯಿಂದ ಆ ವ್ಯಕ್ತಿಗೆ ಬಂದಿದೆ ಎಂದಾದರೆ ಬೇರೆ ಯಾರು ಈವರೆಗೆ ರೋಗದ ಲಕ್ಷಣ ತೋರಿಸಿಲ್ಲ. ಅಂದರೆ ನಮ್ಮಲ್ಲಿ ವಾಸ್ತವವಾಗಿ ಸೋಂಕು ತಗಲಿದವರು ಹೆಚ್ಚು ಪ್ರಮಾಣದಲ್ಲಿ ಇದ್ದು ಯಾವುದೇ ಲಕ್ಷಣ ತೋರಿಸದೆ ಸೋಂಕು ಅವರಲ್ಲಿ ಗುಪ್ತವಾಗಿ ಇದೆ. ಅವರು ಕೇವಲ ರೋಗ ಹರಡುವ ವಾಹಕವಾಗಿ ಇದ್ದಾರೆಯೇ ವಿನಹ ರೋಗ ಅವರಿಗೆ ಏನು ಮಾಡುತ್ತಿಲ್ಲ. ಇದು ಕೊರೋನ ವಿರುದ್ಧದ ಹೋರಾಟವನ್ನು ಮತ್ತಷ್ಟು ಕಠಿಣ ಮಾಡುತ್ತದೆ. ಇಡೀ ಕರ್ನಾಟಕದಲ್ಲಿ ಕೇವಲ 5-6 ಪ್ರಯೋಗಾಲಯ ಸೋಂಕಿನ ತಪಾಸಣೆ ಮಾಡುತ್ತಿದೆ. ರೋಗದ ಮಿತಿಮೀರಿದ ಲಕ್ಷಣ ಇರುವವರ ತಪಾಸಣೆ ಮಾತ್ರ ಮಾಡಲಾಗುತ್ತಿದೆ. ಇಡೀ ದೇಶದಲ್ಲಿ ದಿನಕ್ಕೆ ಕೇವಲ ಸುಮಾರು 2,000 ಜನರ ತಪಾಸಣೆ ಮಾಡಲಾಗುತ್ತಿದೆ. ದೇಶದ ಜನಸಂಖ್ಯೆ ಸುಮಾರು 130 ಕೋಟಿ ಇದೆ.ಮಾರ್ಚ್ ಎರಡನೆಯ ವಾರದವರೆಗೂ ಸರಕಾರದಿಂದ ಅವ್ಯವಸ್ಥೆಯಾಗಿದ್ದು ಕಾರಣಕ್ಕೆ ಆಗಿದ್ದು, ವಿದೇಶಿ ಪ್ರಯಾಣಿಕರ ಸರಿಯಾದ ತಪಾಸಣೆ ಮಾಡಲಿಲ್ಲ ಅಲ್ಲದೆ ಕ್ವಾರಂಟೈನ್ ಕೂಡ ಸರಿಯಾಗಿ ಆಗಲಿಲ್ಲ. ಹಾಗಾಗಿ ನಮ್ಮ ನಡುವೆ ಹೆಚ್ಚು ಸೋಂಕಿತರು ಇದ್ದು ಸರಕಾರ ಬೇಕಾದಷ್ಟು ಪರೀಕ್ಷೆ ಮಾಡದೆಯೇ ನೈಜ ಅಂಕಿಅಂಶ ಗೊತ್ತಾಗದಂತೆ ಮಾಡುತ್ತಿದೆ ಎನ್ನಲೇಬೇಕಾಗುತ್ತದೆ. ಹಾಗಾಗಿ ಜವಾಬ್ದಾರಿ ಇರುವ ನಾವು ಸಾಮಾಜಿಕ ಮಾಧ್ಯಮ, ಸರಕಾರದ ಇ-ಮೇಲ್, ದೂರವಾಣಿ ಇನ್ನಾವುದೇ ಮಾರ್ಗ ಸಂಪರ್ಕಿಸಿ ಸರಕಾರದ ಮುಂದೆ ಕೆಳಗಿನ ಬೇಡಿಕೆ ಈಡೇರಿಸುವಂತೆ ಕೇಳಿಕೊಳ್ಳಬೇಕು.

1. ಪ್ರಯೋಗಾಲಯ ಸ್ಥಾಪಿಸಲು ಕೇಂದ್ರದ ಅನುಮತಿ ಅಗತ್ಯ, ಪರೀಕ್ಷೆ ಕಿಟ್ ಕೂಡ ಕೇಂದ್ರವೇ ಕೊಡುವುದು. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರ ಇದೆ. ಹಾಗಾಗಿ ಸರಕಾರ ರಾಜ್ಯದ ಪ್ರತೀ ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ ಒಂದು ವೈರಾಣು ಸೋಂಕು ಪತ್ತೆ ಆಧುನಿಕ ಪ್ರಯೋಗಾಲಯ ತುರ್ತಾಗಿ ಸ್ಥಾಪಿಸಬೇಕು. ಜನಬಾಹುಳ್ಯದ ಜಿಲ್ಲೆಗಳಲ್ಲಿ ಪ್ರಯೋಗಾಲಯದ ಸಂಖ್ಯೆ ಹೆಚ್ಚಾಗಬೇಕು. ಈಗ ಪ್ರತಿ 10 ಲಕ್ಷ ಜನರಲ್ಲಿ 15 ಜನಕ್ಕೆ ತಪಾಸಣೆ ಮಾಡುತ್ತಿದ್ದೇವೆ. ಇದು ಪ್ರಪಂಚದಲ್ಲಿ ಅತ್ಯಂತ ಕಡಿಮೆ ತಪಾಸಣೆ ಮಾಡುವ ದೇಶಗಳ ಸಾಲಿನಲ್ಲಿದೆ.

2. ಈಗ ಹೆಚ್ಚಾಗಿ ಬಳಕೆಯಲ್ಲಿರುವ ತಪಾಸಣಾ ಕಿಟ್ ಒಂದು ತಪಾಸಣೆಗೆ ಸುಮಾರು 4ಗಂಟೆ ತೆಗೆದುಕೊಳ್ಳುತ್ತದೆ. ಮೊನ್ನೆ ಕೇಂದ್ರ ಒಪ್ಪಿಗೆ ಕೊಟ್ಟ ಮೈ ಲ್ಯಾಬ್ ಕಂಪೆನಿಯ ಕಿಟ್ 2:30 ಗಂಟೆಯಲ್ಲಿ ಫಲಿತಾಂಶ ಕೊಡುತ್ತದೆ. ವಿದೇಶದ ಕೆಲವು ಕಿಟ್‌ಗಳು ಸರಳವಾಗಿ ಸುಲಭವಾಗಿ ಕಡಿಮೆ ಸಮಯದಲ್ಲಿ ಫಲಿತಾಂಶ ಕೊಡುತ್ತವೆ ಹಾಗಾಗಿ ಅಂತಹ ಕಿಟ್ ಸರಕಾರ ತರಿಸಿ ಕೊಡಬೇಕು. ಕಾಶ್ಮೀರದ ಒಬ್ಬ ಸೋಂಕಿತರ 2 ಸಲದ ಪರೀಕ್ಷೆ ಅವರ ಸೋಂಕನ್ನು ಪತ್ತೆ ಹಚ್ಚದೆ ಮೂರನೆಯ ಸಲದ ಪರೀಕ್ಷೆ ಪಾಸಿಟಿವ್ ಎಂದು ಗುರುತಿಸಿತು.

3. ಖಾಸಗಿ ಹಾಗೂ ಸರಕಾರಿ ಅನುದಾನಿತ ಸಂಶೋಧನಾ ಸಂಸ್ಥೆಯಲ್ಲಿ ಆರ್‌ಟಿಪಿಸಿಆರ್ ಯಂತ್ರ ಬಳಸಿ ಪರೀಕ್ಷೆ ಮಾಡುವ ಹಲವಾರು ಸಂಶೋಧನಾ ಸಹಾಯಕರು ಇದ್ದಾರೆ. ಅವರನ್ನು ಸೋಂಕು ಪತ್ತೆ ಪ್ರಯೋಗಾಲಯದಲ್ಲಿ ಬಳಸಿಕೊಂಡರೆ ಪರೀಕ್ಷೆಯ ಸಂಖ್ಯೆ ಹೆಚ್ಚಿಸಬಹುದು ಹಾಗೂ ಗುಣಮಟ್ಟ ಸುಧಾರಿಸಬಹುದು.

4. ಕರ್ನಾಟಕದಲ್ಲಿ ಪ್ರತಿನಿತ್ಯ ಕನಿಷ್ಠ 5,000 ಪರೀಕ್ಷೆ ಮಾಡುವ ಸಾಮರ್ಥ್ಯದ ಪ್ರಯೋಗಾಲಯ, ಕಿಟ್ ಹಾಗೂ ಸಿಬ್ಬಂದಿ ಬೇಕು. ಅದಕ್ಕೆ ಸರಕಾರ ವ್ಯವಸ್ಥೆ ಮಾಡಬೇಕು. ಮಾಡಬೇಕಾದ ಪರೀಕ್ಷೆ, ತಪಾಸಣೆ ಮಾಡದೆ, ಊರಿಗೆ ಬಾಗಿಲು ಹಾಕಿ ದೇಶವನ್ನು ಮಾತ್ರ ಬಂದ್ ಮಾಡಿದರೆ ಸೋಂಕಿನ ನಿಯಂತ್ರಣ ಆಗಲ್ಲ. ಜನರಲ್ಲಿ ಆತಂಕ ಇದ್ದಾಗ ಸರಕಾರದ ಬಳಿ ಪೊಲೀಸ್ ಹಾಗೂ ಮಿಲಿಟರಿ ಇರುವಾಗ ಬಂದ್ ಮಾಡೋದು ಬಹಳ ಸುಲಭ. ಆದರೆ ನಾವು ಎದುರಿಸುತ್ತಾ ಇರೋದು ಆರೋಗ್ಯದ ತುರ್ತು ಪರಿಸ್ಥಿತಿ, ಆರೋಗ್ಯದ ಸಮಸ್ಯೆ. ಅದನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಭಯ, ಹಿಂಸೆಯಿಂದ ಅಲ್ಲ. ರೋಗ ಪತ್ತೆಗೆ ಗಂಟಲಿನ ತೇವ, ಎಂಜಲು, ರಕ್ತ ಬಳಸಲಾಗುತ್ತದೆ. ಅದು ವ್ಯಕ್ತಿಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೇರೆ ಹಲವು ರೋಗಪತ್ತೆ ತಪಾಸಣೆಯಲ್ಲಿ ಆಗುವಂತೆ ಇಲ್ಲ. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಹೆಚ್ಚು ಹೆಚ್ಚು ತಪಾಸಣೆ ಮಾಡುವಂತೆ ಕೇಳಿಕೊಳ್ಳುತ್ತಿದೆ.

ಸರಕಾರಕ್ಕೆ ಮನವಿ ಕೊಡಿ, ಶಾಸಕರಿಗೆ ಮನವಿ ಕೊಡಿ, ಪ್ರಧಾನಿಗೆ ಬರೆಯಿರಿ. ಇದು ಎಲ್ಲರ ಸಮಸ್ಯೆ. ದೇಶದ ಬಂದ್ ಹೆಚ್ಚಾದರೆ ನಮ್ಮಂತಹ ಬಡ ದೇಶದ ಭವಿಷ್ಯ ಏನಾಗಬಹುದು? ಬೇಸಿಗೆಯ ಈ ಸಮಯದಲ್ಲಿ ಕೃಷಿ ಚಟುವಟಿಕೆ ನಿಂತರೆ ಮುಂದಿನ ವರ್ಷ ತಿನ್ನೋದಕ್ಕೆ ಎನು ಮಾಡುವುದು? ಬಂದ್ ಬೇಕು. ಮನುಷ್ಯರು ಗುಂಪಾಗಬಾರದು, ಒಬ್ಬರಿಂದ ಮತ್ತೊಬ್ಬರು ದೂರ ಇರಬೇಕು, ಮನೆಯಲ್ಲೇ ಇರಬೇಕು, ಶುಚಿತ್ವ ಪಾಲಿಸಬೇಕು. ಆದರೆ ಅವೆಲ್ಲವೂ ನಾವು ತಪಾಸಣೆ ಮಾಡಿ ಸೋಂಕು ಪತ್ತೆ ಹಚ್ಚಿ ಸೋಂಕಿತರನ್ನು ಪ್ರತ್ಯೇಕಿಸಿ ಆರೈಕೆ ಮಾಡದಿದ್ದರೆ ವ್ಯರ್ಥವಾಗುವುದು.

Writer - ಕೃಷಿಕ ಎ.ವಿ. ಶೃಂಗೇರಿ

contributor

Editor - ಕೃಷಿಕ ಎ.ವಿ. ಶೃಂಗೇರಿ

contributor

Similar News