ಸುರಕ್ಷತಾ ಕ್ರಮ ಕೈಗೊಂಡು ಮದ್ರಸದಲ್ಲಿ ಆಶ್ರಯ ಪಡೆದಿದ್ದ ಪ್ರಯಾಣಿಕರನ್ನು ಹೊರಗೆಳೆದು ಥಳಿಸಿದ ಅಧಿಕಾರಿಗಳು: ಆರೋಪ

Update: 2020-03-28 14:56 GMT

# ಮುಧೋಳ ಮಸೀದಿಯಲ್ಲಿ ಲಾಠಿ ಚಾರ್ಜ್ ಕುರಿತ ಫ್ಯಾಕ್ಟ್ ಚೆಕ್

ಕೊರೋನ ನಿಯಂತ್ರಣಕ್ಕೆ ನೀಡಿದ ಸೂಚನೆ ಉಲ್ಲಂಘಿಸಿ ಮುಧೋಳದ ಮಸೀದಿಯೊಂದರಲ್ಲಿ ನಮಾಝ್ ಮಾಡುತ್ತಿದ್ದವರು ಎನ್ನಲಾದವರ ಮೇಲೆ ನಡೆದಿದ್ದ ಪೊಲೀಸ್ ಲಾಠಿ ಚಾರ್ಜ್ ನ ವಿಡಿಯೋ ವೈರಲ್ ಆದ ಮೇಲೆ ಆ ಘಟನೆಗೆ ಸಂಬಂಧಿಸಿ ಹೊಸ ಆರೋಪ ಕೇಳಿ ಬಂದಿದೆ. ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸಿಕೊಂಡು ಮದ್ರಸವೊಂದರಲ್ಲಿ ಆಶ್ರಯ ಪಡೆದಿದ್ದ ಪ್ರಯಾಣಿಕರ ತಂಡವೊಂದನ್ನು ಮದ್ರಸದಿಂದ ಹೊರಗೆಳೆದ ತಾಲೂಕು ತಹಶೀಲ್ದಾರ್ ನೇತೃತ್ವದ ತಂಡ ಅಮಾನವೀಯವಾಗಿ ಲಾಠಿ ಚಾರ್ಜ್ ನಡೆಸಿದೆ ಎಂದು ಆರೋಪಿಸಲಾಗಿದೆ.

ಬಾಗಲಕೋಟೆಯ ಮುಧೋಳದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ 25 ಜನರ ತಬ್ಲೀಗ್ ಜಮಾಅತ್ ( ಈ ಗುಂಪಿನವರು ಹೆಚ್ಚಾಗಿ ಮಸೀದಿಗಳಲ್ಲಿ ತಂಗಿ ಸುತ್ತಮುತ್ತಲ ಮುಸ್ಲಿಮರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಶ್ರಮಿಸುತ್ತಾರೆ ) ತಂಡವು ಮುಧೋಳಕ್ಕೆ ಆಗಮಿಸಿದ್ದು, ಕೊರೋನವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾದ ಕಾರಣ ಊರಿಗೆ ಹಿಂದಿರುಗಲು ಸಾಧ್ಯವಾಗದೆ ಸಂಕಷ್ಟದಲ್ಲಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮದ್ರಸವೊಂದರಲ್ಲಿ ಆಶ್ರಯ ಪಡೆದು ಸ್ವಯಂ ನಿರ್ಬಂಧದಲ್ಲಿತ್ತು. ಕೊರೋನ ಹಿನ್ನೆಲೆಯಲ್ಲಿ ಮುಧೋಳದಲ್ಲಿ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಮದ್ರಸಕ್ಕೆ ಆಗಮಿಸಿದ ಮುಧೋಳ ತಹಶೀಲ್ದಾರ್ ಮತ್ತು ಪೊಲೀಸರು ಮದ್ರಸದಲ್ಲಿ ಆಶ್ರಯ ಪಡೆದಿದ್ದವರನ್ನು ಹೊರಗೆಳೆದು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

"ತಬ್ಲೀಗ್ ಜಮಾಅತ್ ನವರು ಕಾರ್ಯಕ್ರಮವೊಂದರ ನಿಮಿತ್ತ ಗುಜರಾತ್ ನಿಂದ ಆಗಮಿಸಿದ್ದರು. ಎಪ್ರಿಲ್ 3ಕ್ಕೆ ಅವರು ಗುಜರಾತ್ ಗೆ ಮರಳಬೇಕಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಖಚಿತವಾಯಿತು. ಈಗಾಗಲೇ ಮದ್ರಸಕ್ಕೆ ರಜೆ ಘೋಷಿಸಿರುವ ಕಾರಣ ಗೆಸ್ಟ್ ಹೌಸ್ ನಲ್ಲಿ ಅವರು ಉಳಿದುಕೊಳ್ಳಲು ಅವಕಾಶ ನೀಡಿದೆವು. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ನಾವು ಕೈಗೊಂಡಿದ್ದೆವು. ಆದರೆ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ಆಗಮಿಸಿದ ತಂಡವೊಂದು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರ ಜೊತೆ ಮದ್ರಸದ ಬೀಗ ತೆರೆಯುವಂತೆ ಹೇಳಿತು. ಕೋವಿಡ್ ಸುರಕ್ಷತೆ ಹಿನ್ನೆಲೆಯಲ್ಲಿ ಮದ್ರಸಕ್ಕೆ ಲಾಕ್ ಮಾಡಲಾಗಿತ್ತು. ಪ್ರಾಂಶುಪಾಲರಿಗೆ ಕನ್ನಡ ಗೊತ್ತಿಲ್ಲದ ಕಾರಣ ತಹಶೀಲ್ದಾರರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭ ತಹಶೀಲ್ದಾರರು ಮತ್ತು ಅವರ ಜೊತೆಗಿದ್ದವರು ಪ್ರಾಂಶುಪಾಲರಿಗೆ ಹೊಡೆದಿದ್ದಾರೆ. ಶಬ್ಧ ಕೇಳಿದ ಕಾರಣ ಗೆಸ್ಟ್ ಹೌಸ್ ನಲ್ಲಿದ್ದವರು ಇಣುಕಿದ್ದಾರೆ. ಇದನ್ನು ಗಮನಿಸಿದ ತಹಶೀಲ್ದಾರರು ಕೋಣೆಯಲ್ಲಿದ್ದ ಎಲ್ಲರನ್ನೂ ಹೊರಗೆಳೆದು ಹಲ್ಲೆ ನಡೆಸಿದ್ದಾರೆ" ಎಂದು ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಫಿರೌಝ್ ಆರೋಪಿಸಿದ್ದಾರೆ.

"ಈ ಸಂದರ್ಭ ಹಿರಿಯರಿಗೂ ಹಲ್ಲೆ ನಡೆಸಲಾಗಿದೆ. ಮದ್ರಸ ಕ್ವಾಟ್ರಸ್ ನಲ್ಲಿದ್ದ ಕೆಲವು ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದವರಿಗೆ ಹಲ್ಲೆ ನಡೆಸಿದ್ದಾರೆ. ಲಾಠಿ ಚಾರ್ಜ್ ಮಾಡಿದ್ದಾರೆ" ಎಂದ ಫಿರೌಝ್, "ಕೊರೋನ ವೈರಸ್ ಹಿನ್ನೆಲೆಯಲ್ಲಿ ನಾವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೆವು. ಒಂದು ಕೋಣೆಯಲ್ಲಿ ಇಬ್ಬರು ಅಥವಾ ಮೂವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮೇಲಿನ ಮಹಡಿಯಿಂದ ಕೆಳಗಿನ ಮಹಡಿಗೆ ಬರಲೂ ಅವಕಾಶವಿರಲಿಲ್ಲ. ಮದ್ರಸ ವಠಾರವನ್ನು ಸಂಪೂರ್ಣ ಲಾಕ್ ಮಾಡಲಾಗಿತ್ತು. ಎಲ್ಲಾ ಕೋಣೆಗಳಲ್ಲೂ ಪ್ರತ್ಯೇಕ ಬಾತ್ ರೂಮ್, ಕಿಚನ್ ಎಲ್ಲಾ ವ್ಯವಸ್ಥೆಗಳಿದ್ದವು. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಪರೀಕ್ಷಿಸಲು ವೈದ್ಯರು ಕೂಡ ಇದ್ದರು. ಇಷ್ಟೆಲ್ಲಾ ಸುರಕ್ಷತಾ ಕ್ರಮ ಕೈಗೊಂಡು ಕೋಣೆಯೊಳಗೆ ಇದ್ದರೂ, ಕೋಣೆಯೊಳಗಿದ್ದವರನ್ನು ಹೊರಗೆಳೆದು ಹಲ್ಲೆ ನಡೆಸಲಾಗಿದೆ" ಎಂದು ಆರೋಪಿಸಿದ್ದಾರೆ.

ಈ ಬಗ್ಗೆ 'ವಾರ್ತಾ ಭಾರತಿ'ಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್, "ನಮಗೆ ಮಾಹಿತಿ ಸಿಕ್ಕಿತ್ತು. ನಾವು ಹೋದಾಗ ಅವರು ಗೇಟ್ ಹಾಕಿದ್ದರು. ಅಲ್ಲಿ ಒಂದೇ ಕೋಣೆಯಲ್ಲಿ ಸುಮಾರು 30 ಜನ ಇದ್ದರು. ಎಲ್ಲರೂ ಓಡಾಡುತ್ತಿದ್ದರು. ಮೊದಲಿಗೆ ಗೇಟ್ ತೆಗೆಯಬೇಕು ಎಂದಾಗ ಗೇಟ್ ತೆಗೆಯಲಿಲ್ಲ. ನಂತರ ಗೇಟ್ ತೆಗೆದರು. ಒಳಗಡೆ ಯಾರಿದ್ದಾರೆ ಎಂದು ನಾನು ಅಲ್ಲಿದ್ದ ಒಬ್ಬನಲ್ಲಿ ಪ್ರಶ್ನಿಸಿದೆ. ಆತ ಯಾರೂ ಇಲ್ಲ ಎಂದ. ಆದರೆ ಬಾಗಿಲು ತೆಗೆದಾಗ ತುಂಬಾ ಜನರಿದ್ದರು. ನಾವು ಎಲ್ಲರ ಬಗ್ಗೆ ವಿಚಾರಿಸಿ ಕ್ವಾರಂಟೈನ್ ಮಾಡಬೇಕೆಂದಿದ್ದೆವು. ಆದರೆ ಕೆಲವರು ಓಡಿದರು. ಮೊದಲು 22 ಜನ ಎಂದು ಮಸೀದಿಯವರು ಹೇಳಿದರು. ನಂತರ 25 ಜನರಿದ್ದದ್ದು ತಿಳಿಯಿತು. ಆಮೇಲೆ ಇನ್ನೂ 10 ಜನ ಓಡಿ ಹೋದದ್ದನ್ನು ನಾನೇ ನೋಡಿದ್ದೇನೆ. ಯಾರಿಗೂ ಪ್ರತ್ಯೇಕ ಕೋಣೆಗಳಿರಲಿಲ್ಲ. ಎಲ್ಲರೂ ಒಂದೇ ಹಾಲ್ ನಲ್ಲಿದ್ದರು. ರೂಮ್ ಗಳು ಇದ್ದರೂ ಅದರಲ್ಲಿ ಯಾರೂ ಇರಲಿಲ್ಲ. ದೊಡ್ಡ ಹಾಲ್ ನಲ್ಲಿ 30-35 ಜನ ಇದ್ದರು. ಮದ್ರಸದವರು ಹೊರ ರಾಜ್ಯದವರು ಇರುವ ಬಗ್ಗೆ ಮಾಹಿತಿಯೇ ನೀಡಿರಲಿಲ್ಲ. ಓಡಿ ಹೋಗುತ್ತಿದ್ದ ಕಾರಣ ನಾವು ಲಾಠಿ ಚಾರ್ಜ್ ಮಾಡಿದ್ದೇವೆ. ನಾವು ವಿಚಾರಣೆ ನಡೆಸಿದಾಗ ಅವರು ಓಡಿ ಹೋಗುವುದೇಕೆ. ಯಾವ ಮನೆಗಳಿಗೂ ನಾವು ಹೋಗಿಲ್ಲ" ಎಂದಿದ್ದಾರೆ.

ಆದರೆ ತಹಶೀಲ್ದಾರರ ಹೇಳಿಕೆಯನ್ನು ಫಿರೌಝ್ ನಿರಾಕರಿಸಿದ್ದು, "ತಹಶೀಲ್ದಾರರ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಎಲ್ಲರನ್ನು ಪ್ರತ್ಯೇಕ ಕೋಣೆಯಲ್ಲಿ ಇಡಲಾಗಿತ್ತು. ಯಾರು ಹೊರಗಡೆ ಓಡಾಡುತ್ತಿರಲಿಲ್ಲ. ಮದ್ರಸ ಆವರಣದಲ್ಲಿ 25 ಕ್ಯಾಮರಾಗಳಿವೆ. ಎಲ್ಲವೂ ರೆಕಾರ್ಡ್ ಆಗಿದೆ. ನಗರದ ಸಿಪಿಐ ಕೂಡಾ ಇದನ್ನು ಪರಿಶೀಲಿಸಿದ್ದಾರೆ" ಎಂದಿದ್ದಾರೆ.

ನಿಯಮ ಉಲ್ಲಂಘಿಸಿ ಸಾರ್ವಜನಿಕವಾಗಿ ತಿರುಗಾಡುತ್ತಿರುವವರಿಗೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವ ವಿಡಿಯೋಗಳು ಈಗಾಗಲೇ ವೈರಲ್ ಆಗುತ್ತಿದೆ. ಆದರೆ ಕಟ್ಟಡವೊಂದರಲ್ಲಿದ್ದು, ಹೊರಗೆ ಬಾರದೆ ಸ್ವಯಂ ನಿರ್ಬಂಧದಲ್ಲಿದ್ದವರನ್ನು ಹೊರಗೆಳೆದು ಹಲ್ಲೆ ನಡೆಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News