ತುಮಕೂರು: ಕಾನೂನು ಉಲ್ಲಂಘಿಸಿ, ಮೊಮ್ಮಗನ ಆಟವಾಡಿಸಲು ರಸ್ತೆಗಿಳಿದ ಶಾಸಕ ಎಸ್.ಆರ್.ಶ್ರೀನಿವಾಸ್

Update: 2020-03-28 14:47 GMT

ತುಮಕೂರು, ಮಾ.28: ದೇಶಾದ್ಯಂತ ಕೊರೋನ ವೈರಸ್ ಹರಡುವ ಭೀತಿಯಲ್ಲಿ ಲಾಕ್ ಡೌನ್ ಘೋಷಿಸಿದ್ದರೂ ಮಾಜಿ ಮಂತ್ರಿಯೊಬ್ಬರು ರಸ್ತೆಯಲ್ಲಿ ತಮ್ಮ ಮೊಮ್ಮಗನನ್ನು ಮಕ್ಕಳು ಆಟವಾಡುವ ಕಾರಿನಲ್ಲಿ ಕೂರಿಸಿಕೊಂಡು ಓಡಾಡಿಸುವ ಮೂಲಕ ಕಾನೂನು ಮೀರಿ ವರ್ತಿಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ನಗರದ ಎಸ್.ಪಿ. ಕಚೇರಿ ಮುಂಭಾಗದ ವಿದ್ಯಾನಗರದಲ್ಲಿ ಗುಬ್ಬಿ ಶಾಸಕ ಹಾಗೂ ಮಾಜಿ ಮಂತ್ರಿ ಎಸ್.ಆರ್. ಶ್ರೀನಿವಾಸ್ ಅವರ ಮನೆಯಿದ್ದು, ಅವರ ಎರಡು ವರ್ಷದ ಮೊಮ್ಮಗನನ್ನು ರಿಮೋಟ್ ಕಂಟ್ರೋಲ್ ಆಟಿಕೆ ಕಾರಿನಲ್ಲಿ ಕುಳ್ಳಿರಿಸಿ, ರಸ್ತೆಯಲ್ಲಿ ಆಟವಾಡಿಸಿದರು. ಕೊರೋನ ವೈರಸ್ ಮಕ್ಕಳಿಗೆ ಮತ್ತು ವೃದ್ಧರಿಗೆ ಬಹುಬೇಗ ಹರಡುತ್ತದೆ ಎಂಬುದು ದೃಢಪಟ್ಟಿದ್ದರೂ, ಮಗುವಿಗೆ ಯಾವುದೇ ಮಾಸ್ಕ್ ಅಳವಡಿಸದೇ ಮಗುವನ್ನು ಆಟವಾಡಲು ಬಿಟ್ಟಿದ್ದಾರೆ. ಅಲ್ಲದೆ ಮಗುವಿಗಿಂತ ಸುಮಾರು 20 ಮೀಟರ್ ದೂರದಲ್ಲಿ ರಿಮೋಟ್ ಕಂಟ್ರೋಲ್ ಹಿಡಿದು ಶಾಸಕರು ನಡೆದು ಬರುತ್ತಿದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಮಗುವಿಗೆ ಆಟವಾಡಿಸುವುದು ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.

ಕೋರೋನ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಇಡೀ ಜಿಲ್ಲಾಡಳಿತವೇ ಸೂಕ್ತ ಕ್ರಮಕೈಗೊಂಡಿದ್ದು, ಶುಕ್ರವಾರ ಸೋಕಿಂತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹೀಗಿದ್ದು, ಶಾಸಕರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಮತ್ತು ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು. ಅನಗತ್ಯವಾಗಿ ಓಡಾಡುವವರ ಬೈಕ್ ವಶಪಡಿಸಿಕೊಳ್ಳುವ ಪೊಲೀಸರು, ಶಾಸಕರ ವರ್ತನೆಯ ವಿರುದ್ಧವೂ ಕೇಸು ದಾಖಲಿಸಲಿ ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News