ರಾಜ್ಯದ ಕಾರಾಗೃಹಗಳಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನಿಗೆ ನಿರ್ಧಾರ

Update: 2020-03-28 17:19 GMT

ಬೆಂಗಳೂರು, ಮಾ.28: ರಾಜ್ಯದ ಕಾರಾಗೃಹಗಳಲ್ಲಿ ಕೊರೋನ ವೈರಸ್ ಹಬ್ಬುವುದನ್ನು ತಡೆಗಟ್ಟಲು ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆಗೆ ಒಳಗಾಗಿರುವ ಕೈದಿಗಳಿಗೆ ಪೆರೋಲ್ ಮೇಲೆ ಕೆಲಕಾಲ ಮನೆಗೆ ಹೋಗಲು ಅವಕಾಶ ಕಲ್ಪಿಸಬೇಕು. ಅದೇ ರೀತಿ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷಾರ್ಹ ಅಪರಾಧಗಳನ್ನು ಮಾಡಿರುವ ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ನೀಡುವ ಸಂಬಂಧ ಪರಿಶೀಲಿಸಬೇಕು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ಧರಿಸಿದೆ. 

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‍ನ ಹಿರಿಯ ನ್ಯಾಯಮೂರ್ತಿ ಅರವಿಂದಕುಮಾರ್ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಈ ನಿರ್ಣಯ ಕೈಗೊಂಡಿದೆ. ದೇಶದಾದ್ಯಂತ ಕೊರೋನ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಾರಾಗೃಹಗಳಲ್ಲಿ ಇರುವ ಕೈದಿಗಳಿಗೆ ಸೋಂಕು ತಾಕದಂತೆ ಕ್ರಮ ಕೈಗೊಳ್ಳಲು ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಸಭೆ ನಡೆಸಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಅದರಂತೆ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಶಿಕ್ಷೆಗೊಳಪಟ್ಟ ಕೈದಿಗಳಿಗೆ ಅವರು ಒಪ್ಪಿದರೆ ತಾತ್ಕಾಲಿಕ ಪೆರೋಲ್ ನೀಡಬೇಕು. ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಜೈಲು ಸೇರಿರುವ ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ನೀಡಲು ಪರಿಶೀಲನೆ ನಡೆಸಬೇಕು.

ವಿಚಾರಣಾಧೀನ ಕೈದಿಗಳಿಗೆ ಜಾಮೀನು ನೀಡುವ ಸಂಬಂಧ ಆಯಾ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಪರಿಶೀಲನೆ ನಡೆಸಿ ಮಾಹಿತಿ ನೀಡಬೇಕು. ಈ ಕುರಿತು ಕಾನೂನು ಮತ್ತು ಆಡಳಿತಾತ್ಮಕ ವಿಚಾರಗಳನ್ನು ಮಾ.30ರಂದು ನಡೆಯುವ ವೀಡಿಯೋ ಕಾನ್ಫರೆನ್ಸ್ ನಲ್ಲಿ ಜಿಲ್ಲಾ ನ್ಯಾಯಾಧೀಶರು, ಬಾಲ ನ್ಯಾಯ ಮಂಡಳಿಗಳ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ವಿವರಿಸಬೇಕು ಎಂದು ಉನ್ನತಾಧಿಕಾರ ಸಮಿತಿ ಸೂಚನೆ ನೀಡಿದೆ. 

ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಮಾರ್, ರಾಜ್ಯ ಬಂಧೀಖಾನೆ ಇಲಾಖೆ ಡಿಜಿಪಿ ಅಲೋಕ್ ಮೋಹನ್, ಡಿಐಜಿ ಪಿ.ವಿ.ಆನಂದರೆಡ್ಡಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಸಭೆಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News