ಶಾಲಾ ದಾಖಲಾತಿ ಪ್ರಕ್ರಿಯೆ ಸದ್ಯಕ್ಕಿಲ್ಲ: ಸಚಿವ ಸುರೇಶ್ ಕುಮಾರ್

Update: 2020-03-28 15:11 GMT

ಬೆಂಗಳೂರು, ಮಾ.28: ಕೊರೋನ ವೈರಸ್ ಬಿಕ್ಕಟ್ಟು ಕೊನೆಗೊಳ್ಳುವವರೆಗೂ ರಾಜ್ಯದ ಯಾವುದೇ ಶಾಲೆಗಳು ದಾಖಲಾತಿ ಪ್ರಕ್ರಿಯೆ ಆರಂಭಿಸಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶನಿವಾರ ತಿಳಿಸಿದ್ದಾರೆ

ಕೊರೋನ ಸೋಂಕು ಹರಡುವ ಭೀತಿ ಅಂತ್ಯಗೊಳ್ಳುವವರೆಗೆ ರಾಜ್ಯದ ಯಾವುದೇ ಶಾಲೆಗಳು ದಾಖಲಾತಿ ಪ್ರಕ್ರಿಯೆ ಆರಂಭಿಸದಂತೆ ಸರಕಾರ ಈಗಾಗಲೇ ಸಾಮಾನ್ಯ ಸೂಚನೆ ನೀಡಿದೆ. ಮಗುವನ್ನು ಉನ್ನತ ತರಗತಿಗೆ ದಾಖಲಿಸಿಕೊಳ್ಳುವುದಕ್ಕೂ ಇದು ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

ಇದರ ಬಗ್ಗೆ ಗಮನಹರಿಸಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಸಾಮಾಜಿಕ ಬಿಕ್ಕಟ್ಟಿನ ಈ ಸಮಯದಲ್ಲಿ ಯಾವುದೇ ಪೋಷಕರು ಅನಗತ್ಯ ತೊಂದರೆ, ಕಿರುಕುಳಕ್ಕೆ ಒಳಗಾಗಬಾರದು. ಶಾಲಾ ಆಡಳಿತ ಮಂಡಳಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಸರಕಾರದ ಕಾಳಜಿಯನ್ನು ಶಾಲಾ ಆಡಳಿತ ಮಂಡಳಿಗಳು ಅರ್ಥಮಾಡಿಕೊಳ್ಳಲಿವೆ ಎಂದಿದ್ದಾರೆ.  

ಕೊರೋನ ವೈರಸ್ ಹಿನ್ನಲೆಯಲ್ಲಿ ಮುಂದಿನ ಸೂಚನೆ ನೀಡುವವರೆಗೆ ಎಲ್ಲಾ ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲು ಪ್ರಕ್ರಿಯೆಗಳನ್ನು ಮುಂದೂಡುವಂತೆ ರಾಜ್ಯ ಸರಕಾರ ಶುಕ್ರವಾರ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಮುಂದಿನ ಶೈಕ್ಷಣಿಕ ವರ್ಷದ ಶುಲ್ಕಗಳನ್ನು ಪಾವತಿಸುವಂತೆ ಹಲವು ಶಾಲೆಗಳು, ಮಕ್ಕಳ ಪೋಷಕರ ಮೊಬೈಲ್‍ಗಳಿಗೆ ಸಂದೇಶ ರವಾನಿಸುತ್ತಿವೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಆದೇಶ ಹೊರಡಿಸಿದೆ. ಹೊಸ ದಾಖಲಾತಿ ಮಾತ್ರವಲ್ಲದೆ, ಉನ್ನತ ತರಗತಿಗಳಿಗೆ ದಾಖಲಾತಿ ಮಾಡಿಕೊಳ್ಳುವುದನ್ನು ಸಹ ಮುಂದಿನ ಆದೇಶದವರೆಗೆ ಮುಂದೂಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಕೆಲ ಶಾಲೆಗಳು ಎಪ್ರಿಲ್‍ನಲ್ಲಿ ಹೊಸ ದಾಖಲಾತಿಗಳಿಗಾಗಿ ದಿನಾಂಕಗಳನ್ನು ಪ್ರಕಟಿಸಿ, ಶುಲ್ಕ, ಡೊನೇಷನ್‍ಗಳನ್ನು ಆನ್ ಲೈನ್‍ನಲ್ಲಿ ಪಾವತಿಸಲು ಪೋಷಕರಿಗೆ ಸೂಚನೆ ನೀಡಿದ್ದವು. ನಿರ್ದಿಷ್ಟ ಶಾಲಾ ಸಂಸ್ಥೆಯೊಂದು ಪ್ರಿಕೆಜಿ ದಾಖಲಾತಿಗೆ ಏಪ್ರಿಲ್ 15ರವರೆಗೆ, ಎಲ್‍ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗೆ ಏಪ್ರಿಲ್ 16ರವರೆಗೆ ಅವಕಾಶವಿದೆ ಎಂದು ಪ್ರಕಟಿಸಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಖಲಾತಿಗಳನ್ನು ಮುಂದೂಡುವಂತೆ ಹೊರಡಿಸಿರುವ ಸರಕಾರದ ಆದೇಶ ಉಲ್ಲಂಘಿಸಿದರೆ, ಸರಕಾರಿ, ಖಾಸಗಿ(ಅನುದಾನಿತ ಹಾಗೂ ಅನುದಾನರಹಿತ) ಶಾಲೆಗಳಿಗೆ ದಂಡ ವಿಧಿಸಲಾಗುವುದು. ಸರಕಾರದ ಆದೇಶವನ್ನು ಯಾವುದೇ ಶಾಲಾ ಆಡಳಿತ ಮಂಡಳಿ ಉಲ್ಲಂಘಿಸಿರುವುದು ಕಂಡುಬಂದರೆ ಅಂತಹವರ ವಿರುದ್ದ 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3ರಡಿ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪರಿಸ್ಥಿತಿಯನ್ನು ಅವಲೋಕಿಸಿ ಸರಕಾರದ ಆದೇಶವನ್ನು ಜಾರಿಗೊಳಿಸುವಂತೆ ಇಲಾಖೆಯ ಉಪ ನಿರ್ದೇಶಕರುಗಳಿಗೆ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News