ಚಿಕ್ಕಮಗಳೂರು: ನಿರ್ಗತಿಕರ ಪಾಲಿಗೆ ಆಸರೆಯಾಗುತ್ತಿವೆ ಸಂಘ ಸಂಸ್ಥೆಗಳು

Update: 2020-03-28 16:29 GMT

ಚಿಕ್ಕಮಗಳೂರು, ಮಾ.28: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಸರಕಾರ ಲಾಕ್‍ಡೌನ್ ಅಸ್ತ್ರ ಬಳಸಿದೆ. ಜನರು ಮನೆಯಿಂದ ಹೊರಬರದಂತೆ ನಿಯಂತ್ರಿಸಲಾಗತ್ತಿದೆ. ಅದರಂತೆ ಜನರೇನೋ ಮನೆಯಲ್ಲಿದ್ದರು ಆದರೆ, ನಿರ್ಗತಿಕರು, ಅಸಹಾಯಕರು, ಭೀಕ್ಷುಕರು ಇವರ ಪಾಡೇನು ಎಂಬ ಪ್ರಶ್ನೆ ಮೂಡಿರುವ ಹೊತ್ತಿನಲ್ಲಿ ನಗರದಲ್ಲಿರುವ ನಿರ್ಗತಿಕರ ರಕ್ಷಣೆಗೆ ಜಿಲ್ಲಾಡಳಿತ ಹಾಗೂ ಕೆಲ ಸಂಘ ಸಂಸ್ಥೆಗಳು ನಿರ್ಗತಿಕರಿಗೆ, ಅಸಹಾಯಕರಿಗೆ, ಭಿಕ್ಷುಕರಿಗೆ ತಾತ್ಕಾಲಿಕವಾಗಿ ನೆರವು ನೀಡಲು ಧಾವಿಸಿದ್ದು, ಈ ಕೆಲಸ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮಾಸಿದ ಬಟ್ಟೆಗಳು, ಉದ್ದನೇಯ ಗಡ್ಡ, ಉದ್ದನೇಯ ತಲೆಗೂದಲು, ಉದರ ಪೋಷಣೆಗೆ ಅಲೆದು ತಿನ್ನುವವರನ್ನು, ಕೆಲಸ ಅರಸಿಬಂದು ಉಳಿದುಕೊಳ್ಳಲು ಜಾಗವಿಲ್ಲದೆ ಸಂತೆ ಮೈದಾನ ಸೇರಿದ್ದ ಕುಟುಂಬ, ಎಲ್ಲೋ ಬೀದಿ ಬದಿಯಲ್ಲಿ ಮಲಗಿ ದಿನದೂಡುತ್ತಿದ್ದವರಿಗೆ ದಿಕ್ಕು ತೋರಲು ಜಿಲ್ಲಾಡಳಿತ ಹಾಗೂ ನಗರದ ಸಂಘ ಸಂಸ್ಥೆಗಳು ಮುಂದಾಗಿದ್ದು, ಸೋಂಕು ನಿಯಂತ್ರಣಕ್ಕೆ ಬರುವರೆಗೂ ನಿರ್ಗತಿಕರಿಗೆ ಸ್ವಲ್ಪ ದಿನಗಳ ಕಾಲ ಆಶ್ರಯ ಕಲ್ಪಿಸಬೇಕೆಂಬ ನಗರಸಭೆ ಆಯುಕ್ತ ಚಂದ್ರಶೇಖರ್ ಅವರ ಚಿಂತನೆಗೆ ನಗರದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿರುವ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ರೂಬಿನ್ ಮೋಸೆಸೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸುಮಿತ್‍ಕುಮಾರ್, ಕಾರ್ತಿಕ್‍ ಚೆಟ್ಟಿಯಾರ್, ಭರತ್, ಸಹನ, ಜನ್ನಫರ್, ರಸೂಲ್, ಫೆಲಿಕ್ಸ್, ಸಂಜು, ಸಿಲ್ವಸ್ಟರ್, ರೋನಿ, ಸತ್ಯರಾಜ್, ಕಿರಣ್ ಮತ್ತಿತರರು ನಗರಸಭೆಯೊಂದಿಗೆ ಕೈಜೋಡಿಸಿದರು.

ಇವರ ಶುಕ್ರವಾರ ರಾತ್ರಿ ನಿರ್ಗತಿಕರ ಪತ್ತೆ ಕಾರ್ಯಕ್ಕೆ ಮುಂದಾಗಿ,. ಬಸ್ ನಿಲ್ದಾಣ, ವಿಜಯಪುರ, ಆಜಾದ್ ಮೈದಾನ, ನಗರಸಭೆ, ಕೆಂಪನಹಳ್ಳಿ ಗೌರಿಕಾಲುವೆ, ಸಂತೆಮೈದಾನದಲ್ಲಿ ಹುಡುಕಾಡಿ 23 ಜನರನ್ನು ಗುರುತಿಸಿದ್ದಲ್ಲದೇ ನಗರದ ಎಐಟಿ ವೃತ್ತದಲ್ಲಿರುವ ಅಂಬೇಡ್ಕರ್ ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯಕ್ಕೆ ಅನುವು ಮಾಡಿದರು. ಇವರಿಗೆ ಆಹಾರ ಸೇವನೆಗೆ ತನೋಜ್‍ಕುಮಾರ್ ತಟ್ಟೆಲೋಟವನ್ನು, ಫೆಲಿಕ್ಸ್ ಸಂಜು ಹೊದಿಕೆಯನ್ನು ನೀಡಲು ಮುಂದೆ ಬಂದಿದ್ದಾರೆ. ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ವತಿಯಿಂದ ಈ ನಿರ್ಗತಿಕರಿಗೆ ಪೆನ್‍ಷನ್ ಮೊಹಲ್ಲಾದಲ್ಲಿರುವ ಬೇತಲ್‍ಚರ್ಚ್ ಆವರಣದಲ್ಲಿ ಆಹಾರ ತಯಾರಿಸಿ ಶನಿವಾರ ವಿತರಣೆ ಮಾಡಿದರು. 

ಸದ್ಯ ಈ ತಾತ್ಕಾಲಿಕ ವಸತಿ ನಿಲಯದಲ್ಲಿ ನಿರ್ಗತಿಕರು ಸಮಯ ದೂಡಲು ಚೌಕಬಾರ್ ಆಡುತ್ತಾ ಕಾಲ ಕಳೆಯುತ್ತಿದ್ದು, ಲಾಕ್‍ಡೌನ್ ಅವಧಿ ಪೂರ್ವವಾಗುವವರೆಗೂ ಇಲ್ಲಿನ ನಿರ್ಗತಿಕರಿಗೆ ಈ ಸಂಘಸಂಸ್ಥೆಗಳು ಆಶ್ರಯ ನೀಡಲಿವೆ.

ದಂಪತಿ ಲಾಕ್‍ಡೌನ್: ದಾವಣಗೆರೆ ಜಿಲ್ಲೆಯ ರಾಣೆಬೆನ್ನೂರು ತಿಮ್ಮನಕಟ್ಟಿಯ ದಂಪತಿ ದಾದು ಮತ್ತು ಅಂಜು ಇಬ್ಬರು ಮಕ್ಕಳೊಂದಿಗೆ ಜಿಲ್ಲೆಗೆ ಬಂದಿದ್ದರು. ಕೊರೊನಾ ಹರಡುವ ಭೀತಿಯಿಂದ ಯಾರು ಕೂಲಿ ನೀಡಲಿಲ್ಲ. ಇನ್ನೇನು ಊರಿಗೆ ಹೋಗಬೇಕು ಅನ್ನುವಷ್ಟರಲ್ಲಿ ಜನತಾ ಕರ್ಫ್ಯೂ  ಪರಿಣಾಮ ಊರಿಗೆ ಹೋಗಲಾಗಲಿಲ್ಲ. ಊರು ಸೇರಲು ಬಸ್ ಇಲ್ಲದೇ ಊಟಕ್ಕೂ ಕಾಸಿಲ್ಲದೇ ಸಂತೇ ಮೈದಾನದಲ್ಲಿ ಈ ದಂಪತಿ ಆಶ್ರಯ ಪಡೆದಿದ್ದರು. ಸದ್ಯ ಇವರು ನಗರದಲ್ಲಿ ನಿರ್ಗತಿಕರೊಂದಿಗೆ ಆಶ್ರಯ ಪಡೆದುಕೊಂಡಿದ್ದಾರೆ.

ಗ್ಯಾರೇಜ್ ಕೆಲ್ಸ ಮಾಡ್ತಿದ್ದೆ, ಶಕ್ತಿ ಇರೋವರ್ಗೆ ದುಡಿದೆ. ಈಗ ಆಗಲ್ಲ, ಅಷ್ಟೋತ್ತಿಗಾಗಲೇ ಕಾಯಿಲೆ ಹರಡುತ್ತಿರುವುದರಿಂದ ಎಲ್ಲಾ ಬಾಗಿಲೇ ಮಚ್ಚಿತು. ಈಗ ಇಲ್ಲಿ ಆಶ್ರಯ ನೀಡಿದ್ದಾರೆ ಎಂದು ನಿರ್ಗತಿಕರ ಕೇಂದ್ರದಲ್ಲಿರುವ ರೆಹಮಾನ್ ಹೇಳಿದರು

ನಮ್ಮ ಕಾರ್ಯಕ್ಕೆ ಪೊಲೀಸರು ಮತ್ತು ನಗರಸಭೆ ಸಹಕಾರ ನೀಡುತ್ತಿದೆ. ಹೊರಗಡೆಯಿಂದ ಊಟ ತಂದು ಕೊಡುವುದು ಅಸಾಧ್ಯ ಇಲ್ಲೇ ಅಡಿಗೆ ಮಾಡಲು ವ್ಯವಸ್ಥೆ ಮಾಡಕೊಡಬೇಕಿದೆ. ಇವರನ್ನು ಶುಚಿಗೊಳಿಸುವ ಕಾರ್ಯ ಮಾಡಬೇಕಿದೆ. ಬೇರೆ ಜಿಲ್ಲೆಯಂತೆ ನಮ್ಮ ಜಿಲ್ಲೆಯಲ್ಲಿ ನಿರ್ಗತಿಕರ ವಸತಿ ಕೇಂದ್ರ ಇಲ್ಲವಾಗಿದ್ದು, ಜನಪ್ರತಿನಿಧಿಗಳು ಕೇಂದ್ರ ತೆರೆಯಲು ಕಾಳಜಿ ವಹಿಸಬೇಕು
- ರೂಬೆನ್‍ಮೊಸೆಸ್, ಸಮಾಜಸೇವಾ ಕಾರ್ಯಕರ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News