ಕೊರೋನಾ ವಿರುದ್ಧ ಹೋರಾಟಕ್ಕೆ ‘ಕೊರೋನಾ ವಾರಿಯರ್ಸ್’

Update: 2020-03-31 16:17 GMT

ಬೆಂಗಳೂರು, ಮಾ.31: ದೇಶದಲ್ಲಿ ಆರೋಗ್ಯ ತುರ್ತು ಘೋಷಿಸಿದ ಹಿನ್ನೆಲೆಯಲ್ಲಿ ಹಲವಾರು ಇಲಾಖೆಗಳು ಅವಿರತವಾಗಿ ಶ್ರಮಿಸುತ್ತಿವೆ. ಇಂಥ ಶ್ರಮಜೀವಿಗಳಿಗೆ ತಮ್ಮ ಕೈಲಾದ ಸಹಾಯ ಮಾಡಲು ಕೊರೋನ ವಾರಿಯರ್ಸ್(ಕೊರೋನ ಸೈನಿಕರು) ಎಲ್ಲೆಡೆ ಕೆಲಸ ಮಾಡುತ್ತಿದ್ದಾರೆ.

ದೇಶದಾದ್ಯಂತ ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲು 21 ದಿನಗಳ ಕಾಲ ಸರಕಾರದ ದಿಗ್ಬಂಧನ ವಿಧಿಸಿದೆ. ಈ ದಿನಗಳಲ್ಲಿ ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ತುರ್ತು ಸಂದರ್ಭದಲ್ಲಿ ಜನರಿಗೆ ಬೇಕಾದ ಅಗತ್ಯ ಸೇವೆಗಳಿಗೆ ನೆರವಾಗಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಾಧ್ಯಮಗಳು ಸೇರಿದಂತೆ ಅನೇಕ ಇಲಾಖೆಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೆರವಾಗುವ ಸಲುವಾಗಿ ಈ ಒಂದುತಂಡ ಕೆಲಸ ಮಾಡಲಿದೆ.

ರಾಜ್ಯದ 10 ಸಾವಿರಕ್ಕೂ ಹೆಚ್ಚಿನ ಕೊರೋನ ಸೈನಿಕರು ಕೆಲಸ ಮಾಡುತ್ತಿದ್ದಾರೆ. ಸರಕಾರಗಳ ಇಲಾಖೆಗಳ ಜತೆಗೆ ಕೆಲಸ ಮಾಡುತ್ತಿದ್ದಾರೆ. ಇವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ಕೆಲವರು ಆರೋಗ್ಯ ಇಲಾಖೆಯ ಜತೆಗೆ ಕೈಜೋಡಿಸಿದ್ದಾರೆ. ಇನ್ನು ಕೆಲವರು ಪೊಲೀಸ್ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಜತೆ ಕೈ ಜೋಡಿಸುವ ಮೂಲಕ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರೂ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ, ಪೊಲೀಸ್ ಇಲಾಖೆ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಜತೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಟ್ವಿಟರ್ ಗೆ ಬಂದ ಪ್ರತಿಕ್ರಿಯೆ: ವಾರ್ತಾ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಕೊರೋನ ಸೈನಿಕರಾಗಿ ಕೆಲಸ ಮಾಡುವಂತೆ ಸಾರ್ವಜನಿಕರಿಗೆ ಟ್ವಿಟರ್ ನಲ್ಲಿ ಕರೆ ನೀಡಿದ್ದರು. ಇದಕ್ಕೆ ಸ್ಪಂದಿಸಿದ ಸಾವಿರಾರು ಜನರು ರಾಜ್ಯಾದ್ಯಂತ ಆನ್‍ಲೈನ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು.

ವಲಸೆ ಕಾರ್ಮಿಕರಿಗೆ ಆಹಾರ ಹಂಚುವುದು, ಗಾಳಿ ಸುದ್ದಿಗಳನ್ನು ಪರಾಮರ್ಶೆಗೆ ಒಳಪಡಿಸಿ ಸತ್ಯ ಸುದ್ದಿಗಳನ್ನು ಜನರಿಗೆ ತಲುಪಿಸುವಂತಹ ಕಾರ್ಯಗಳಲ್ಲಿ ಈ ಸ್ವಯಂ ಸೇವಕರು ಬಾಗಿಯಾಗಿದ್ದಾರೆ.

ಇವರು ಹೇಗೆ ಕೆಲಸ ಮಾಡುತ್ತಾರೆ?: ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡಿರುವ ಸದಸ್ಯರಿಗೆ ಟೆಲಿಗ್ರಾಂ ಆಪ್‍ನ ಲಿಂಕ್ ಕಳುಹಿಸಲಾಗುತ್ತದೆ. ಗ್ರೂಪ್‍ಗೆ ಸೇರಿದ ಸದಸ್ಯರನ್ನು ವಯಸ್ಸು ಹಾಗೂ ಅವರ ಕೆಲಸ. ಉದ್ಯೋಗ ಲಭ್ಯತೆ ಆಧಾರದ ಮೇಲೆ ಬೇರೆ ಬೇರೆ ವಾಟ್ಸ್ ಆ್ಯಪ್ ಗುಂಪುಗಳಿಗೆ ಸೇರಿಸಲಾಗುತ್ತದೆ. ಅವರನ್ನು ಅವರ ವಾಸಿಸುವ ವ್ಯಾಪ್ತಿಯಲ್ಲಿರುವ ಪೊಲೀಸ್ ಇಲಾಖೆ ಜೊತೆ ಸೇರಿ ತುರ್ತು ಸಂದರ್ಭಗಳಲ್ಲಿ ಕೆಲಸ ಮಾಡುವಂತೆ ನಿಯೋಜನೆ ಮಾಡಲಾಗುತ್ತದೆ. ಈ ತಂಡದ ಸದಸ್ಯರು ಯಾವುದೇ ಸಮಯದಲ್ಲಿ ಇಲಾಖೆ ಜತೆ ನೆರವಾಗಬೇಕು.

ಎರಡು ದಿನಗಳ ತರಬೇತಿ: ನೋಂದಾಯಿತ ಸದಸ್ಯರಿಗೆ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಎರಡು ದಿನಗಳ ತರಬೇತಿ ನೀಡಿದೆ. ಮಾ.20-21 ರಂದು ಮಿನ್ಸ್ಕ್ ಸ್ಕ್ವೇರ್ ನ ವಾರ್ತಾಭವನದ ಸುಲೋಚನಾ ಆಡಿಟೋರಿಯಂನಲ್ಲಿ ಈ ತರಬೇತಿ ನೀಡಲಾಗಿತ್ತು. ಈ ತರಬೇತಿಯಲ್ಲಿ ಸ್ವಯಂ ಸೇವಕರಿಗೆ ಶುಚಿತ್ವ ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರ ಎಂದರೇನು? ಅದನ್ನು ಪಾಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಾಯಿತು.

ಸ್ವಯಂ ಸೇವಕರಿಗೆ ಏಪ್ರಾನ್, ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್‍ಗಳನ್ನು ನೀಡುತ್ತಾರೆ. ನಾವು ನಮ್ಮ ಬಗ್ಗೆ ಎಲ್ಲ ಬಗೆಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡು ನಂತರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ ಎಂದು ಕೊರೋನ ಸೈನಿಕರು ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿಆರ್‍ಡಿಒ ಅಸಿಸ್ಟೆಂಟರ್ ಸೈಂಟಿಸ್ಟ್ ವಿನೋದ್ ಮಾಹಿತಿ ನೀಡಿದ್ದಾರೆ.

ಸುಳ್ಳು ಸುದ್ದಿಗಳ ಮೂಲ ಪತ್ತೆ ಹಚ್ಚಿ ನಿಜಾಂಶವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಸರಕಾರ ಕೈಗೊಂಡ ಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯೂ ಇವರ ತಂಡದ್ದು. ಇದರ ಜತೆಗೆ ನಗರದ ಬೇರೆ ಬೇರೆ ಭಾಗಗಳಿಗೆ ತೆರಳಿ ವಲಸೆ ಕಾರ್ಮಿಕರಿಗೆ ಆಹಾರ ಪೊಟ್ಟಣ ವಿತರಿಸುವ ಕೆಲಸಕ್ಕೂ ಕೈ ಜೋಡಿಸಿದ್ದಾರೆ. ಸ್ವಯಂ ಸೇವಕರಾಗಿ ಗುರುತಿಸಿಕೊಂಡಿರುವವರು ತುರ್ತು ಸಂದರ್ಭದಲ್ಲಿ ಎಲ್ಲ ರೀತಿಯ ಕೆಲಸಕ್ಕೂ ಸಿದ್ಧರಿರಬೇಕು ಎಂದು ಅವರು ಹೇಳಿದ್ದಾರೆ.

ಕೊರೋನಾ ಸೈನಿಕರ ಕೆಲಸ: ಪೊಲೀಸ್, ಆರೋತ್ಯ ಇಲಾಖೆ ಜತೆ ಕೆಲಸ ಮಾಡುವ ಕೊರೋನ ಸೈನಿಕರು ಜನರಿಗೆ ಶುಚಿತ್ವ, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ವಹಿಸಿದ್ದಾರೆ. ಬೇರೆ ಬೇರೆ ಆಸ್ಪತ್ರೆಗಳು, ಪೊಲೀಸ್ ಇಲಾಖೆಗೆ ಬರುವ ಕೊರೋನ ಸೋಂಕಿತರ ಬಗ್ಗೆ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ತಲುಪಿಸಬೇಕು. ಇದರಿಂದ ಸರಕಾರಕ್ಕೆ ದಿನನಿತ್ಯದ ಕೊರೋನ ಸೋಂಕಿತರ ಸ್ಪಷ್ಟವಾದ ಸಂಖ್ಯೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಜವಾಬ್ದಾರಿ ನೀಡಿದ್ದಾರೆ.

ಕ್ವಾರಂಟೈನ್ ಆಗಿರುವವರನ್ನು ಆಪ್ತ ಸಲಹೆ ಮೂಲಕ ಮಾನಸಿಕವಾಗಿ ಸದೃಢರನ್ನಾಗಿಸುವುದು, ಕ್ವಾರಂಟೈನ್ ಆಗಿರುವ ಜನರು ಮನೆಯಿಂದ ಹೊರಗೆ ಬಾರದಂತೆ ತಿಳುವಳಿಕೆ ಮೂಡಿಸುವುದನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ, ಇವರು ಮನೆಯ ಅಕ್ಕಪಕ್ಕದವರೊಂದಿಗೆ ಸಂಪರ್ಕದಲ್ಲಿದ್ದು, ಒಂದು ವೇಳೆ ಕ್ವಾರಂಟೈನ್ ರೋಗಿ ಮನೆಯಿಂದ ಹೊರಬಂದರೆ ಮಾಹಿತಿ ಪಡೆದು ಪೊಲೀಸ್ ಸಿಬ್ಬಂದಿಗೆ ತಿಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News