ಎಷ್ಟು ದಿನ ಬೇಕಾದರೂ ಲಾಕ್‍ಡೌನ್ ಮಾಡಿಮದ್ಯದಂಗಡಿ ತೆರೆಸಿ: ಪಾನಪ್ರಿಯರ ವಿಲಕ್ಷಣ ಒತ್ತಾಯ

Update: 2020-03-31 17:04 GMT

ಬೆಂಗಳೂರು, ಮಾ. 31: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶ್ಯಾದ್ಯಂತ 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಿದ್ದು, ಜನಸಾಮಾನ್ಯರಿಗೆ ಹತ್ತು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಆದರೆ, ಮದ್ಯ ಪ್ರಿಯರು ಅಗತ್ಯ ವಸ್ತುಗಳ ಖರೀದಿ ಮಾದರಿಯಲ್ಲೆ ಮದ್ಯ ಖರೀದಿಸಿ ಮನೆಗೆ ಕೊಂಡೊಯ್ಯಲು ಅವಕಾಶ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ಬೆಂಗಳೂರು, ಕೊಡಗು, ಬೆಳಗಾವಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮದ್ಯ ಪ್ರಿಯರು 'ನೀವು ಎಷ್ಟು ದಿನ ಬೇಕಾದರೂ ಲಾಕ್‍ಡೌನ್ ಮಾಡಿಕೊಳ್ಳಿ. ಆದರೆ, ನಮಗೆ ಮದ್ಯ ಪೂರೈಕೆ ಮಾಡಿ, ಇಲ್ಲದೆ ಇದ್ದರೆ ನಾವು ಬದುಕುವುದೇ ಕಷ್ಟಕರ' ಎಂಬ ಮದ್ಯ ಪ್ರಿಯರ ವಿಲಕ್ಷಣ ಒತ್ತಾಯಿಸುತ್ತಿದ್ದಾರೆ.

ಮದ್ಯ ಸೇವನೆಯನ್ನೆ ಹವ್ಯಾಸ ಮಾಡಿಕೊಂಡಿರುವ ಪಾನ ಪ್ರಿಯರು ಕೊಡಗು ಮತ್ತು ಬೆಳಗಾವಿಯಲ್ಲಿ ಖುದ್ದು ರಾಜ್ಯ ಸರಕಾರದ ಸಚಿವರಾದ ವಿ.ಸೋಮಣ್ಣ ಮತ್ತು ಜಗದೀಶ್ ಶೆಟ್ಟರ್ ಅವರ ಮುಂದೆಯೆ ಇಟ್ಟಿದ್ದು, ಮತ್ತೊಂದು ವಿಶೇಷವಾಗಿದ್ದು, ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಉಭಯ ನಾಯಕರು ಕೈಚೆಲ್ಲಿದ್ದಾರೆ.

ನನಗೆ ಕರೆ ಬಂದಿವೆ: 'ನಮಗೆ ಬಹಳ ಕಷ್ಟವಾಗಿದೆ. ಒಂದೆರಡು ದಿನಗಳಲ್ಲಿ ಮದ್ಯದಂಗಡಿಗಳನ್ನು ತೆರೆಸಿ, ನೀವು ಎಷ್ಟು ದಿನ ಬೇಕಾದರೂ ಲಾಕ್ ಡೌನ್ ಮಾಡಿಕೊಳ್ಳಿ' ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮದ್ಯ ಪ್ರಿಯರು ಕರೆ ಮಾಡಿ ಅಲವತ್ತುಕೊಂಡಿದ್ದಾರೆ ಎಂದು ಖುದ್ದು ಜಗದೀಶ್ ಶೆಟ್ಟರ್ ಇಂದಿಲ್ಲಿ ಬಹಿರಂಗಪಡಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾರಕ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ದೃಷ್ಟಿಯಿಂದ ದೇಶದಾದ್ಯಂತ ಎ.14ರ ವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಮದ್ಯ ಪ್ರಿಯರು ಕೆಲ ದಿನಗಳ ಕಾಲ ಕುಡಿಯದೆ ಇದ್ದರೆ ಏನು ಸಮಸ್ಯೆ ಆಗುವುದಿಲ್ಲ. ಮದ್ಯದಂಗಡಿ ಚಾಲೂ ಮಾಡಿಸಿ ಎಂದು ನನಗೆ ಒಂದೆರಡು ಕರೆಗಳು ಬಂದಿವೆ ಎಂದು ಸ್ಪಷ್ಟಪಡಿಸಿದರು.

ಸೋಂಕು ತಡೆಗಟ್ಟುವ ದೃಷ್ಟಿಯಿಂದ ಮದ್ಯ ಪ್ರಿಯರು ಸಂಯಮ ಇಟ್ಟುಕೊಳ್ಳಬೇಕು. ದೇಶದ ಜನತೆ ಒಳಿತಿಗಾಗಿ, ಆರೋಗ್ಯದ ದೃಷ್ಟಿಯಿಂದ ಕೈಗೊಂಡಿರುವ ಲಾಕ್ ಡೌನ್ ನಿಯಮಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೋನ ವೈರಸ್ ಸೋಂಕು ಹಬ್ಬದಂತೆ ಎಚ್ಚರ ವಹಿಸಬೇಕು ಎಂದು ಜಗದೀಶ್ ಶೆಟ್ಟರ್ ಇದೇ ವೇಳೆ ಮನವಿ ಮಾಡಿದರು.

ಮದ್ಯದಂಗಡಿಗೆ ಜನಪ್ರತಿನಿಧಿಗಳ ಒತ್ತಾಯ: ಕೊರೋನ ಸೋಂಕು ನಿಯಂತ್ರಣ ಸಂಬಂಧ ಮಡಿಕೇರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳೆ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News