ರಾಜ್ಯದಲ್ಲಿ 700 ವೆಂಟಿಲೇಟರ್ ವ್ಯವಸ್ಥೆ: ಬಿ.ಶ್ರೀರಾಮುಲು

Update: 2020-03-31 18:44 GMT

ಬಳ್ಳಾರಿ, ಮಾ.31: ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ 700 ವೆಂಟಿಲೇಟರ್‍ಗಳು ಲಭ್ಯವಿದ್ದು, 350 ವೆಂಟಿಲೇಟರ್‍ಗಳ ಖರೀದಿಗೆ ಆದೇಶ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೆ ವೆಂಟಿಲೇಟರ್ ಮೂಲಕ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿಲ್ಲ. ಸಮರ್ಪಕವಾಗಿ ಥರ್ಮಲ್ ಸ್ಕ್ಯಾನರ್‍ಗಳನ್ನು ರಾಜ್ಯದ ಎಲ್ಲೆಡೆ ಒದಗಿಸುವುದಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.

ಕಳಪೆ ಮಾಸ್ಕ್ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದು ಸೇರಿದಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಜನರು ಯಾವುದೆ ಕಾರಣಕ್ಕೂ ಕಳಪೆ ಮಾಸ್ಕ್ ಖರೀದಿಸಬಾರದು ಎಂದು ಶ್ರೀರಾಮುಲು ಮನವಿ ಮಾಡಿದರು.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಜೊತೆ ನಿನ್ನೆ ಚರ್ಚಿಸಲಾಗಿದ್ದು, ಅವರು ಇನ್ನೂ ಎರಡು ವಾರಗಳ ಕಾಲ ಹೋಮ್ ಕ್ವಾರಂಟೈನ್ ಸಮರ್ಪಕವಾಗಿ ಮಾಡುವಂತೆ ತಿಳಿಸಿದ್ದಾರೆ. ಎನ್-95 ಮಾಸ್ಕ್, ತ್ರೀಬಲ್ ಲೇಯರ್ ಮಾಸ್ಕ್, ಸುರಕ್ಷತಾ ಪರಿಕರಗಳ ಕಿಟ್, ವೆಂಟಿಲೇಟರ್, ಸ್ಯಾನಿಟೈಸರ್ ಅಗತ್ಯತೆ ಕುರಿತು ಅವರಿಗೆ ತಿಳಿಸಲಾಗಿತ್ತು. ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟಿದ್ದು, ಅವುಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಇದುವರೆಗೆ 91 ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅದರಲ್ಲಿ 6 ಜನರು ಗುಣಮುಖರಾಗಿದ್ದು, ಮೂರು ಜನರು ಮೃತಪಟ್ಟಿದ್ದಾರೆ. 226 ಜನರು ಐಸೋಲೇಷನ್ ವಾರ್ಡ್‍ನಲ್ಲಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.

ಹೊಸಪೇಟೆಯಲ್ಲಿಯೂ ಮೂರು ಜನರಿಗೆ ಕೊರೋನ ಸೋಂಕು ಪಾಸಿಟಿವ್ ಇರುವುದು ನಿನ್ನೆ ಸಂಜೆ ದೃಢಪಟ್ಟಿದೆ. ಇಡೀ ನಗರವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ಸೋಂಕಿತರ ಮನೆಯ 5 ಕಿ.ಮೀ.ಸುತ್ತ ಬಫರ್ ಝೋನ್ ಆಗಿ ಪರಿವರ್ತಿಸಲಾಗಿದೆ. ಅಲ್ಲಿ ಸೋಂಕು ವ್ಯಾಪಿಸದಂತೆ ಎಲ್ಲ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News