ಬೆಂಗಳೂರು: ಪೊಲೀಸರ ಜಾಗೃತಿ ಕ್ರಮಕ್ಕೆ ಮೆಚ್ಚುಗೆ

Update: 2020-03-31 18:48 GMT

ಬೆಂಗಳೂರು, ಮಾ.31: ಕೊರೋನ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಲಾಕ್ ಡೌನ್ ಜಾರಿಗೊಳಿಸಿದ ದಿನದಿಂದಲೂ ನಗರ ಪೊಲೀಸರು ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಕೊರೋನ ಕುರಿತು ಜಾಗೃತಿ ಮೂಡಿಸುತ್ತಿರುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ನಗರದ ಅಧಿಕಾರಿಗಳು ಸೇರಿ ಸುಮಾರು 16 ಸಾವಿರ ಪೊಲೀಸ್ ಸಿಬ್ಬಂದಿ, ರಾಜ್ಯ ಮೀಸಲು ಪಡೆಯ 24 ತುಕಡಿಗಳು ಹಾಗೂ ಜಿಲ್ಲಾ ಸಶಸ್ತ್ರ ಪಡೆಯ 24 ತುಕಡಿಗಳ ಸಿಬ್ಬಂದಿ ಹಗಲಿರುಳೆನ್ನದೆ ಮೂರು ಪಾಳಯದಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ನಗರದ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಗಳು ಜನ ಸೇರುವ ಸ್ಥಳಗಳಲ್ಲಿ ಮೊಕ್ಕಾಂ ಹೂಡಿ ವಾಹನದಲ್ಲಿ ಸಂಚರಿಸುವವರು ಅನಗತ್ಯವಾಗಿ ಓಡಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿರುವುದಲ್ಲದೆ ಕೊರೋನ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಕೊರೋನ ಸೋಂಕಿನ ವಿರುದ್ಧ ಹೋರಾಡಲು ‘ಅರೆಸ್ಟ್ ಕೊರೋನ’ ಹೆಸರಿನಲ್ಲಿ ಅಭಿಯಾನವನ್ನು ನಡೆಸುತ್ತಿರುವ ನಗರ ಪೊಲೀಸರು ಸಾರ್ವಜನಿಕರಿಗೆ ಕೊರೋನ ಸೋಂಕಿತರ ಮಾಹಿತಿ ನೀಡುತ್ತಿರುವುದಲ್ಲದೆ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಬೆಳಗ್ಗೆ 6 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ರಾತ್ರಿ 10, ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಮೂರು ಶಿಫ್ಟ್ ನಲ್ಲಿ ಪೊಲಿಸ್ ಸಿಬ್ಬಂದಿ ಕರ್ತವ್ಯದಲ್ಲಿ ತೊಡಗಿದ್ದು, ಎಲ್ಲರಿಗೂ ಇಲಾಖೆಯಿಂದ ಊಟ-ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.

ನಗರದ 108 ಕಾನೂನು ಸುವ್ಯವಸ್ಥೆ ಪೊಲಿಸ್ ಠಾಣೆಗಳು ಹಾಗೂ 44 ಸಂಚಾರ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ ಪ್ರತಿ ದಿನ ಮಧ್ಯಾಹ್ನ, ರಾತ್ರಿ ಹಾಗೂ ಬೆಳಗಿನ ತಿಂಡಿಗೆ ವ್ಯವಸ್ಥೆ ಮಾಡಲಾಗಿದೆ.

ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುವುದು, ದಿನಸಿ ಅಂಗಡಿಗಳ ಬಳಿ ಚೌಕಾಕಾರದ ವೃತ್ತ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.

ಬೀದಿ ನಾಟಕ, ವೈರಲ್ 
ಕೊರೋನ ವೈರಸ್ ಸಂಬಂಧ ನಗರದ ಸಂಚಾರ ಪೊಲೀಸರು, ವಾಹನ ಸವಾರರನ್ನುದ್ದೇಶಿಸಿ ಮಾಡಿರುವ ಜಾಗೃತಿ ನಾಟಕವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News