ಲಾಕ್‌ಡೌನ್ ಪರಿಣಾಮ: ಹೂಗಳಿಗೆ ಕುಸಿದ ಬೇಡಿಕೆ, ದನಗಳ ಮೇವಾಗಿ ಬಳಕೆ

Update: 2020-04-01 17:31 GMT

ಚಂಡೀಗಢ, ಎ.1: ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕೆ ಬಳಸಲಾಗುವ ಮಾರಿಗೋಲ್ಡ್, ಮಲ್ಲಿಗೆ, ಲಿಲ್ಲಿ ಹೂ, ಗುಲಾಬಿ ಇತ್ಯಾದಿ ಹೂಗಳಿಗೆ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ವಿಪರೀತ ಬೇಡಿಕೆ ಇರುತ್ತದೆ. ಆದರೆ ಈಗ ಕೊರೊನ ವೈರಸ್ ಕಾರಣದಿಂದ ಇವುಗಳನ್ನು ಕೇಳುವವರೇ ಇಲ್ಲವಾಗಿದ್ದು ಹೂ ಬೆಳೆವ ರೈತರು ತಲೆಯ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ.

ಬಹುತೇಕ ಹೂ ಬೆಳೆಗಾರರು ತಾವು ಬೆಳೆದ ಹೂಗಳನ್ನು ದನಗಳಿಗೆ ಮೇವಾಗಿ ಬಳಸುತ್ತಿದ್ದಾರೆ. ಕೊರೊನ ವೈರಸ್ ಲಾಕ್‌ಡೌನ್ ಕಾರಣದಿಂದ ದೇಶದೆಲ್ಲೆಡೆ ಹೂವಿನ ಮಾರುಕಟ್ಟೆಯೂ ಬಂದ್ ಆಗಿದೆ. ಜಾನುವಾರುಗಳ ಮೇವಿಗೂ ಕೊರತೆಯಾಗಿರುವುದರಿಂದ ಹೈನುಗಾರರು ಇದೀಗ ಮೇವಿಗೆ ಪರ್ಯಾಯವಾಗಿ ಹೂವುಗಳನ್ನು ಬಳಸುತ್ತಿದ್ದಾರೆ.

ದೇವರಿಗೆ ಅಲಂಕಾರ ಮಾಡಲು ಈ ಹೂಗಳನ್ನು ಬಳಸಲಾಗುತ್ತಿತ್ತು. ವಿಪರೀತ ಬೇಡಿಕೆಯೂ ಇತ್ತು. ಆದರೆ ಈಗ ಬೇಡಿಕೆ ಕುಸಿದಿದೆ. ಬೇಡಿಕೆ ಇದ್ದರೂ ಪೂರೈಸಲು ಆಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ರಸ್ತೆಯಲ್ಲಿ ಚೆಲ್ಲುವಂತಾಗಿದೆ. ಆದರೆ ಈಗ ಜಾನುವಾರುಗಳಿಗೆ ಮೇವು ಉಣ್ಣಿಸಲು ಗ್ರಾಮಸ್ಥರು ಇದನ್ನು ಉಪಯೋಗಿಸುತ್ತಿದ್ದಾರೆ. ಹೂವು ಬೆಳೆದು ಮಾರುವುದನ್ನೇ ಜೀವನೋಪಾಯ ಮಾಡಿಕೊಂಡಿರುವ ನಮಗೆ ಇದೊಂದು ಮಾರಕ ಆಘಾತವಾಗಿದೆ ಎಂದು ಜಿಂದ್ ಜಿಲ್ಲೆಯ ಹೂವಿನ ಕೃಷಿಕ ಸುಖ್‌ದೇವ್ ಅಳಲು ತೋಡಿಕೊಂಡಿದ್ದಾರೆ.

ಅಹೀರ್ಕಾ ಗ್ರಾಮದಲ್ಲಿ ಪ್ರತೀ ವರ್ಷ ಒಂದು ಎಕ್ರೆ ಜಮೀನನ್ನು 50,000 ರೂ,ಗೆ ಲೀಸ್‌ಗೆ ಪಡೆದು ಸುಖ್‌ದೇವ್ ಅಲ್ಲಿ ಹೂವಿನ ಕೃಷಿ ಮಾಡುತ್ತಿದ್ದಾರೆ. ಪ್ರತೀ ವರ್ಷ ಎಲ್ಲಾ ಖರ್ಚು ತೆಗೆದು ಸುಮಾರು 30,000 ರೂ. ಲಾಭವಾಗುತ್ತದೆ. ಆದರೆ ಈ ವರ್ಷ ಲಾಕ್‌ಡೌನ್‌ನಿಂದ ಎಲ್ಲಾ ಶ್ರಮ ವ್ಯರ್ಥವಾಗಿದೆ. ಬೆಳೆ ಚೆನ್ನಾಗಿ ಬಂದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಎಂದವರು ಹೇಳಿದ್ದಾರೆ.

ಹರ್ಯಾಣದ ಜಿಂದ್ ಹಾಗೂ ಇತರ ಕೆಲವು ಜಿಲ್ಲೆಗಳು ಮಾರಿಗೋಲ್ಡ್, ಮಲ್ಲಿಗೆ, ಲಿಲಿ, ಗುಲಾಬಿ ಮತ್ತಿತರ ಹೂಗಳಿಗೆ ಹೆಸರಾಗಿದೆ. ರಾಜ್ಯದಲ್ಲಿ ಮಾತ್ರವಲ್ಲ ಪಂಜಾಬ್ ಹಾಗೂ ದಿಲ್ಲಿಯಲ್ಲೂ ಈ ಹೂಗಳಿಗೆ ವಿಪರೀತ ಬೇಡಿಕೆಯಿದೆ. ಹರ್ಯಾಣದಲ್ಲಿ ಬಹುತೇಕ ಹೂ ಬೆಳೆಗಾರರು ಸ್ವಂತ ಜಮೀನು ಹೊಂದಿರದಿದ್ದರೂ ಇತರ ಜಮೀನನ್ನು ಲೀಸ್‌ಗೆ ಪಡೆದು ಹೂ ಬೆಳೆಯುತ್ತಿದ್ದಾರೆ. ಲೀಸ್ ಮೊತ್ತ ಮುಂಗಡವಾಗಿ ನೀಡಬೇಕಿರುವುದರಿಂದ ಬಾಡಿಗೆ ವಿನಾಯಿತಿ ಸೌಲಭ್ಯ ಇವರಿಗೆ ಲಭಿಸುವುದಿಲ್ಲ.

ಪಂಜಾಬ್ ಮತ್ತು ಹರ್ಯಾಣದಲ್ಲಿ ಸಾಮಾನ್ಯವಾಗಿ ಗೋಧಿ ಬೆಳೆಯುತ್ತಾರೆ. ಆದರೆ ಭೂಮಿಯ ಫಲವತ್ತತೆ ಹೆಚ್ಚಬೇಕೆಂಬ ನಿಟ್ಟಿನಲ್ಲಿ ಸರಕಾರ ವೈವಿಧ್ಯಮಯ ಕೃಷಿಗೆ ಪ್ರೋತ್ಸಾಹ ನೀಡಿದೆ. ಆದ್ದರಿಂದ ನಾವು ಹೂವನ್ನು ಬೆಳೆಯಲು ಮುಂದಾಗಿದ್ದೇವೆ. ಪ್ರಧಾನ ಮಂತ್ರಿ ಹಾಗೂ ರಾಜ್ಯ ಸರಕಾರ ಹೂ ಬೆಳೆಗಾರರ ಸಮಸ್ಯೆಯನ್ನು ಅರಿತು ಅವರ ಹಿತಾಸಕ್ತಿ ರಕ್ಷಣೆಗೆ ಮುಂದಾಗಬೇಕು ಎಂದು ರಾಂಪಾಲ್ ಖಂಡೇಲಾ ಎಂಬ ರೈತ ಆಗ್ರಹಿಸಿದ್ದಾನೆ. ಹೂವಿನ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮುಂದಿನ ದಿನದಲ್ಲಿ ರೈತರು ತರಕಾರಿ ಬೆಳೆಯಲು ನಿರ್ಧರಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News