ಆದಿತ್ಯನಾಥ್‍ ರನ್ನು ನಿಂದಿಸಿದ ಆರೋಪ: thewire.in ಸಂಪಾದಕರ ವಿರುದ್ಧ ಎರಡು ಎಫ್‍ಐಆರ್

Update: 2020-04-02 09:01 GMT

ಲಕ್ನೋ:  ಉತ್ತರ ಪ್ರದೇಶ ಮುಖ್ಯಮಂತ್ರಿ  ಆದಿತ್ಯನಾಥ್ ಅವರ ಕುರಿತಂತೆ ನಿಂದನಾತ್ಮಕವಾಗಿ ತಮ್ಮ ಬ್ಲಾಗ್‍ ನಲ್ಲಿ ಬರೆದಿದ್ದಾರೆಂದು ಆರೋಪಿಸಿ  thewire.in ಸಂಪಾದಕರ ವಿರುದ್ಧ ಫೈಝಾಬಾದ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈ ದೂರನ್ನು ಠಾಣಾಧಿಕಾರಿ ನಿತೀಶ್ ಕುಮಾರ್ ಶ್ರೀವಾಸ್ತವ ಅವರೇ ದಾಖಲಿಸಿದ್ದಾರೆ.

ಅಯೋಧ್ಯೆ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಎಫ್‍ಐಆರ್ ದಾಖಲಾಗಿದ್ದು ಸ್ಥಳೀಯ ನಿವಾಸಿ ಹರ್ವಜನ್ ಗೌಡ್ ಎಂಬವರು  ಸಲ್ಲಿಸಿರುವ ತಮ್ಮ ದೂರಿನಲ್ಲಿ 'ಸಿದ್ಧಾರ್ಥ್' ಎಂಬವರು ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆಂದು ದೂರಿದ್ದಾರೆ. ಎರಡೂ ಪ್ರಕರಣಗಳಲ್ಲಿ ಸಂಪಾದಕರ ವಿರುದ್ಧ ಐಪಿಸಿ ಸೆಕ್ಷನ್ 188 ಹಾಗೂ ಸೆಕ್ಷನ್ 505(2) ಅನ್ವಯ ಪ್ರಕರಣ ದಾಖಲಿಸಲಾಗಿದೆ.

"ತಬ್ಲೀಗಿ ಜಮಾಅತ್ ಕಾರ್ಯಕ್ರಮದ ದಿನದಂದೇ ಆದಿತ್ಯನಾಥ್ ಹೇಳಿಕೆ ನೀಡಿ ಮಾರ್ಚ್ 25ರಿಂದ ಎಪ್ರಿಲ್ 2ರ ತನಕ ರಾಮ ನವಮಿ ಸಂದರ್ಭ ಅಯೋಧ್ಯೆಯಲ್ಲಿ ಆಯೋಜಿಸಲಾದ ಜಾತ್ರೆ ನಿಗದಿಯಂತೆ ನಡೆಯುವುದು ಎಂದಿದ್ದರೆ,  ಶ್ರೀ ರಾಮ ತನ್ನ ಭಕ್ತಾದಿಗಳನ್ನು ಕೊರೋನ ವೈರಸ್‍ನಿಂದ ರಕ್ಷಿಸುತ್ತಾನೆ ಎಂದು ಆಚಾರ್ಯ ಪರಮಹಂಸ್ ಹೇಳಿದ್ದರು. ಮಾರ್ಚ್ 24ರಂದು  ಪ್ರಧಾನಿ ಮೋದಿ ಕರ್ಫ್ಯೂ ರೀತಿಯ ಲಾಕ್‍ ಡೌನ್ ಘೋಷಿಸಿದ ಸಂದರ್ಭ ಆದಿತ್ಯನಾಥ್ ಅವರು ಅಧಿಕೃತ ನಿಯಮಗಳನ್ನು ಉಲ್ಲಂಘಿಸಿ ಡಝನುಗಟ್ಟಲೆ ಇತರ ಜನರೊಂದಿಗೆ ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು'' ಎಂದು thewire.in ನಲ್ಲಿ  ಬರೆಯಲಾಗಿತ್ತು ಎಂದು ಶ್ರೀವಾಸ್ತವ ತಮ್ಮ ದೂರಿನಲ್ಲಿ ಹೇಳಿದ್ದರು ಹಾಗೂ ಈ ಕುರಿತಂತೆ ತನಿಖೆಗೂ ಆಗ್ರಹಿಸಿದ್ದರು.

ಈ ಎಫ್‍ಐಆರ್‍ಗಳು ಮಾಧ್ಯಮಗಳ ಮೇಲಿನ ನೇರ ದಾಳಿಯಾಗಿವೆ ಎಂದು thewire.in  ಸಂಪಾದಕ ಸಿದ್ಧಾರ್ಥ ವರದರಾಜನ್ ಹೇಳಿದ್ದಾರೆ. ಪ್ರಧಾನಿ ಲಾಕ್‍ ಡೌನ್ ಘೋಷಿಸಿದ ದಿನವಾದ ಮಾರ್ಚ್ 24ರಂದು ಆದಿತ್ಯನಾಥ್ ಅಯೋಧ್ಯೆಯಲ್ಲಿ ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದನ್ನು ನಾನು ಮತ್ತೆ ಹೇಳುತ್ತೇನೆ ಎಂದೂ ವರದರಾಜನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News