ಶಿವಮೊಗ್ಗ ಜಿಲ್ಲೆಯಲ್ಲಿ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ: ಸಚಿವ ಈಶ್ವರಪ್ಪ

Update: 2020-04-03 06:21 GMT

ಶಿವಮೊಗ್ಗ, ಎ.3: ಶಿವಮೊಗ್ಗ ಜಿಲ್ಲೆಯಲ್ಲಿ ಇಂದಿನಿಂದ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ದೇಶದಲ್ಲೆಲ್ಲೂ ಕೋಳಿ ಮಾಂಸ ಮಾರಾಟಕ್ಕೆ ನಿಷೇಧ ಇರಲಿಲ್ಲ. ಹಕ್ಕಿ ಜ್ವರ ಭೀತಿಯಿಂದ ದಾವಣಗೆರೆ ಜಿಲ್ಲೆಯ ಬನ್ನಿಕೋಡು ಗ್ರಾಮದಲ್ಲಿ ಸಾವಿರಾರು ಕೋಳಿಗಳನ್ನು ಗುಂಡಿ ತೆಗೆದು ಹೂಳಲಾಗಿತ್ತು. ಈ ಹಿನ್ನೆಯಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಕೋಳಿ ಮಾರಾಟ ನಿಷೇಧಿಸಲಾಗಿತ್ತು ಎಂದರು.

ಶಿವಮೊಗ್ಗದಲ್ಲಿ ಹಕ್ಕಿ ಜ್ವರ ನಿಯಂತ್ರಣ
ಕೋಳಿ ಜ್ವರ ಶಿವಮೊಗ್ಗದಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದೆ. ಹಾಗಾಗಿ ಇನ್ನು ಮುಂದೆ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟಕ್ಕೆ ನಿಷೇಧ ಹೇರಲು ಸಾಧ್ಯವಿಲ್ಲ. ಆದ್ದರಿಂದ ಕೋಳಿ ಮಾಂಸ ಮಾರಾಟಕ್ಕೆ ಇವತ್ತಿನಿಂದಲೇ ಅವಕಾಶವಿದೆ. ಆದರೆ ಹೆಚ್ಚು ದರಕ್ಕೆ ಮಾರಾಟ ಮಾಡುವ ಕುರಿತು ತಿಳಿದು ಬಂದರೆ ದರ ನಿಗದಿ ಕುರಿತು ಯೋಚಿಸೋಣ ಎಂದರು.

ದೆಹಲಿಯ ನಿಝಾಮುದ್ದೀನ್ ತಬ್ಲಿಗ್ ಪ್ರಾರ್ಥನಾ ಮಂದಿರದಿಂದ ಜಿಲ್ಲೆಗೆ 24 ಮಂದಿ ಬಂದಿದ್ದು ಇದರಲ್ಲಿ ಮೂವರು ಹೊರಜಿಲ್ಲೆಯವರಿದ್ದಾರೆ. ಇದರಲ್ಲಿ 10 ಜನರನ್ನು ತಪಾಸಣೆ ಮಾಡಲಾಗಿದೆ. ಯಾರಿಗೂ ಕೊರೋನ ಭೀತಿ ಇಲ್ಲ. ಉಳಿದ 11 ಜನರಲ್ಲಿ 14 ದಿನ ಮತ್ತು 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದವರು ಇದ್ದಾರೆ. ಆದರೂ ಮುಂಜಾಗೃತ ಕ್ರಮವಾಗಿ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ, ಕಮಿಷನರ್ ಚಿದಾನಂದ ವಟಾರೆ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News