ದೀಪ ಬೆಳಗಿಸುವ ಬಗ್ಗೆ ಪ್ರಧಾನಿಯ ಮಾತು ಜನರನ್ನು ಮರುಳಾಗಿಸುವ ಪ್ರಯತ್ನ: ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್

Update: 2020-04-03 16:37 GMT

ಬೆಂಗಳೂರು. ಎ.3: ಎಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಕ್ಯಾಂಡಲ್ ದೀಪ ಹಚ್ಚಿ ಮೊಬೈಲ್ ಫ್ಲಾಶ್‍ಲೈಟ್ ಬೆಳಗಿ ಕೊರೋನ ವಿರುದ್ಧ ಹೋರಾಟವನ್ನು ದೃಢಗೊಳಿಸಬೇಕೆನ್ನುವ ಪ್ರಧಾನಿಯ ಮಾತುಗಳು ದೇಶದ ಜನರನ್ನು ಮರುಳಾಗಿಸುವ ಪ್ರಯತ್ನವಾಗಿದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆರೋಪಿಸಿದ್ದಾರೆ.

ಕೊರೋನ ಸಾಂಕ್ರಾಮಿಕದಿಂದ ದೇಶವನ್ನು ಪಾರುಗೊಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ವೈದ್ಯಕೀಯ ಸೌಲಭ್ಯಗಳ ಕೊರತೆ ತೀವ್ರತರವಾಗಿ ಬಾಧಿಸುತ್ತಿರುವಾಗ ಹಾಗೂ ಬಡ ಜನತೆ ಅನ್ನ ಆಹಾರಕ್ಕಾಗಿ ತತ್ತರಿಸುತ್ತಾ ವಾಹನಗಳ ಸೌಕರ್ಯವಿಲ್ಲದೆ ನೂರಾರು ಕಿ.ಮೀ ನಡೆದುಕೊಂಡೆ ಮನೆಗಳತ್ತ ತೆರಳುತ್ತಿರುವಾಗ ಪ್ರಧಾನಿಯ ಈ ಹೇಳಿಕೆ ಹೊರಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

ಚಪ್ಪಾಳೆ ತಟ್ಟುವುದರಿಂದ, ಗಂಟೆ ಬಾರಿಸುವುದರಿಂದ, ಕ್ಯಾಂಡಲ್ ಬೆಳಗಿಸುವುದರಿಂದ ಮತ್ತು ಮೊಬೈಲ್ ಬೆಳಕು ಹಾಯಿಸುವುದರಿಂದ ಸಾಂಕ್ರಾಮಿಕ ಕೊರೋನ ವಿರುದ್ಧ ಸೆಣಸನ್ನು ಬಲಪಡಿಸುವುದು ಎಂಬ ಯೋಚನೆಗಾಗಿ ಪ್ರಧಾನಿ ಕಳೆದಿರುವ ಹೊತ್ತನ್ನು ಒಂದು ವೇಳೆ ದೇಶದ ಜನತೆ ಪಡುತ್ತಿರುವ ಪಡಿಪಾಟಲು, ವೈದ್ಯಕೀಯ ಸೌಲಭ್ಯ ನೆರವು ಬಗ್ಗೆ ವ್ಯಯಿಸಿದ್ದರೆ ಭಾರತ ನೆಮ್ಮದಿಯನ್ನು ಕಾಣುತ್ತಿತ್ತು ಎಂದು ಇಲ್ಯಾಸ್ ತುಂಬೆ ಹೇಳಿದ್ದಾರೆ.

ಲಾಕ್‍ಡೌನ್ ಕಾರಣ ಜನರ ನೆರವಿಗಾಗಿ ಯೋಜನೆಗಳು ಎಂಬ ಘೋಷಣೆಯನ್ನು ಕೇಂದ್ರ ಸರಕಾರ ಮಾಡಿದ್ದರೂ ಅವ್ಯಾವುವೂ ಬಡ ಜನರ ಪಾಲಿಗೆ ತಲುಪದೆ ಮರೀಚಿಕೆಯಾಗಿದೆ. ಇಡೀ ದೇಶದಲ್ಲಿ ಲಾಕ್‍ಡೌನ್ ಯಶಸ್ವಿಯಾಗಲು ಕಾರಣ ಈ ದೇಶದ 130 ಕೋಟಿ ಜನತೆಯ ತ್ಯಾಗ. ತಮ್ಮ ನೋವು ಸಂಕಷ್ಟ, ಬವಣೆಗಳನ್ನು ಬದಿಗೊತ್ತಿಕೊಂಡು ಎಲ್ಲರೂ ದೇಶಕ್ಕಾಗಿ ಒಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಸೆಲೆಬ್ರೆಟಿಗಳು ಮತ್ತು ರಾಜಕಾರಣಿಗಳು ಚಪ್ಪಾಳೆ ತಟ್ಟುವ ಅಥವಾ ದೀಪ ಬೆಳಗಿಸುವ ಫೋಟೋಗಳು ಮತ್ತು ಸೆಲ್ಫಿಗಳು ದೇಶದ ಸಮಸ್ಯೆಗಳಿಗೆ ಯಾವ ದೃಷ್ಟಿಯಲ್ಲೂ ಪ್ರಯೋಜನವಿಲ್ಲ. ಸಂಕಷ್ಟದಲ್ಲಿರುವ ಬಡಜನತೆಯ, ಕಾರ್ಮಿಕರ, ರೈತರ ಸಮಸ್ಯೆಗಳನ್ನು ಪರಿಹರಿಸಲು ಯಾಕಾಗಿ ಪ್ರಧಾನಿಯಿಂದ ಯಾವುದೇ ಯೋಜನೆಗಳು ಅಥವಾ ಭರವಸೆಯ ಮಾತುಗಳು ಹೊರಬರುವುದಿಲ್ಲ ಎಂದು ತಿಳಿಸಿದ್ದಾರೆ.

ಚೀನಾ, ಇಂಗ್ಲೆಂಡ್, ಖತರ್, ಅಮೆರಿಕ ಮುಂತಾದ ವಿದೇಶಿ ರಾಷ್ಟ್ರಗಳಲ್ಲಿ ಕೊರೋನ ಚಿಕಿತ್ಸೆಗಾಗಿ ಹೊಸದಾಗಿ ವಿಶೇಷ ಆಸ್ಪತ್ರೆಗಳನ್ನು ಕೆಲವೆ ದಿನಗಳ ಒಳಗೆ ಕಟ್ಟಲಾಗಿದ್ದು, ಅವುಗಳಲ್ಲಿ ಸುಸಜ್ಜಿತ ವೈದ್ಯಕೀಯ ಸೌಲಭ್ಯ ಮತ್ತು ಸಾಕಷ್ಟು ವೆಂಟಿಲೇಟರ್ ಗಳನ್ನು ಒದಗಿಸಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೊರೋನ ಬಗ್ಗೆ ಮುನ್ನೆಚ್ಚರಿಕೆ ನೀಡಿದ ನಂತರವೂ ತಕ್ಷಣವೇ ಎಚ್ಚೆತ್ತುಕೊಳ್ಳದೆ ಭಾರತ ಸರಕಾರ ತಡಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ವಿದೇಶದಿಂದ ಬಂದ ಸಾವಿರಾರು ಭಾರತೀಯರನ್ನು ಐಸೋಲೇಷನ್ ಮಾಡದೆ ಬಿಟ್ಟಿರುವ ಸರಕಾರದ ನಿರ್ಲಕ್ಷ್ಯ ಇಂದಿನ ಈ ಸಂದಿಗ್ಧ ಪರಿಸ್ಥಿತಿಗೆ ಹೇತುವಾಗಿದೆ. ಕೊರೋನ ಸಾಂಕ್ರಾಮಿಕ ಅಟ್ಟಹಾಸವನ್ನು ಕೊನೆಗಾಣಿಸಲು ದೇಶದ ಜನರೆಲ್ಲ ತಮ್ಮ ಸಂಕಷ್ಟಗಳನ್ನು ಸಹಿಸಿಕೊಂಡು ಒಂದಾಗಿ ಹೋರಾಡುತ್ತಿದ್ದಾರೆ. ಆದರೆ, ಸರಕಾರಗಳು ಮಾತ್ರ ರಚನಾತ್ಮಕವಾಗಿ, ಕ್ರಿಯಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ ಚಿಂತಿಸುವ ಮತ್ತು ಕಾರ್ಯಪ್ರವೃತ್ತರಾಗುವ ಅಗತ್ಯವಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News