ಲಾಕ್‌ಡೌನ್‌ ವೇಳೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಅಂಗಡಿಗೆ ಬೀಗ ಜಡಿಯಬೇಕು: ಕೇಂದ್ರ

Update: 2020-04-03 17:40 GMT

ಹೊಸದಿಲ್ಲಿ, ಎ.3: ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗಿಗಳಾಗಿರುವ ವಲಸೆ ಕಾರ್ಮಿಕರಿಗೆ ಕೂಲಿ ಪಾವತಿಯನ್ನು ಕೋರಿ ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿರುವ ಅರ್ಜಿಗಳನ್ನು ಶುಕ್ರವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸಿರುವ ಕೇಂದ್ರವು,ದೇಶವು ಈ ಅಭೂತಪೂರ್ವ ದುರಂತದಿಂದ ಹೊರಬರುವವರೆಗೂ ಇಂತಹ ವೃತ್ತಿಪರ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗಳ ಅಂಗಡಿಗಳಿಗೆ ಬೀಗ ಹಾಕಬೇಕು ಎಂದು ಹೇಳಿದೆ.

ನಿರ್ದಿಷ್ಟವಾಗಿ ಜಾಗತಿಕ ಬಿಕ್ಕಟ್ಟಿನ ಈಗಿನ ದಿನಗಳಲ್ಲಿ, ಹವಾನಿಯಂತ್ರಿತ ಕಚೇರಿಗಳಲ್ಲಿ ಕುಳಿತುಕೊಂಡು ತಳಮಟ್ಟದ ಯಾವುದೇ ಮಾಹಿತಿಗಳು ಗೊತ್ತಿಲ್ಲದೆ ಪಿಐಎಲ್‌ಗಳನ್ನು ಸಿದ್ಧಪಡಿಸುವುದು ಯಾವುದೇ ಸಾಮಾಜಿಕ ಕಾರ್ಯಕರ್ತರಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ವಾದಿಸಲು ಅರ್ಹರನ್ನಾಗಿಸುವುದಿಲ್ಲ ಎಂದು ಸರಕಾರವು ಹೇಳಿದೆ.

ಕೊರೋನ ವೈರಸ್ ಹರಡುವಿಕೆಯನ್ನು ಕನಿಷ್ಠಗೊಳಿಸುವಲ್ಲಿ ಸರಕಾರವು ಅನುಕರಣೀಯ ಕಾರ್ಯವನ್ನು ಮಾಡಿದೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ದೀಪಕ ಗುಪ್ತಾ ಅವರ ಪೀಠಕ್ಕೆ ತಿಳಿಸಿದರು.

ಪೀಠವು ವಲಸೆ ಕಾರ್ಮಿಕರ ಬವಣೆ ಕುರಿತು ಸಾಮಾಜಿಕ ಹೋರಾಟಗಾರರಾದ ಹರ್ಷ ಮಂದರ್,ಅಂಜಲಿ ಭಾರದ್ವಾಜ್ ಮತ್ತು ಸ್ವಾಮಿ ಅಗ್ನಿವೇಶ್ ಅವರು ಸಲ್ಲಿಸಿರುವ ಪಿಐಎಲ್‌ಗಳ ವಿಚಾರಣೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕೈಗೆತ್ತಿಕೊಂಡಿತ್ತು.

ಪಿಐಎಲ್‌ಗಳನ್ನು ಬಲವಾಗಿ ವಿರೋಧಿಸಿದ ಮೆಹ್ತಾ,ದೇಶವು ಮಾರಣಾಂತಿಕ ವೈರಸ್‌ನ ವಿರುದ್ಧ ಹೋರಾಡುವ ಅಭೂತಪೂರ್ವ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಮತ್ತು ಎಲ್ಲ ಅಧಿಕಾರಿಗಳು ಹಲವಾರು ನಿಯಂತ್ರಣ ಕೊಠಡಿಗಳ ಮೂಲಕ ರಾತ್ರಿ ಹಗಲು ಶ್ರಮಿಸುತ್ತಿದ್ದಾರೆ. ಅರ್ಜಿದಾರರ ಪೈಕಿ ಒಬ್ಬರೂ ಬಡವರು ಮತ್ತು ಅಗತ್ಯವುಳ್ಳವರಿಗೆ ಅಥವಾ ವೈರಸ್ ಸೋಂಕಿನಿಂದ ನರಳುತ್ತಿರುವವರಿಗೆ ಸೇವೆ ಸಲ್ಲಿಸುವ ಬಗ್ಗೆ ತಲೆಯನ್ನೂ ಕೆಡಿಸಿಕೊಂಡಿಲ್ಲ, ಹೀಗಾಗಿ ಅವರನ್ನು ಸಾರ್ವಜನಿಕ ಕಳಕಳಿಯ ನಾಗರಿಕರು ಎಂದು ಪರಿಗಣಿಸಲೆಂದೂ ಸಾಧ್ಯವಿಲ್ಲ. ಇಂತಹ ವೃತ್ತಿಪರ ಪಿಐಎಲ್ ಅಂಗಡಿಗಳನ್ನು ಲಾಕ್‌ಡೌನ್ ಮಾಡಬೇಕು ಎಂದರು.

ಪ್ರಾಮಾಣಿಕ ಎನ್‌ಜಿಒಗಳು ಮತ್ತು ಸಾರ್ವಜನಿಕ ಕಳಕಳಿಯುಳ್ಳ ಪ್ರಜೆಗಳು ತಳಮಟ್ಟದಲ್ಲಿ ವೈರಸ್ ವಿರುದ್ಧದ ಹೋರಾಟದಲ್ಲಿ ಸರಕಾರಿ ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ,ಅಗತ್ಯವುಳ್ಳವರಿಗೆ ನೆರವಾಗುತ್ತಿದ್ದಾರೆ ಎಂದ ಮೆಹ್ತಾ, ಈ ಮಾರಣಾಂತಿಕ ವೈರಸ್ ವಿರುದ್ಧ ಸರಕಾರದ ಹೋರಾಟದ ನಡುವೆ ಇಂತಹ ಪಿಐಎಲ್‌ಗಳನ್ನು ಸಲ್ಲಿಸುವುದು ಇಡೀ ದೇಶಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News