ಕೋಲಾರ: ಪತ್ರಕರ್ತರಿಗೆ ಸ್ಯಾನಿಟರೈಸ್, ಮಾಸ್ಕ್ ವಿತರಿಸಿದ ಜಿಲ್ಲಾಧಿಕಾರಿ ಸತ್ಯಭಾಮ

Update: 2020-04-03 18:06 GMT

ಕೋಲಾರ, ಎ.3: ವೆಂಟಿಲೇಟರ್ ಮತ್ತಿತರ ಕೊರೋನ ಚಿಕಿತ್ಸೆಗೆ ಸಂಬಂಧಿಸಿದಂತೆ ತುರ್ತು ಅಗತ್ಯತೆಗಳಿಗಾಗಿ ಆರೋಗ್ಯ ಇಲಾಖೆಗೆ ಸಿಆರ್‍ಎಫ್ ನಿಧಿಯಿಂದ ರೂ.2.95 ಕೋಟಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರಿಗೆ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಈವರೆಗೂ ಕೊರೋನ ಪ್ರಕರಣ ಪತ್ತೆಯಾಗದಿರುವ ಕುರಿತು ಮಾತನಾಡಿದ ಅವರು, ಜಿಲ್ಲಾಡಳಿತ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಜತೆಗೆ ಯಾವುದೋ ದೊಡ್ಡ ಶಕ್ತಿಯ ಕೃಪೆಯೂ ಇದ್ದಂತಿದೆ. ಕೋಲಾರಮ್ಮನ ಆಶೀರ್ವಾದವೂ ಇರಬಹುದು ಅಥವಾ ನಿಮ್ಮ ಪ್ರಾರ್ಥನೆಯಿಂದ ಕೊರೋನ ಎಂಬ ಮಹಾಮಾರಿಯನ್ನು ಯಾವುದೋ ಒಂದು ಅಗೋಚರ ಶಕ್ತಿ ಈವರೆಗೆ ತಡೆ ಹಿಡಿದಿರುವುದು ನಮ್ಮ ಪುಣ್ಯ ಎಂದರು. 

ಮಂಗಳೂರಿನಿಂದ ಆಂದ್ರ ಪ್ರದೇಶಕ್ಕೆ ತೆರಳು ಸುಮಾರು 1,500 ಮಂದಿ ಮೀನುಗಾರರು ನಮ್ಮ ಜಿಲ್ಲೆಯ ಮೂಲಕ ಪ್ರಯಾಣಿಸುವಾಗ ಗಡಿಭಾಗವಾದ ನಂಗಲಿಯ ಚೆಕ್ ಪೋಸ್ಟ್ ನಲ್ಲಿ ಆಂದ್ರ ಪ್ರದೇಶದವರು ಕಾರ್ಮಿಕರಿಗೆ ಕೊರೋನಾ ಸೊಂಕು ಇರಬಹುದೆಂಬ ಅನುಮಾನದ ಮೇರೆಗೆ ಅವರನ್ನು ಒಳಗೆ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಈ ಸಂದರ್ಭದಲ್ಲಿ ಅಂಧ್ರ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲರನ್ನು ತಪಾಸಣೆ ಮಾಡಿಸಿ ಅವರಲ್ಲಿ ಯಾವುದೇ ಸೊಂಕಿನ ಲಕ್ಷಣಗಳು ಗೋಚರಿಸದ ಕಾರಣ ಅನುಮತಿ ನೀಡಿದರು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಯಾರಿಗಾದರೂ ಒಬ್ಬರಿಗೆ ಸೊಂಕು ಇದ್ದಿದ್ದರೂ ಸಹ ಅದು ನಾವು ಸೇರಿದಂತೆ ಜಿಲ್ಲೆಯಾದಾದ್ಯಂತ ಹರಡುವ ಸಂಭವ ಇತ್ತು. ಅದರೆ ಸುದೈವದಿಂದ ನೀವೆಲ್ಲಾ ಸುರಕ್ಷಿತವಾಗಿದ್ದೀರಿ ಎಂದರು. ವಿಶ್ವದಲ್ಲಿ ದೊಡ್ಡಣ್ಣ ಎಂದೇ ಖ್ಯಾತಿ ಹೊಂದಿರುವ ಅಮೇರಿಕ ರಾಷ್ಟ್ರವು ಕೊರೋನ ಜಾಗೃತಿಯಲ್ಲಿ ಸ್ವಲ್ಪ ನಿರ್ಲಕ್ಷತೆ ವಹಿಸಿದ್ದರಿಂದ ಇಂದು ಭಾರಿ ದಂಡ ತೆರುವಂತಾಗಿದೆ. ಇಂದು ಒಂದು ಐಸಿಯು ಬೆಡ್ ಸಹ ಖಾಲಿ ಇಲ್ಲದಂತಾಗಿದೆ. ಅದರೆ ನಮ್ಮ ರಾಷ್ಟ್ರ ಪ್ರಾರಂಭ ಹಂತದಲ್ಲಿ ಜಾಗೃತಿ ಹೊಂದಿದ್ದರಿಂದ ನಿಯಂತ್ರದಲ್ಲಿ ಸುಧಾರಣೆ ಕಾಣಬಹುದಾಗಿದೆ ಎಂದ ಅವರು ನಮ್ಮಲ್ಲಿ ಲಾಕ್‍ಡೌನ್ ವಿಷಯದಲ್ಲಿ ಶಿಕ್ಷಿತರು, ಅಕ್ಷರಸ್ಥರಿಂದ ಉಲ್ಲಂಘನೆಯಾಗುತ್ತಿದೆ. ಅವರು ತೋರುತ್ತಿರುವ ಉದ್ದಟತನದಿಂದಾಗಿ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡೆಸಿದರು. ಯಾವುದೇ ಸಮಸ್ಯೆಗಳು ಎದುರಾದರೆ ಅದನ್ನು ಎಲ್ಲರೂ ಒಂದು ಸವಾಲು ಎಂದು ಭಾವಿಸಿಕೊಂಡು ಒಗ್ಗಾಟಾಗಿ ಪರಸ್ಪರ ಸಹಕಾರ ಮನೋಬಾವದಲ್ಲಿ ಹೋರಾಟ ಮಾಡಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಿವಿ ಮಾತು ಹೇಳಿದರು. 

ಮಂಗಳೂರಿನಿಂದ ಬಂದ ಕೂಲಿ 1,400ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ಅವರ ತವರು ರಾಜ್ಯ ಆಂಧ್ರಪ್ರದೇಶ ಒಳಸೇರಿಸಿಕೊಳ್ಳಲು ಒಪ್ಪದಿದ್ದಾಗ ಜಿಲ್ಲಾಡಳಿತ ಎಚ್ಚರಿಕೆಯ ಹೆಜ್ಜೆಯಿಟ್ಟು, ಅವರಿಗೆ ಚಿಕಿತ್ಸೆನೀಡಿ, ಯಾವುದೇ ಕೊರೋನ ಲಕ್ಷಣಗಳಿಲ್ಲ ಎಂದು ದೃಢಪಡಿಸಿ ಕಳುಹಿಸಿಕೊಡಲಾಯಿತು ಎಂದರು. ಜನತಾ ಕರ್ಪ್ಯೂ, ಲಾಕ್‍ಡೌನ್  ಸಂದರ್ಭದಲ್ಲಿ ಸರ್ಕಾರದ ಜತೆಗೆ ಸಂಘ ಸಂಸ್ಥೆಗಳು ಬಡವರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ತೋರಬೇಕೆಂದು ಕರೆ ನೀಡಿದರು. 

ಯಾರೇ ಅಗಲಿ ಹೇಳುವುದು ಸುಲಭ ಅದರೆ ಮಾಡುವುದು ಕಷ್ಟ ಎಂಬಂತೆ ಪಡಿತರವನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸಬೇಕಾಗಿತ್ತು. ಅದರೆ ಕೈ ಚೀಲಗಳ ಸಮಸ್ಯೆಯಿಂದ ಹಾಗೂ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರೇ ಪಡಿತರ ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿ ಕೊಂಡು ಪಡೆಯ ಬಹುದಾಗಿದೆ ಎಂದರು. 

ತರಕಾರಿಗಳು, ದಿನಸಿಗಳ ಸಾಗಾಣೆಕೆಗೆ, ಆಹಾರ ಉತ್ಪಾದನೆ ಕೈಗಾರಿಕೆಗಳು ಬಾಗಿಲು ತೆರೆದು ಉತ್ಪಾದಿಸಲು ಅನುಮತಿಸಿದೆ. ಮೋಟರ್ ರಿವೈಂಡಿಗ್ ಶಾಪ್ ತೆರೆಯಲು ಅನುಮತಿ, ದಿನಸಿ ತರಕಾರಿ ಮಾರಾಟಕ್ಕೆ ಮತ್ತು ಸಾಗಣೆಕೆಗೆ ವಿನಾಯಿತಿಸಲಾಗಿದೆ ಎಂದರು. ನಿರಂತರವಾಗಿ ವಿದ್ಯುತ್ ಪೂರೈಕೆಗೆ ಬೆಸ್ಕಾಂಗೆ ವಿಶೇಷ ಸೂಚನೆ, ನೀರಿನ ಸಮಸ್ಯೆಗೆ ಟ್ಯಾಂಕರ್ ಮೂಲಕ ಪೂರೈಕೆ, ಕೋವಿಡ್-19 ಜಾಲಪ್ಪ ಆಸ್ಪತ್ರೆಗೆ ಹಾಗೂ ಜಿಲ್ಳಾ ಆಸ್ಪತ್ರೆಗೆ ತುರ್ತು ಸಂದರ್ಭಕ್ಕೆ ಅಗತ್ಯವಾದ 10 ವೆಂಟಿಲೇಟರ್ಸ್‍ಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ ಅವರು, ಮೇ ತಿಂಗಳವರೆಗೂ ನಾವು ಜಾಗೃತಿಯಿಂದಿರಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಕೊರೋನ ಪಕ್ಕದ ಜಿಲ್ಲೆಗಳಲ್ಲೇ ಇದ್ದರೂ ನಮ್ಮ ಜಿಲ್ಲೆಯಲ್ಲಿ ಕಂಡು ಬಂದಿಲ್ಲ, ಇದಕ್ಕೆ ಜಿಲ್ಲಾಡಳಿತದ ಕ್ರಮಗಳು ಮತ್ತು ಕೊರೋನ ಹರಡುವಿಕೆಯ ಆತಂಕದ ನಡುವೆಯೂ ಪತ್ರಕರ್ತರು ಕೆಲಸ ಮಾಡುತ್ತಿದ್ದು, ಜಿಲ್ಲಾಡಳಿತ ನಗರ ಮತ್ತು ಹೊರವಲಯದಲ್ಲಿ ವಾಹನಗಳ ತಪಾಸಣೆ ಸೇರಿದಂತೆ ವಹಿಸಿರುವ ಎಚ್ಚರಿಕಾ ಕ್ರಮಗಳು ಶ್ಲಾಘನೀಯ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಬಿ.ವಿ.ಗೋಪಿನಾಥ್, ಡಿಸಿಯವರು ಹೊಸದಾಗಿ ಬರುತ್ತಿದ್ದಂತೆ ನೀರಿನ ಸಮಸ್ಯೆ ಜತೆಗೆ ಕೊರೋನ ಸಂಕಷ್ಟ ಎದುರಾಗಿದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇದಕ್ಕೆ ಆಂಧ್ರ ಕಾರ್ಮಿಕರನ್ನು ಆ ರಾಜ್ಯ ಒಳ ಕರೆಸಿಕೊಳ್ಳದಿದ್ದಾಗ ವಹಿಸಿದ ಚಾಕಚಕ್ಯತೆಯೇ ಸಾಕ್ಷಿ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ವದಂತಿಗಳನ್ನು ನಂಬದೇ ಸತ್ಯ ಸುದ್ದಿ ಮಾಡಲು ಪತ್ರಕರ್ತರು ಮುಂದಾಗಬೇಕು ಎಂದು ತಿಳಿಸಿದರು. ಖಜಾಂಚಿ ಎ.ಜಿ.ಸುರೇಶ್‍ ಕುಮಾರ್, ಪತ್ರಕರ್ತರು ಕರೊನಾ ಭೀತಿಯ ನಡುವೆ ಕೆಲಸ ಮಾಡುವಾಗ ಎಚ್ಚರಿಕೆ ವಹಿಸಬೇಕಾಗಿದ್ದು, ಯಾವುದೇ ಸುದ್ದಿ ಪ್ರಕಟಿಸುವಾಗ ಸತ್ಯವನ್ನು ಶೋಧಿಸಬೇಕು ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು, ಪತ್ರಕರ್ತರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News