ನಿಝಾಮುದ್ದೀನ್ ಸಭೆಯ ಹಿಂದೆ ಕೊರೋನ ಜಿಹಾದಿಗಳಿದ್ದಾರೆ: ಸಂಸದೆ ಶೋಭಾ ವಿವಾದಾತ್ಮಕ ಹೇಳಿಕೆ

Update: 2020-04-04 12:59 GMT

ಚಿಕ್ಕಮಗಳೂರು, ಎ.4: ವಿದೇಶದಿಂದ ಬಂದ ಕೊರೋನ ವೈರಸ್ ಸೋಂಕು ಭಾರತವನ್ನು ಸ್ತಬ್ಧ ಮಾಡಿದೆ. ಭಾರತವನ್ನು ಕೊರೋನ ಮುಕ್ತ ಮಾಡಲು ರಾಜ್ಯ ಮತ್ತು ಕೇಂದ್ರ ಟೊಂಕ ಕಟ್ಟಿದ್ದು, ಕೊರೋನ ಸೋಂಕು ತಡೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ದಿಲ್ಲಿಯ ನಿಝಾಮುದ್ದೀನ್ ನಲ್ಲಿ ನಡೆದ ತಬ್ಲೀಗ್ ಸಭೆಯಲ್ಲಿ ಭಾಗವಹಿಸಿದವರಿಂದ ದೇಶದಾದ್ಯಂತ ಕೊರೋನ ಹಬ್ಬಿಸುವ ಹುನ್ನಾರ ನಡೆದಿದೆ. ನಿಝಾಮುದ್ದೀನ್ ಸಭೆಯ ಹಿಂದೆ ಕೊರೋನ ಜಿಹಾದಿಗಳಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಲ್ಲಿಯ ನಿಝಾಮುದ್ದೀನ್ ಸಭೆಗೆ ಹೋಗಿದ್ದವರು ಈಗ ನಾಪತ್ತೆಯಾಗಿದ್ದಾರೆ. ಇದರ ಹಿಂದೆ ಕೊರೋನ ಜಿಹಾದಿ ವಾಸನೆ ಕೂಡ ಬರುತ್ತಿದೆ. ಯಾರು ದಿಲ್ಲಿಯ ಸಭೆಗೆ ಹೋಗಿದ್ದಾರೆಂಬುದನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಆದರೆ ಸಭೆಗೆ ಹೋದವರು ಪೊಲೀಸರು, ಸರಕಾರಕ್ಕೆ ಸಹಕಾರ ನೀಡುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿನ ಸಾದಿಕ್ ಲೇಓಟ್‍ನ ಘಟನೆಯಾಗಿದ್ದು, ನಾನು ಅಲ್ಲಿಗೆ ಭೇಟಿ ನೀಡಿ, ಪರಿಶೀಲಿಸಿದ್ದೇನೆ. ಅಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲಾಗಿದೆ. ಸಾದಿಕ್ ಲೇಔಟ್‍ನಲ್ಲಿ ಕೊರೋನ ಸೋಂಕು ಬಾಧಿತ ಮಹಿಳೆ ಇದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ಮಹಿಳೆ ಅನೇಕ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಯಾವ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು ಎಂಬುದನ್ನು ಪತ್ತೆ ಮಾಡಲು ಆಶಾ ಕಾರ್ಯಕರ್ತೆಯರು ಹೋಗಿದ್ದರು. ಆದರೆ ಅಲ್ಲಿನ ನಿವಾಸಿಗಳು ಸೇರಿ ಸಾಮೂಹಿಕವಾಗಿ ಅವರ ಮೇಲೆ ಹಲ್ಲೆ ಮಾಡಿದ್ದಾರೆಂದು ಶೋಭಾ ಆರೋಪಿಸಿದರು.

ಸರಕಾರ ಕೆಲಸಕ್ಕೆ ಒಂದು ಜನಾಂಗದ ಜನ ಸಹಕಾರ ನೀಡುತ್ತಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಯಾರ್ಯಾರು ದಿಲ್ಲಿಯ ತಬ್ಲೀಗ್ ಜಮಾತ್ ಸಭೆಗೆ ಹೋಗಿದ್ದಾರೋ ಅವರು ಸ್ವತಃ ತಾವಾಗಿಯೇ ಬಂದು ಪೊಲೀಸರಿಗೆ ಮಾಹಿತಿ ನೀಡಬೇಕು. ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಸರಕಾರ ಎಲ್ಲರನ್ನು ಪತ್ತೆ ಮಾಡಿ ಅವರಿಗೆ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಸರಕಾರವನ್ನು ಒತ್ತಾಯಿಸುವುದಾಗಿ ಇದೇ ವೇಳೆ ಎಚ್ಚರಿಸಿದ ಅವರು, ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಕೊರೋನ ತಡೆಗಟ್ಟುವ ದೃಷ್ಟಿಯಿಂದ ಸರಕಾರಗಳು, ಜಿಲ್ಲಾಡಳಿತ ಮಾಡುತ್ತಿರುವ ಎಲ್ಲಾ ಕೆಲಸದಲ್ಲೂ ಸಾರ್ವಜನಿಕರು ಕೈಜೋಡಿಸಬೇಕೆಂದು ಕರೆ ನೀಡಿದರು.

ರಾಜ್ಯ ಹಾಗೂ ಜಿಲ್ಲೆಯಲ್ಲಿ ಉತ್ತರ ಭಾರತದಿಂದ ಬಂದಿರುವ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರಿಗೆ ರೇಷನ್ ಕಾರ್ಡ್ ಇಲ್ಲ, ಜಿಲ್ಲೆಗೆ ಉತ್ತರ ಕರ್ನಾಟಕದಿಂದಲೂ ಕಾರ್ಮಿಕರು ಬಂದಿದ್ದಾರೆ, ಅವರಿಗೂ ಪಡಿತರ ಚೀಟಿ ಇಲ್ಲ. ಜಿಲ್ಲೆಯಲ್ಲಿ ಕೂಲಿಯಿಲ್ಲದೇ ಕೂಲಿಕಾರ್ಮಿಕರು ಸಮಸ್ಯೆಯಲ್ಲಿದ್ದಾರೆ. ಇಂತವರಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಸಾಂಬಾರು ಪದಾರ್ಥಗಳನ್ನು ಸಂಗ್ರಹ ಮಾಡಿ ವಿತರುಸುವ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲೂ ಇದನ್ನು ಮಾಡುತ್ತಿದ್ದೇನೆ. ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಸರಕಾರ ಪಡಿತರ ನೀಡುತ್ತಿದೆ. ಪಡಿತರ ಚೀಟಿ ಇಲ್ಲದವರಿಗೆ ಸಾರ್ವಜನಿಕರು, ರಾಜಕಾರಣಿಗಳು ಸಹಾಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಇದರ ಅಗತ್ಯ ಇರುವವರು ನಗರಸಭೆ ಆವರಣದಲ್ಲಿರುವ ತಮ್ಮ ಕಚೇರಿಗೆ ಬಂದು ಪಡೆದುಕೊಳ್ಳಬಹದು ಎಂದರು.

ಕೊರೋನ ಸೋಂಕಿತ ಪತ್ತೆಗೆ ಜಿಲ್ಲಾಡಳಿತ ಒಳ್ಳೆಯ ಕೆಲಸ ಮಾಡುತ್ತಿದೆ. ಶಂಕಿತರನ್ನು ನಿಗಾದಲ್ಲಿ ಇಡುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಅಧಿಕಾರಿ ವರ್ಗ, ಆರೋಗ್ಯ ಇಲಾಖೆ ಸಿಬ್ಬಂದಿ ರಾತ್ರಿ ಹಗಲು ದುಡಿಯುತ್ತಿದ್ದಾರೆ ಎಂದ ಅವರು, 

ನೆಲದ ಕಾನೂನು ಗೌರವಿಸದವರಿಗೆ ಕಾನೂನಿನ ರುಚಿಯನ್ನು ಮುಂದಿನ ದಿನಗಳಲ್ಲಿ ತೋರಿಸಬೇಕಾಗಿದೆ. ನೆಲದ ಕಾನೂನು ಪಾಲನೆ ಮಾಡುವುದಿಲ್ಲ ಎಂದರೆ ಅದರ ಹಿಂದೇ ಯಾವುದೋ ಷಡ್ಯಂತ್ರ ಇದೆ ಎಂದೇ ಅರ್ಥ ಎಂದರು.

ಯಾರಿಗೆ ಪಡಿತರ ತರಲು ಆಗುವುದಿಲ್ಲವೋ ಅಂತಹವರಿಗೆ ಜಿಲ್ಲಾಡಳಿತವೇ ಪಡಿತರವನ್ನು ಮನೆ ಮನೆಗೆ ತಲುಪಿಸಲಿದೆ. ಈ ಸಂಬಂಧ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಪಡಿತರವನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಿದೆ. ಈ ಸಂಬಂಧ ಗ್ರಾಪಂ ಪಿಡಿಓ ಮತ್ತು ಕಾರ್ಯದರ್ಶಿಗೆ ಸೂಚನೆ ನೀಡಲಾಗುವುದು. ಜಿಲ್ಲೆಯಲ್ಲಿ ಉಚಿತವಾಗಿ ಹಾಲು ವಿತರಣಗೆ ಕ್ರಮಕೈಗೊಳ್ಳಲಾಗಿದೆ.
- ಶೋಭಾ ಕರಂದ್ಲಾಜೆ

ಪ್ರಧಾನಿ ದಿನವಿಡೀ ಕೆಲಸ ಮಾಡುತ್ತಿದ್ದಾರೆ. ದೇಶ ಮತ್ತು ಪ್ರಪಂಚದ ಕೂಗುಗಳಿಗೆ ಧ್ವನಿ ನೀಡುತ್ತಿದ್ದಾರೆ. ವಿದೇಶಗಳಿಗೆ ಅಗತ್ಯವಿರುವ ಔಷಧ ಕಳಿಸುವುದಕ್ಕೂ ಕ್ರಮಕೈಗೊಂಡಿದ್ದಾರೆ. ಎ.5 ರಂದು ವಿದ್ಯುತ್ ದೀಪಗಳನ್ನು ಆರಿಸಿ ದೀಪ ಹಚ್ಚಲು ಪ್ರಧಾನಿ ಕರೆ ನೀಡಿದ್ದಾರೆ. ದೀಪವು ನಮಗೆ ಮಾನಸಿಕ ಶಕ್ತಿ ಕೊಡುತ್ತದೆ. ಜನತೆ ಪ್ರಧಾನಿ ಕರೆ ನೀಡಿರುವ ಹಿನ್ನೆಲೆಯಲ್ಲಿ ದೀಪ ಹಚ್ಚಬೇಕು.
- ಶೋಭಾ ಕರಂದ್ಲಾಜೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News