ರಾಜ್ಯದಲ್ಲಿ ಒಂದೇ ದಿನ 16 ಕೊರೋನ ಪ್ರಕರಣಗಳು ದೃಢ: ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆ

Update: 2020-04-04 13:52 GMT

ಬೆಂಗಳೂರು, ಎ.4: ರಾಜ್ಯದಲ್ಲಿ ಅನಿರೀಕ್ಷಿತ ಪ್ರಮಾಣದಲ್ಲಿ ಶನಿವಾರ ಒಂದೇ ದಿನ 16 ಜನರಲ್ಲಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕು ದೃಢಪಟ್ಟವರ ಸಂಖ್ಯೆ 144 ಕ್ಕೆ ಏರಿಕೆಯಾಗಿದೆ. ಅದರಲ್ಲಿ 11 ಜನರು ಗುಣಮುಖರಾಗಿದ್ದರೆ, ನಾಲ್ಕು ಜನರು ಮರಣ ಹೊಂದಿದ್ದಾರೆ.

ಕೋವಿಡ್-19 ಪೀಡಿತ ಒಟ್ಟು 129 ವ್ಯಕ್ತಿಗಳಲ್ಲಿ 126 ರೋಗಿಗಳು ಗೊತ್ತುಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವು ಸ್ಥಿರವಾಗಿರುತ್ತದೆ. ಮೂರು ಜನರನ್ನು ಐಸಿಯುನಲ್ಲಿ ಆಕ್ಸಿಜನ್‍ನಲ್ಲಿ ಇಡಲಾಗಿದೆ.

ಕರ್ನಾಟಕದಲ್ಲಿ ಒಟ್ಟು ಪತ್ತೆಯಾದ ಪ್ರಕರಣಗಳ ಪೈಕಿ 8 ಸೋಂಕಿತರು ಕೇರಳದವರಾಗಿದ್ದು, ಅವರು ಕರ್ನಾಟಕದ ವಿಮಾನ ನಿಲ್ದಾಣಗಳಿಗೆ ಆಗಮಿಸಿದ್ದರು. ಎಲ್ಲರಿಗೂ ಕರ್ನಾಟಕದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಾಗೃತಿ ಕರ್ನಾಟಕ ಯೂಟ್ಯೂಬ್ ಚಾನೆಲ್ ಆರಂಭಿಸಲಾಗಿದೆ. ಕರ್ನಾಟಕದಲ್ಲಿ 9 ಆಸ್ಪತ್ರೆಗಳನ್ನು ಕೋವಿಡ್-19 ಚಿಕಿತ್ಸೆಗಾಗಿ ಗುರುತಿಸಿ ಸೀಮಿತಗೊಳಿಸಲಾಗಿದೆ. ನಿಯೋಜಿತ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹಾಗೂ ಶಂಕಿತರು ಕನಿಷ್ಠ 14 ದಿನಗಳ ಕಾಲ ಅಥವಾ ಪಾಸಿಟಿವ್ ಪ್ರಕರಣದ ಸರಣಿ ಮಾದರಿಗಳು ನೆಗೆಟಿವ್ ಎಂದು ಸಾಬೀತಾಗುವ ತನಕ ಅಥವಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಸಿಗುವ ತನಕ ಸಂಬಂಧಪಟ್ಟ ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ.

ಹೋಂ ಕ್ವಾರಂಟೇನ್ ಎನ್‍ಫೋರ್ಸ್‍ಮೆಂಟ್ ಸ್ಕ್ವಾಡ್‍ ತಂಡದವರು ಸಾರ್ವಜನಿಕರಿಂದ ಪಡೆದ ದೂರುಗಳ ಮೇರೆಗೆ 20 ವ್ಯಕ್ತಿಗಳನ್ನು ಸಂಸ್ಥೆಗಳಲ್ಲಿ ಕ್ವಾರಂಟೇನ್ ಮಾಡಿರುತ್ತಾರೆ. ರಾಜ್ಯದಲ್ಲಿ ಇದುವರೆಗೂ 21,842 ಸಂಖ್ಯೆಯ ಸಂಪರ್ಕಿತ ವ್ಯಕ್ತಿಗಳಿಗೆ ಆಪ್ತ ಸಮಾಲೋಚನೆ ಮಾಡುವ ಮೂಲಕ ರೋಗಿಗಳಿಗೆ ಸ್ಥೈರ್ಯ ತುಂಬಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾವಾರು ಸೋಂಕಿತರ ವಿವರ

ಬೆಂಗಳೂರು ನಗರ: 55

ಮೈಸೂರು: 28

ದಕ್ಷಿಣ ಕನ್ನಡ: 12

ಚಿಕ್ಕಬಳ್ಳಾಪುರ: 7

ಉತ್ತರ ಕನ್ನಡ: 8

ಕಲಬುರಗಿ: 5

ಬಳ್ಳಾರಿ: 5

ದಾವಣಗೆರೆ: 3

ಉಡುಪಿ: 3

ಧಾರಬಾಡ: 1

ಕೊಡಗು: 1

ತುಮಕೂರು: 1

ಬೀದರ್: 10

ಬಾಗಲಕೋಟೆ: 1

ಬೆಳಗಾವಿ : 1

ಬೆಂಗಳೂರು ಗ್ರಾಮಾಂತರ : 1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News