ವಲಸೆ ಕಾರ್ಮಿಕರ ಶಿಬಿರಗಳ ವಿವರ ನೀಡಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2020-04-04 15:43 GMT

ಬೆಂಗಳೂರು, ಎ.4: ರಾಜ್ಯದಲ್ಲಿ ವಲಸೆ ಹೋಗುವ ಕಾರ್ಮಿಕರ ವಸತಿಗಾಗಿ ಸ್ಥಾಪಿಸಲಾದ ಶಿಬಿರಗಳ ಎಲ್ಲ ವಿವರಗಳನ್ನು ಆಯಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ(ಡಿಎಲ್‍ಎಸ್‍ಎಎಸ್)ಗಳ ಕಾರ್ಯದರ್ಶಿಗಳಿಗೆ ಒದಗಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ವಲಸೆ ಕಾರ್ಮಿಕರ ಕುರಿತಂತೆ ಪಿಯುಸಿಎಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳು ಅಥವಾ ವಲಸೆ ಕಾರ್ಮಿಕರ ಪರವಾಗಿ ಸ್ವಯಂ ಸೇವಕರಾಗಿ ಕೆಲಸ ಮಾಡುವವರು ವಲಸೆ ಕಾರ್ಮಿಕರ ವಸತಿಗಾಗಿ ಸ್ಥಾಪಿಸಲಾದ ಶಿಬಿರಗಳಿಗೆ ಭೇಟಿ ನೀಡಿ, ಅವರಿಗೆ ನೀಡುತ್ತಿರುವ ಮೂಲಭೂತ ಸೌಲಭ್ಯಗಳ ಕುರಿತ ಮಾಹಿತಿಯನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗೆ ನೀಡಬೇಕು. ಮುಂದಿನ ವಿಚಾರಣೆ ವೇಳೆ ಈ ಎಲ್ಲ ಮಾಹಿತಿಯನ್ನು ಪ್ರಾಧಿಕಾರದ ಕಾರ್ಯದರ್ಶಿಗಳು ಕೋರ್ಟ್‍ಗೆ ಸಲ್ಲಿಸಬೇಕೆಂದು ನ್ಯಾಯಪೀಠವು ಸೂಚನೆ ನೀಡಿತು.

ಪಿಯುಸಿಎಲ್ ಪರ ವಾದಿಸಿದ ವಕೀಲರು, ರಾಜ್ಯದ 10,718 ವಲಸೆ ಕಾರ್ಮಿಕರು ತಮ್ಮ ಸಮಸ್ಯೆಗಳ ಕುರಿತು ಜಿಲ್ಲಾಡಳಿತಕ್ಕೆ ದೂರುಗಳನ್ನು ಸಲ್ಲಿಸಿದ್ದು, ಈ ಬಗ್ಗೆ ಜಿಲ್ಲಾಡಳಿವು ಕ್ರಮಗಳನ್ನು ಕೈಗೊಂಡಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ರಾಜ್ಯದಲ್ಲಿರುವ 10,718 ವಲಸೆ ಕಾರ್ಮಿಕರ ಸಮಸ್ಯೆ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಪಿಯುಸಿಎಲ್‍ನವರು ರಾಜ್ಯ ಸರಕಾರಕ್ಕೆ ನೀಡಬೇಕು. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ನಿರ್ದೇಶನ ನೀಡಿತು.

ರಾಜ್ಯದಲ್ಲಿ ವಲಸೆ ಕಾರ್ಮಿಕರ ಶಿಬಿರಗಳ ಸಂಖ್ಯೆಗಳ ವಿವರ

ಸರಕಾರ ತೆರೆದಿರುವ ಪರಿಹಾರ ಶಿಬಿರಗಳ ಸಂಖ್ಯೆ-193

ಎನ್‍ಜಿಒಗಳು ತೆರೆದಿರುವ ಶಿಬಿರಗಳು-7

ಸರಕಾರಿ ಶಿಬಿರಗಳಲ್ಲಿ ಇರುವ ವಲಸಿಗರ ಸಂಖ್ಯೆ-9,139

ಎನ್‍ಜಿಒ ಶಿಬಿರಗಳಲ್ಲಿ ಇರುವ ವಲಸಿಗರು-100

ಸರಕಾರಿ ಆಹಾರ ಶಿಬಿರಗಳ ಸಂಖ್ಯೆ-541

ಎನ್‍ಜಿಒ ಆಹಾರ ಶಿಬಿರಗಳ ಸಂಖ್ಯೆ-24

ಸರಕಾರ ವಲಸಿಗರಿಗೆ ನೀಡುತ್ತಿರುವ ಆಹಾರದ ಸಂಖ್ಯೆ-82,577

ಎನ್‍ಜಿಒಗಳು ವಲಸಿಗರಿಗೆ ನೀಡುತ್ತಿರುವ ಆಹಾರದ ಸಂಖ್ಯೆ-34,294

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News