ದೀಪದ ಬೆಳಕಿಗೆ ವೈರಸ್ ಸಾಯುವುದಾದರೆ ಲಾಕ್‍ಡೌನ್ ಏಕೆ ಬೇಕಿತ್ತು?: ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್

Update: 2020-04-04 15:53 GMT

ಮೈಸೂರು,ಎ.4: ತುತ್ತು ಅನ್ನಕ್ಕಾಗಿ ಕಷ್ಟಪಡುತ್ತಿರುವ ಬಡವರ ಹೊಟ್ಟೆ ತುಂಬಿಸುವ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸುವ ಬದಲು ದೀಪದ ಬೆಳಕು ಹಚ್ಚಿ ಎಂದು ಹೇಳಿರುವುದು ಮೂರ್ಖತನದ ಪರಮಾವಧಿ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ವಾಗ್ದಾಳಿ ನಡೆಸಿದ್ದಾರೆ.

ದೂರವಾಣಿ ಮೂಲಕ ಶನಿವಾರ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಅವರು, ಹಸಿದ ಹೊಟ್ಟೆಯಲ್ಲಿ ಬೆಳಕನ್ನು ಹಚ್ಚಿ ನಿಲ್ಲು ಎಂದರೆ ಎಲ್ಲಿ ಹಚ್ಚಲಾಗುತ್ತದೆ. ದೇಶದ ಸಾಕಷ್ಟು ಮಂದಿಯ ಮನೆಗಳಲ್ಲಿ ವಿದ್ಯುತ್ ದೀಪವೇ ಇಲ್ಲ. ಅವರ ಮನೆಯ ವಿದ್ಯುತ್ ದೀಪವನ್ನು ಹೇಗೆ ಆರಿಸಿಲು ಸಾಧ್ಯ ಎಂದು ಪ್ರಶ್ನಿಸಿದರು. ದೇಶದ ಜನರಿಗೆ ಬೇಕಿರುವುದು ಆಹಾರ ಮತ್ತು ಆರೋಗ್ಯ. ಅದರ ಕಡೆ ಗಮನಹರಿಸುವ ಬದಲು ಇವರು ಮಾಡಿದ ತಪ್ಪಿಗೆ ದೇಶದ ಜನರನ್ನು ಬಲಿಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ದೀಪ ಹಚ್ಚಿ ಶ್ರೀಮಂತರು ನಿಲ್ಲುತ್ತಾರೆಯೇ ಹೊರತು ತುತ್ತು ಊಟಕ್ಕೆ ಇಲ್ಲದ, ದಿನನಿತ್ಯ ಕೂಲಿ ಮಾಡಿ ಬದುಕುತಿದ್ದ ಜನ ನಿಲ್ಲಲು ಸಾಧ್ಯವಿಲ್ಲ. ಪ್ರಧಾನಿ ಇದನ್ನೆಲ್ಲಾ ಅರ್ಥಮಾಡಿಕೊಳ್ಳದೆ ಏಕಾಏಕಿ ನಿರ್ಧಾರವನ್ನು ಪ್ರಕಟಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನ ಸೋಂಕಿತರನ್ನು ರಕ್ಷಣೆ ಮಾಡುತ್ತಿರುವ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸೇವಕರು ಜೀವ ಭಯ ಬಿಟ್ಟು ಸೇವೆಯಲ್ಲಿ ತೊಡಗಿದ್ದಾರೆ. ಅವರ ರಕ್ಷಣೆಗೆ ಯಾವೊಂದು ಘೋಷಣೆಯನ್ನು ಮಾಡಿಲ್ಲ, ಬಡವರಿಗೆ ಮಾಸ್ಕ್ ಗಳು ಮತ್ತು ಇತರೆ ರಕ್ಷಣಾತ್ಮಕ ವಸ್ತುಗಳನ್ನು ನೀಡಿಲ್ಲ. ಅಂತಹ ಕಾರ್ಯಕ್ರಮಗಳನ್ನು ಮಾಡುವ ಬದಲು ದೀಪ ಹಚ್ಚಿ ಎಂದು ಮೌಢ್ಯವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ  ವ್ಯಕ್ತಪಡಿಸಿದರು. ದೇಶದ ರೈತರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ನೆರವಿಗೆ ನಿಲ್ಲಬೇಕಾದ ಪ್ರಧಾನಿ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಏಕ ಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದರು.

ಜ.9 ರಲ್ಲೇ ದೇಶಕ್ಕೆ ಕೊರೋನ ಬಂದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ದೇಶಕ್ಕೆ ಕೊರೋನ ಸಂಕಷ್ಟ ಎದುರಾಗಲಿದೆ, ಸರ್ಕಾರ ಮುಂಜಾಗ್ರತಾ ಕ್ರಮವನ್ನು ವಹಿಸಬೇಕು ಎಂದು ಹೇಳಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದ ಪ್ರಧಾನಿ ಇಂದು ದೇಶವನ್ನೇ ಬಲಿಕೊಡುವ ಮಟ್ಟಕ್ಕೆ ತಂದಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಕೊರೋನ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯ 30 ತಾಲೂಕುಗಳಲಲ್ಲೂ ನಮ್ಮ ಮಹಿಳಾ ಕಾರ್ಯಕರ್ತರು ದಿನದ ಇಪ್ಪತ್ತನಾಲ್ಕು ಗಂಟೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ದೀಪದ ಬೆಳಕಿನ ಶಾಖಕ್ಕೆ ಕೊರೋನ ವೈರಾಣು ಸಾಯುತ್ತದೆ ಎಂಬ ಶಾಸಕ ಎಸ್.ಎ.ರಾಮದಾಸ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ದೀಪದ ಬೆಳಕಿಗೆ ಕೊರೋನ ವೈರಾಣು ಸಾಯುವುದಾದರೆ ಲಾಕ್‍ಡೌನ್ ಏಕೆ ಬೇಕಿತ್ತು. ದೀಪ ಬೆಳಕಿನ ಸಂಕೇತ, ಅದರ ಶಾಖಕ್ಕೆ ವೈರಾಣುಗಳು ಸಾಯುತ್ತವೆ ಎಂದ ಮೇಲೆ ಲಾಕ್‍ಡೌನ್ ಮಾಡಿ ಜನರನ್ನು ಏಕೆ ಇಂತಹ ಸಂಕಷ್ಟದಲ್ಲಿಡಬೇಕು? ಒಬ್ಬ ಜವಾಬ್ದಾರಿಯುತ ಶಾಸಕ ಪ್ರಜ್ಞಾಪೂರ್ವಕವಾಗಿ ಮಾತನಾಡಬೇಕು, ಇಂದು ಸಂಸದರು ಮತ್ತು ಶಾಸಕರ ಜವಾಬ್ದಾರಿ ಮಹತ್ತರವಾಗಿದ್ದು, ಜನರ ಸಂಕಷ್ಟಕ್ಕೆ ನೆರವಾಗಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News