ದಿಲ್ಲಿಯಿಂದ ಬಂದ ಮೂವರ ವರದಿ ಪಾಸಿಟಿವ್, 30 ನೆಗೆಟಿವ್: ಬೆಳಗಾವಿ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

Update: 2020-04-04 16:47 GMT

ಬೆಳಗಾವಿ, ಎ.4: ದಿಲ್ಲಿಗೆ ಹೋಗಿ ಬಂದ 96 ಜನರ ಪೈಕಿ 80 ಜನರನ್ನು ಪತ್ತೆ ಹಚ್ಚಲಾಗಿದೆ. ಉಳಿದ 16 ಜನರು ಬೇರೆ ಬೇರೆ ರಾಜ್ಯಗಳಲ್ಲಿ ಇದ್ದಾರೆ. ಅವರ ಬಗ್ಗೆ ಆಯಾಯ ರಾಜ್ಯಕ್ಕೆ ಮಾಹಿತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಶನಿವಾರ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ 80 ಜನರ ಪೈಕಿ 33 ಜನರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. 3 ಜನರ ವರದಿ ಪಾಸಿಟಿವ್ ಬಂದಿದ್ದು, 30 ನೆಗೆಟಿವ್ ವರದಿ ಬಂದಿದೆ. ಎಲ್ಲ 80 ಜನರ ಆರೋಗ್ಯ ತಪಾಸಣೆ ಮಾಡಿ, ವಯಸ್ಸು ಮತ್ತಿತರ ಕಾರಣಕ್ಕೆ 33 ಜನರ ಮಾದರಿ ಕಳುಹಿಸಲಾಗಿತ್ತು ಎಂದು ಅವರು ಹೇಳಿದರು.

3 ಜನ ಪಾಸಿಟಿವ್ ಇರುವವರ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ, ಆರೋಗ್ಯ ತಪಾಸಣೆ ಮಾಡಿ, ಅವರ ಮೇಲೆ ನಿಗಾ ವಹಿಸಲಾಗಿದೆ. ಪಾಸಿಟಿವ್ ವರದಿಯಾಗಿರುವ ಹಿರೇಬಾಗೇವಾಡಿ, ಬೆಳಗುಮದಿ ಮತ್ತು ನಗರದ ಕ್ಯಾಂಪ್ ಪ್ರದೇಶದ ಕಸಾಯಿಗಲ್ಲಿಯನ್ನು ನಿಷೇಧಿತ ಪ್ರದೇಶ(ಕಂಟೈನ್ಮೆಂಟ್ ಝೋನ್) ಎಂದು ಘೋಷಿಸಿ, ಜನ ಸಂಚಾರ ಮತ್ತು ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಲಾಕ್‍ಡೌನ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮತ್ತಿತರ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ಸಮಪರ್ಕವಾಗಿ ನಿಯಂತ್ರಿಸಬೇಕು. ದಿನಬಳಕೆ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅನಾನುಕೂಲ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಪ್ರಕರಣ ಕಂಡು ಬಂದಿರುವುದರಿಂದ ಸೋಂಕು ಹರಡದಂತೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕಾರ್ಮಿಕರು, ಅಲೆಮಾರಿಗಳಿಗೆ ವಸತಿ ಮತ್ತು ಊಟೋಪಹಾರದ ವ್ಯವಸ್ಥೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಎಲ್ಲ ಬಗೆಯ ನೆರವನ್ನು ಸರಕಾರ ನೀಡಲಿದೆ. ದಿನಸಿ, ತರಕಾರಿ ಮತ್ತಿತರ ಅಗತ್ಯವಿರುವ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸಲು ಈಗಿರುವ ವ್ಯವಸ್ಥೆ ಮುಂದುವರೆಸುವಂತೆ ಜಗದೀಶ್ ಶೆಟ್ಟರ್ ತಿಳಿಸಿದರು.

ನಗರ ಸೇರಿದಂತೆ ಜಿಲ್ಲೆಯಲ್ಲಿ ಸಾಮಾನ್ಯ ವೈದ್ಯಕೀಯ ಸೇವೆಗೆ ಮುಂದಾಗುವ ಖಾಸಗಿ ವೈದ್ಯರು ಮತ್ತು ಕ್ಲಿನಿಕ್‍ಗಳಿಗೆ ಪಾಸ್ ಸೇರಿದಂತೆ ಅಗತ್ಯ ನೆರವು ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಶಾಸಕರಾದ ಅಭಯ್‍ ಪಾಟೀಲ್, ಅನಿಲ್ ಬೆನಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಸ್.ವಿ.ಮುನ್ಯಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News