ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಮುಖಕವಚ ಸಿದ್ಧಪಡಿಸಿದ ಧಾರವಾಡ ಐಐಟಿ

Update: 2020-04-04 17:17 GMT
ಸಾಂದರ್ಭಿಕ ಚಿತ್ರ

ಧಾರವಾಡ, ಎ.4: ಕೊರೋನ-19 ಸೋಂಕಿತ ವ್ಯಕ್ತಿಯ ಚಿಕಿತ್ಸೆ ನಡೆಸುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನೆರವಿಗೆ ಧಾವಿಸಿರುವ ಧಾರವಾಡ ಐಐಟಿ ಪ್ರಾಧ್ಯಾಪಕರು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗಾಗಿ 500ಕ್ಕೂ ಅಧಿಕ ಮುಖ ಕವಚಗಳನ್ನು ಸಿದ್ಧಪಡಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅನುಸಾರ ಸಿದ್ಧಪಡಿಸಿರುವ ಈ ಮುಖ ಕವಚವು ವೈಯಕ್ತಿಕ ರಕ್ಷಣಾ ಸಾಧನದ ಭಾಗವಾಗಿದೆ. ರೋಗಿಗಳು ಕೆಮ್ಮು ಅಥವಾ ಸೀನಿನ ಮೂಲಕ ಹೊರ ಹಾಕುವ ಉಸಿರಾಟದ ಹನಿಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯ ಕಾರ್ಯಕರ್ತರು ಇದನ್ನು ತಮ್ಮ ಕನ್ನಡಕ ಮತ್ತು ಮುಖಗವಸಿನ ಮೇಲೆ ಧರಿಸುವಂತದ್ದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಎಂ.ಎ.ಸೋಮಶೇಖರ್, ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕು ತಡೆಗೆ ಮುಖ ಕವಚಗಳ ಅವಶ್ಯಕತೆ ಇದೆ ಎಂದು ಜಿಲ್ಲಾಡಳಿತ ಮೂಲಕ ತಿಳಿಯಿತು. 3ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿ ಕೆಲವು ಮಾದರಿಗಳನ್ನು ತಯಾರಿಸಿ ಕಳುಹಿಸಲಾಗಿತ್ತು. ಅವುಗಳಲ್ಲಿ ಸೂಕ್ತವಾದದ್ದನ್ನು ವೈದ್ಯರು ಆಯ್ಕೆ ಮಾಡಿದರು ಎಂದು ತಿಳಿಸಿದರು.

ಲಭ್ಯವಿರುವ ವೈಯಕ್ತಿಕ ರಕ್ಷಣಾ ಸಾಧನ ಹೆಚ್ಚು ಗುಣಮಟ್ಟದ್ದಾಗಿರಲಿಲ್ಲ. ವೈರಾಣು ಸುಲಭವಾಗಿ ದೇಹ ಪ್ರವೇಶಿಸಲು ಸಾಧ್ಯವಿತ್ತು. ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡಾಗ ಈ ಸಾಧನದ ಅಭಿವೃದ್ಧಿಯಾಗಿದೆ. ಕಿಮ್ಸ್ ವೈದ್ಯರು ಈ ಸಾಧನದ ಗುಣಮಟ್ಟ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿಸಿದರು.

ಇದೇ ವಿಭಾಗದ ಪ್ರಾಧ್ಯಾಪಕ ಪ್ರೊ.ಸೂರ್ಯಪ್ರಕಾಶ್ ಅವರು ಪ್ರತಿಕ್ರಿಯಿಸಿ, ಸುಲಭವಾಗಿ ಲಭ್ಯವಾಗುವ ವಸ್ತುಗಳನ್ನೇ ಬಳಸಿ ಈ ಮುಖ ಕವಚಗಳನ್ನು ಸಿದ್ಧಪಡಿಸಲಾಗಿದೆ. ಬೆಳಗಾವಿ, ಕಲಬುರಗಿ ಜಿಲ್ಲೆ ಹಾಗೂ ಇತರ ಆಸ್ಪತ್ರೆಗಳಿಂದಲೂ ಇದಕ್ಕೆ ಬೇಡಿಕೆ ಬಂದಿದೆ. ಸದ್ಯ 500 ಮುಖ ಕವಚಗಳನ್ನು ಸಿದ್ಧಪಡಿಸಲಾಗಿದೆ. ಬೇಡಿಕೆ ಇರುವಷ್ಟು ಪೂರೈಕೆ ಸದ್ಯಕೆ ಸಾಧ್ಯವಿಲ್ಲ. ಈ ಮುಖ ಕವಚದ ಪ್ರತಿಯೊಂದು ಭಾಗದ ವಿನ್ಯಾಸವನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದ್ದು, ದೊಡ್ಡ ಮಟ್ಟದಲ್ಲಿ ತಯಾರಿಸಲು ಸಾಧ್ಯವಿದೆ. ಸ್ಥಳೀಯ ತಯಾರಕರು ಇದರ ವಿನ್ಯಾಸವನ್ನು ಕಲಿತು ಸಿದ್ಧಪಡಿಸಲು ಸಾಧ್ಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News