ಹುಬ್ಬಳ್ಳಿಯ ಮಸೀದಿಯಲ್ಲಿ ಶುಕ್ರವಾರದ ನಮಾಝ್‌ ಗೆ ಮುಸ್ಲಿಮರು ಸೇರಿರಲಿಲ್ಲ: ಸ್ಥಳೀಯರು

Update: 2020-04-04 17:18 GMT

ಹುಬ್ಬಳ್ಳಿ, ಎ.4: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಉಲ್ಲಂಘಿಸಿ ನಮಾಝ್ ನಿರ್ವಹಿಸಲು ಯತ್ನಿಸಲಾಗಿತ್ತು ಎನ್ನುವ ಆರೋಪಗಳನ್ನು ಸ್ಥಳೀಯರು ನಿರಾಕರಿಸಿದ್ದು, ಪೊಲೀಸರ ದೌರ್ಜನ್ಯವೇ ಕಲ್ಲುತೂರಾಟಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ.

ಲಾಕ್‌ ಡೌನ್ ಉಲ್ಲಂಘಿಸಿ ಶುಕ್ರವಾರದ ನಮಾಝ್‌ ಗಾಗಿ ಇಲ್ಲಿಯ ಮಸೀದಿಯಲ್ಲಿ ಸೇರಿದ್ದ ಮುಸ್ಲಿಮರು ತಮ್ಮ ಮೇಲೆ ಕಲ್ಲುತೂರಾಟ ನಡೆಸಿದ್ದರು ಎಂದು ಪೊಲೀಸರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರು, "ಪೊಲೀಸರು ಶೂಗಳನ್ನು ಧರಿಸಿಕೊಂಡೇ ಮಂಟೂರು ರಸ್ತೆಯ ಅರಳಿಕಟ್ಟಿ ಓಣಿಯಲ್ಲಿನ ಮಸೀದಿಗೆ ನುಗ್ಗಿದ್ದರು ಮತ್ತು ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಇದು ಮುಸ್ಲಿಮರು ಬಹುಸಂಖ್ಯಾತರಾಗಿರುವ ಆ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿತ್ತು ಎಂದು ದೂರಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕೆಲವು ಮಹಿಳೆಯರು ಸೇರಿದಂತೆ ಡಝನ್‌ ಗೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಮರು ಲಾಕ್‌ ಡೌನ್ ಉಲ್ಲಂಘಿಸಿದ್ದು ಅಹಿತಕರ ಘಟನೆಗೆ ಕಾರಣವಾಗಿತ್ತು ಎಂದು ಮಾಧ್ಯಮಗಳು ತುರ್ತು ತೀರ್ಪನ್ನೂ ನೀಡಿಬಿಟ್ಟಿವೆ.

ಮಸ್ಜಿದ್-ಎ-ಹಝರತ್ ಬಿಲಾಲ್‌ ನಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ನಡೆಸುತ್ತಿದ್ದ ಜನರನ್ನು ಪೊಲೀಸರು ತಡೆದಿದ್ದರಿಂದ ಕಲ್ಲು ತೂರಾಟ ನಡೆಸಲಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು 'ವಾರ್ತಾ ಭಾರತಿ'ಯೊಂದಿಗೆ ಮಾತನಾಡಿದ ಹಲವಾರು ಸ್ಥಳೀಯರು ತಿಳಿಸಿದರು.

ಕೊರೋನ ವೈರಸ್ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್‌ ಡೌನ್ ನಿಂದಾಗಿ ಸಾಮೂಹಿಕ ಪ್ರಾರ್ಥನೆಗಳನ್ನು ಸ್ಥಗಿತಗೊಳಿಸಿರುವುದರಿಂದ ಮುಅಝ್ಝಿನ್ ಮತ್ತು ಇಮಾಮ್‌ ಮಾತ್ರ ಮಸೀದಿಯಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. "ಮಸೀದಿಯಲ್ಲಿ ನಾನೊಬ್ಬನೇ ಇದ್ದು ಆಝಾನ್ ನೀಡುತ್ತಿದ್ದೆ. ಈ ವೇಳೆ ಶೂಗಳನ್ನು ಧರಿಸಿಕೊಂಡೇ ಒಳಗೆ ನುಗ್ಗಿದ ಪೊಲೀಸರು ನನ್ನನ್ನು ಥಳಿಸತೊಡಗಿದ್ದರು" ಎಂದು ಮಸೀದಿಯಲ್ಲಿ ಮುಅಝ್ಝಿನ್ ಆಗಿರುವ ಅಸ್ಲಂ ಆರೋಪಿಸಿದ್ದಾರೆ.

ಇಷ್ಟೆಲ್ಲ ಆಗುವಾಗ ಮಸೀದಿಯ ಅಧ್ಯಕ್ಷ ದಾವಲ್ ನದಾಫ್ ಮತ್ತು ಸ್ಥಳೀಯ ನಿವಾಸಿ ಬಾಷಾ ಮಸೀದಿಯ ಹೊರಗೆ ನಿಂತಿದ್ದರು. ಪೊಲೀಸರು ಅಸ್ಲಂ ಜೊತೆ ಅವರಿಬ್ಬರನ್ನೂ ಠಾಣೆಗೆ ಎಳೆದೊಯ್ದಿದ್ದರು ಎಂದು ಆರೋಪಿಸಲಾಗಿದೆ.

ಪೊಲೀಸರು ತನ್ನ ಕಣ್ಣೆದುರೇ ಈ ಮೂವರನ್ನು ಥಳಿಸಿ ಠಾಣೆಗೆ ಕರೆದೊಯ್ದಿದ್ದರು ಎಂದು ಪ್ರತ್ಯಕ್ಷದರ್ಶಿ ಶಾಯಿಸ್ತಾ ದೂರಿದ್ದಾರೆ. "ಅವರನ್ನು ಬಿಟ್ಟುಬಿಡುವಂತೆ ನಾನು ಮತ್ತು ನನ್ನ ಸೋದರಿ ಪೊಲೀಸರನ್ನು ಬೇಡಿಕೊಂಡಿದ್ದೆವು. ಆದರೆ ಪೊಲಿಸರು ನನ್ನ ಸೋದರಿಯ ಕೂದಲು ಹಿಡಿದೆಳೆದಿದ್ದರು ಮತ್ತು ಆಕೆಯನ್ನೂ ಠಾಣೆಗೆ ಒಯ್ದಿದ್ದರು" ಎಂದು ಶಾಯಿಸ್ತಾ ಹೇಳಿದರು.

ಘಟನೆಗೆ ತಾನೂ ಸಾಕ್ಷಿಯಾಗಿದ್ದೆ ಎಂದು ಹೇಳಿದ ಸ್ಥಳೀಯ ಕಾಂಗ್ರೆಸ್ ಮುಖಂಡ ಅಲ್ತಾಫ್ ಹಲ್ವೂರ್ ಅವರು, "ನಂತರ ಪೊಲೀಸರು ಬಂಧಿತ ಮೂವರಿಗೂ ಎಚ್ಚರಿಕೆ ನೀಡಿ ಮಸೀದಿಯಿಂದ ಸುಮಾರು 150 ಮೀ. ದೂರದಲ್ಲಿ ಅವರನ್ನು ಬಿಟ್ಟಿದ್ದರು. ಈ ವೇಳೆಗೆ ಹಲವಾರು ಮಹಿಳೆಯರೂ ಇದ್ದ ಕುಪಿತ ಗುಂಪೊಂದು ಅಲ್ಲಿ ಸೇರಿತ್ತು. ಮಹಿಳೆಯೋರ್ವಳು ಪೊಲೀಸರನ್ನು ನಿಂದಿಸಿದಾಗ ಓರ್ವ ಪೊಲೀಸ್ ಆಕೆಯತ್ತ ತನ್ನ ಲಾಠಿಯನ್ನು ಝಳಪಿಸಿದ್ದ. ಪೊಲೀಸರ ದೌರ್ಜನ್ಯಕ್ಕೆ ಪ್ರತಿಯಾಗಿ ಮಹಿಳೆಯರು ಮತ್ತು ಕೆಲವು ಯುವಕರು ಪೊಲೀಸರತ್ತ ಕಲ್ಲೂ ತೂರಾಟ ಆರಂಭಿಸಿದ್ದರು. ಇದರಿಂದಾಗಿ ಮಹಿಳೆಯರು ಸೇರಿದಂತೆ ಹಲವಾರು ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು" ಎಂದರು.

ಪೊಲೀಸ್ ಇಲಾಖೆ ಮತ್ತು ಅವರ ದೌರ್ಜನ್ಯಗಳಿಗೆ ಹೆದರಿರುವ ಹಲವಾರು ನಿವಾಸಿಗಳು ತಮ್ಮ ಮನೆಗಳಿಗೆ ಬೀಗ ಜಡಿದು ಬೇರೆಡೆಗೆ ತೆರಳಿದ್ದಾರೆ.

ಆದರೆ ಮಸೀದಿಯಲ್ಲಿ ತಾವು ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

"ಮುಅಝ್ಝಿನ್ ಆಝಾನ್ ನೀಡಲು ಆರಂಭಿಸಿದಾಗ ಜನರು ಲಾಕ್‌ ಡೌನ್ ಉಲ್ಲಂಘಿಸಿ ಅಲ್ಲಿ ಗುಂಪು ಸೇರತೊಡಗಿದ್ದರು. ಅಲ್ಲಿ ಸೇರದಂತೆ ಮತ್ತು ಮನೆಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುವಂತೆ ನಮ್ಮ ಅಧಿಕಾರಿಗಳು ತಿಳಿಸಿದಾಗ ಗುಂಪು ಅವರನ್ನು ಅವಾಚ್ಯವಾಗಿ ಬೈಯುತ್ತ ಕಲ್ಲುತೂರಾಟ ಆರಂಭಿಸಿತ್ತು" ಎಂದು ಹುಬ್ಬಳ್ಳಿ ನಗರ ಠಾಣಾ ಇನ್ಸ್‌ಪೆಕ್ಟರ್ ಎಂ.ಎಸ್.ಪಾಟೀಲ್ ಅವರು 'ವಾರ್ತಾ ಭಾರತಿ'ಗೆ  ಪ್ರತಿಕ್ರಿಯೆ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಐಪಿಸಿಯ ವಿವಿಧ ಕಲಮ್‌ಗಳಡಿ ಈವರೆಗೆ ಒಟ್ಟು 13 ಜನರನ್ನು ಬಂಧಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

Writer - ದಾವೂದ್ ಶೇಖ್

contributor

Editor - ದಾವೂದ್ ಶೇಖ್

contributor

Similar News