ಕೊರೋನ ಗೆದ್ದ ವೃದ್ಧ ದಂಪತಿಗೆ ಮನೆಯಲ್ಲೇ ಈಸ್ಟರ್ ಸಂಭ್ರಮ!

Update: 2020-04-07 04:26 GMT

ಕೊಟ್ಟಾಯಂ, ಎ.7: ಕೋವಿಡ್-19 ಸೋಂಕನ್ನು ಗೆದ್ದ ಇಲ್ಲಿನ ಥಾಮಸ್ (93) ಮತ್ತು ಅವರ ಪತ್ನಿ ಮರಿಯಮ್ಮ (88) ಮತ್ತೊಂದು ಈಸ್ಟರ್ ಹಬ್ಬವನ್ನು ಮನೆಯಲ್ಲೇ ಆಚರಿಸಿದರು.

ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊರೋನ ವೈರಸ್ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಈ ವೃದ್ಧ ದಂಪತಿಗೆ ಶುಕ್ರವಾರದ ವರೆಗೂ ಮನೆಯಲ್ಲೇ ಹಬ್ಬದ ಸಂಭ್ರಮ ಸವಿಯುತ್ತೇವೆ ಎಂಬ ಭವರಸೆ ಇರಲಿಲ್ಲ. ಆದರೆ ಕೊರೋನ ಸೋಂಕಿಗೆ ಒಳಗಾದ ಭಾರತದ ಅತ್ಯಂತ ವೃದ್ಧ ದಂಪತಿ, ಯಶಸ್ವಿಯಾಗಿ ಮಹಾಮಾರಿಯನ್ನು ಎದುರಿಸಿ ಎಪ್ರಿಲ್ 3ರಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದರು. ಈ ದಂಪತಿ ಒಂದು ತಿಂಗಳ ಜೀವನ್ಮರಣ ಹೋರಾಟದ ಬಳಿಕ ಸಂಪೂರ್ಣ ಗುಣಮುಖರಾಗಿ ಅಚ್ಚರಿ ಮೂಡಿಸಿದ್ದಾರೆ.

ಐಸಿಯುನಲ್ಲಿ ಏಕಾಂತದಲ್ಲಿ ಕಳೆದ ಆರಂಭಿಕ ದಿನಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಿದ್ದವು ಹಾಗೂ ಪ್ರತಿಯೊಂದೂ ವಿಚಿತ್ರ ಎನಿಸುತ್ತಿತ್ತು. ನನಗೆ ಎಚ್ಚರವಾದಾಗಲೆಲ್ಲ, ಮೈ ಕೊರೆಯುವ ಚಳಿ ವಾತಾವರಣ ಹಾಗೂ ಅಪರಿಚಿತ ವ್ಯಕ್ತಿಗಳಿಂದಾಗಿ ನಾನು ವಿದೇಶದಲ್ಲಿದ್ದೇನೆ ಎಂಬ ಭ್ರಮೆ ಮೂಡಿಸುತ್ತಿತ್ತು ಎಂದು ಥಾಮಸ್ ಹೇಳಿದರು.

ಫೆಬ್ರವರಿ 29ರಂದು ಇಟೆಲಿಯಿಂದ ವಾಪಸ್ಸಾದ ಮಗನ ಕುಟುಂಬದಿಂದ ಈ ಸೋಂಕು ವೃದ್ಧ ದಂಪತಿಗೆ ತಗುಲಿತ್ತು. ಕೆಲದಿನಗಳ ಬಳಿಕ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿತು. ಮಾರ್ಚ್ 8ರಂದು ಥಾಮಸ್ ಹಾಗೂ ಮರಿಯಮ್ಮ ಅವರಿಗೂ ಸೋಂಕು ದೃಢಪಟ್ಟಿತು. ಐಸಿಯುನಲ್ಲಿದ್ದರೂ ಮರಿಯಮ್ಮ ಅವರಿಗೆ ಮಕ್ಕಳು ಹಾಗೂ ಮೊಮ್ಮೊಕ್ಕಳದ್ದೇ ಚಿಂತೆಯಾಗಿತ್ತು. ಇಡೀ ರಾತ್ರಿಯನ್ನು ಅಳುತ್ತಾ ಕಳೆಯುತ್ತಿದ್ದೆ ಎಂದು ಮರಿಯಮ್ಮ ನೆನಪಿಕೊಳ್ಳುತ್ತಾರೆ.

ವೃದ್ಧಾಪ್ಯದ ಹಲವು ಸಮಸ್ಯೆಗಳೂ ಇದ್ದ ಇವರಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲುದಾಯಕವಾಗಿತ್ತು. ಈ ವೃದ್ಧ ದಂಪತಿಗೆ ಮಧುಮೇಹ, ಹೈಪರ್ ಟೆನ್ಷನ್ ಹಾಗೂ ಹೃದ್ರೋಗ ಸಮಸ್ಯೆ ಇತ್ತು. ಥಾಮಸ್ ದೇಹಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ವೆಂಟಿಲೇಟರ್ ವ್ಯವಸ್ಥೆಯಡಿ ಚಿಕಿತ್ಸೆ ನೀಡಲಾಯಿತು. ಈ ಅವಧಿಯಲ್ಲಿ ಅವರಿಗೆ ಹೃದಯಾಘಾತವೂ ಸಂಭವಿಸಿತ್ತು. ಈ ದಂಪತಿ ವಿವಾಹವಾಗಿ ಒಂದು ದಿನವೂ ಒಬ್ಬರನ್ನೊಬ್ಬರು ಬಿಟ್ಟಿರಲಿಲ್ಲ ಎಂಬ ಮಾಹಿತಿಯನ್ನು ಅವರಿಂದಲೇ ತಿಳಿದುಕೊಂಡ ಬಳಿಕ ವೈದ್ಯರು ಇಬ್ಬರನ್ನೂ ಒಂದೇ ಕೊಠಡಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾರಂಭಿಸಿದ್ದು ಪವಾಡ ಸದೃಶ ಚೇತರಿಕೆಗೆ ಕಾರಣವಾಯಿತು ಎಂದು ವೈದ್ಯರು ವಿವರಿಸುತ್ತಾರೆ.

ಇದೀಗ ಸಂಪೂರ್ಣ ಗುಣಮುಖರಾಗಿರುವ ದಂಪತಿ, ಪಟ್ಟಣಂತಿಟ್ಟದಲ್ಲಿರುವ ಮನೆಗೆ ವಾಪಸ್ಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News