ಕೋಲಾರ: ತಮ್ಮ ಶೆಡ್ ಮಾರಾಟ ಮಾಡಿ ಬಡವರಿಗೆ ದಿನಸಿ ತಲುಪಿಸುತ್ತಿರುವ ತಜಮ್ಮುಲ್ ಮತ್ತು ಮುಜಮ್ಮುಲ್ ಸೋದರರು

Update: 2020-04-07 07:31 GMT

ಕೋಲಾರ, ಎ.7: ವಲಸಿಗ ಹಾಗು ದಿನಗೂಲಿ ಕಾರ್ಮಿಕರ ಹಸಿವಿನ ಸಂಕಟ ನೋಡಲಾರದೆ ತಮ್ಮ ಜೀವನೋಪಾಯದ ಶೆಡ್ ಅನ್ನೇ ಮಾರಾಟ ಮಾಡಿ ಅದರಿಂದ ಬಂದ ದುಡ್ಡಿನ್ನು ಆಹಾರ ಒದಗಿಸಲು ಬಳಸುವ ಮೂಲಕ ಕೋಲಾರದ ಇಬ್ಬರು ಸೋದರರು ಎಲ್ಲರಿಗೂ ಮಾನವೀಯತೆಯ ಪಾಠ ಮಾದರಿ ಹಾಕಿಕೊಟ್ಟಿದ್ದಾರೆ. 

ಇಲ್ಲಿನ ಆಟೋ ನಗರದಲ್ಲಿರುವ 30x40 ಚದರ ಅಡಿ ವಿಸ್ತೀರ್ಣದ ತಮ್ಮ ಶೆಡ್ ಅನ್ನು ಮಾರಿ ಅದರಿಂದ ಬಂದ 20 ಲಕ್ಷ ರೂಪಾಯಿಯನ್ನು ಕಾರ್ಮಿಕರಿಗೆ ದಿನಸಿ ಸಾಮಾನುಗಳನ್ನು ತಲುಪಿಸಲು ಖರ್ಚು ಮಾಡುತ್ತಿದ್ದಾರೆ ಈ ಸೋದರರು. 

ತಜಮ್ಮುಲ್ ಪಾಷಾ ಮತ್ತು ಅವರ ಸೋದರ ಮುಜಮ್ಮುಲ್ ಪಾಷಾ ಅವರೇ ಈ ಮಾದರಿ ಸೋದರರು. ಜೀವನದಲ್ಲಿ ಬಹಳ ಕಷ್ಟಪಟ್ಟು ಉದ್ಯಮ ಕಟ್ಟಿ ಬೆಳೆಸಿದ ನಮಗೆ ಹಸಿವನ್ನು ತಣಿಸಲು ಎಷ್ಟು ದೊಡ್ಡ ತ್ಯಾಗವೂ ಸಾಲದು ಎಂಬುದನ್ನು ನಾವು ಚೆನ್ನಾಗಿ ಕಲಿತಿದ್ದೇವೆ ಎಂದು ಹೇಳುತ್ತಾರೆ. 

ನಾವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದುಡಿದು ಸ್ವಲ್ಪ ಆದಾಯ ಗಳಿಸಿದ್ದೇವೆ. ನಾವು ಸಮಾಜಕ್ಕಾಗಿ ತ್ಯಾಗ ಮಾಡಿದರೆ ಅಲ್ಲಾಹನು ನಮಗೆ ಅದಕ್ಕಿಂತ ದುಪ್ಪಟ್ಟು ನೀಡುತ್ತಾನೆ ಎಂದು ಕುರ್ ಆನ್ ನಲ್ಲಿ ಹೇಳಲಾಗಿದೆ. ಹಾಗಾಗಿ ನಾವು ಈಗ ಸಮಾಜಕ್ಕೆ ಮರಳಿ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದು ತಜಮ್ಮುಲ್ ಪಾಷಾ 'ಟೈಮ್ಸ್ ಆಫ್ ಇಂಡಿಯಾ' ಜೊತೆ ಮಾತಾಡುತ್ತಾ ಹೇಳಿದ್ದಾರೆ. 

ಲಾಕ್ ಡೌನ್ ಆದ ಕೂಡಲೇ ಈ ಸೋದರರು ಇಪ್ಪತ್ತು ಜನರ ತಂಡ ಮಾಡಿ ಜನರಿಗೆ ಹೇಗೆ ಸಹಾಯ ಮಾಡಬಹುದು ಎಂದು ಚರ್ಚಿಸಿದರು. ಬಳಿಕ ದಿನಸಿ ಸಾಮಾನು ನೀಡುವುದೇ ಉತ್ತಮ ಎಂಬ ತೀರ್ಮಾನಕ್ಕೆ ಬಂದು ಕೆಲಸ ಶುರು ಮಾಡಿದರು. ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ಅಗತ್ಯ ಇರುವವರಿಗೆ ದಿನಸಿ ತಲುಪಿಸಲಾಗುವುದು ಎಂದು ಸಂದೇಶ ತಲುಪಿಸಿದರು. 

ನರಸಾಪುರ ಕೈಗಾರಿಕಾ ವಲಯದಲ್ಲಿರುವ ರಾಜಸ್ತಾನಿ ಕಾರ್ಮಿಕರಿಂದ ಸಂದೇಶ ಬಂತು. ಚಿಕ್ಕಬಳ್ಳಾಪುರದ ಚಿಂತಾಮಣಿ ಸಮೀಪದ ಮೊಹಮ್ಮದ್ ಪುರ ಪ್ರದೇಶದಿಂದಲೂ ಮನವಿ ಬಂತು. ಈ ಎರಡೂ ಕಡೆಗಳಿಗೆ ಬೇಕಾದ ದಿನಸಿ ಸಾಮಾನುಗಳನ್ನು ಪ್ಯಾಕ್ ಮಾಡಿ ಅಲ್ಲಿಗೆ ತಲುಪಿಸಲಾಗಿದೆ ಎಂದು ಸೋದರರ ತಂಡದ ಸದಸ್ಯ ರಾಜೇಶ್ ಸಿಂಗ್ ಹೇಳಿದ್ದಾರೆ. ಈಗಾಗಲೇ 1,300 ಮಂದಿಗೆ ದಿನಸಿ ತಲುಪಿಸಿದ್ದು ಇನ್ನೂ 1,500 ಮಂದಿಗೆ ತಲುಪಿಸಲಾಗುವುದು ಎಂದು ರಾಜೇಶ್ ಸಿಂಗ್ ಹೇಳಿದ್ದಾರೆ. ಬೆಳಗ್ಗೆ ಬೇಗ ಕಾಲ್ ಮಾಡಿದವರಿಗೆ ಆ ದಿನದ ಆಹಾರವನ್ನೂ ನೀಡಲಾಗುತ್ತಿದೆ ಎಂದು ಅವರ ಮಾಹಿತಿ ನೀಡಿದ್ದಾರೆ. 

ಈ ಸೋದರರ ತಂಡದ ಸೇವಾ ಚಟುವಟಿಕೆ ನೋಡಿ ಈಗ ಇತರರೂ ಅವರ ಜೊತೆ ಕೈಜೋಡಿಸುತ್ತಿದ್ದಾರೆ ಎಂದು ಮುಜಮ್ಮುಲ್ ಪಾಷಾ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News